ರಿಯಾಲ್ಟಿ ಕ್ಷೇತ್ರಕ್ಕೆ ಪ್ಲಸ್ ಪಾಯಿಂಟ್ ಉತ್ತಮ ರಸ್ತೆ ಸಂಪರ್ಕ

| ಹೊಸಹಟ್ಟಿ ಕುಮಾರ ಬೆಂಗಳೂರು

ಉತ್ತಮ ರಸ್ತೆ ಸಂಪರ್ಕ ಒಂದು ಪ್ರದೇಶದ ಅಭಿವೃದ್ಧಿಗೆ ಕಾರಣವಾಗುವುದರ ಜತೆಗೆ ರಿಯಾಲ್ಟಿ ಕ್ಷೇತ್ರದ ಬೆಳವಣಿಗೆ ಮೇಲೂ ತೀವ್ರ ಪರಿಣಾಮ ಬೀರುತ್ತದೆ. ಖ್ಯಾತ ಆರ್ಥಿಕ ತಜ್ಞ ಜಾನ್ ಮೆನಾರ್ಡ್ ಕೇನ್ಸ್ ಇದನ್ನು ಹಿಂದೊಮ್ಮೆ ಹೇಳಿದ್ದರು. ಅಮೆರಿಕದಲ್ಲಿ ಸಂಭವಿಸಿದ್ದ ಮಹಾ ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಅವರು ಅಲ್ಲಿಯ ಅಧ್ಯಕ್ಷರಿಗೆ ಸೂಚನೆ ನೀಡುತ್ತಾ, ‘ಸಾಧ್ಯವಾದಷ್ಟು ಕಡೆ ರಸ್ತೆಗಳನ್ನು ನಿರ್ವಿುಸಿ, ತಾನಾಗಿಯೇ ಮುಗ್ಗಟ್ಟು ಕೊನೆಗಾಣುತ್ತದೆ’ ಎಂದಿದ್ದರು. ಅವರ ಸೂಚನೆಯಂತೆ ರಸ್ತೆಗಳನ್ನೂ ನಿರ್ವಿುಸಲಾಯಿತು. ನಂತರ ಇದು ಯಶಸ್ವಿ ಕೂಡ ಆಯಿತು. ರಸ್ತೆ ಅಭಿವೃದ್ಧಿ ಒಂದು ಪ್ರದೇಶದ ಆರ್ಥಿಕ ಸ್ಥಿತಿಯನ್ನೇ ಬದಲಿಸುತ್ತದೆ ಎನ್ನುವುದನ್ನು ಇದರಿಂದ ಮನಗಾಣಬಹುದು.

ರಾಜಧಾನಿ ಬೆಂಗಳೂರು ಮಹಾನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಂದ ರಿಯಾಲ್ಟಿ ಕ್ಷೇತ್ರ ವೇಗವಾಗಿ ಬೆಳವಣಿಗೆ ಕಾಣಲು ಸಾಧ್ಯವಾಗಿದೆ. ರಾಷ್ಟ್ರೀಯ ಹೆದ್ದಾರಿ 275, ಪೆರಿಫೆರಲ್ ವರ್ತಲ ರಸ್ತೆ, ಆನೆಕಲ್, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ದಾಬಸ್​ಪೇಟೆ, ಬಿಡದಿ ಹಾಗೂ ರಾಮನಗರ ಸಂರ್ಪಸುವ ರಾಜ್ಯ ಸರ್ಕಾರದ ನೂತನ ರಸ್ತೆ ಯೋಜನೆಯಿಂದ ಬೆಂಗಳೂರು ಹೊರ ವಲಯದಲ್ಲಿರುವ ಜಮೀನುಗಳಿಗೆ ಬೇಡಿಕೆ ವ್ಯಕ್ತವಾಗಿದೆ. ಭವಿಷ್ಯದಲ್ಲಿ ಬೆಂಗಳೂರು ನಗರದ ವ್ಯಾಪ್ತಿ ಇನ್ನೂ 50 ಕಿ. ಮೀ. ವಿಸ್ತರಿಸುವ ಸಾಧ್ಯತೆ ಇದೆ. ಮಾಗಡಿ, ತುಮಕೂರು, ರಾಮನಗರದ ಸಮೀಪ ಬೆಂಗಳೂರಿನ ಬೆಳವಣಿಗೆಯಾಗುವ ಲಕ್ಷಣಗಳು ಇವೆ. ಹೀಗಾಗಿ ರಿಯಾಲ್ಟಿ ಕ್ಷೇತ್ರಕ್ಕೆ ಬಂಡವಾಳ ಹೂಡುವವರೂ ಮುನ್ನುಗ್ಗಿ ಬರುತ್ತಿದ್ದಾರೆ.

ಹಸಿರು ವಲಯದಿಂದ ಹಳದಿ ವಲಯದಲ್ಲಿ ಪರಿವರ್ತನೆ

ಮೈಸೂರು ರಸ್ತೆ ತೀವ್ರವಾಗಿ ಅಭಿವೃದ್ಧಿಯಾಗುತ್ತಿರುವುದರಿಂದ ಸರ್ಕಾರ ಹಸಿರು ವಲಯವನ್ನು ಹಳದಿ ವಲಯವಾಗಿ ಪರಿವರ್ತಿಸಲು ಮುಂದಾಗಿದೆ. ರಾಜಕಾಲುವೆ, ಕೆರೆ ಕಟ್ಟೆಗಳನ್ನು ಹೊರತುಪಡಿಸಿ ಉಳಿದ ಕಂದಾಯ ಭೂಮಿಯನ್ನು ಹಳದಿ ವಲಯವನ್ನಾಗಿ ಮಾಡುವಂತೆ ನೂರಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಸರ್ಕಾರ ಹಳದಿ ವಲಯವನ್ನಾಗಿ ಘೋಷಣೆ ಮಾಡಲು ಸಿದ್ಧತೆ ಆರಂಭಿಸಿದೆ ಎಂದು ತಿಳಿದು ಬಂದಿದೆ.

ನಮ್ಮ ಮೆಟ್ರೋ ವಿಸ್ತರಣೆ

ಎರಡನೆಯ ಹಂತದಲ್ಲಿ ಕೆಂಗೇರಿಯವರೆಗೆ ವಿಸ್ತರಣೆ ಆಗಲಿರುವ ಮೆಟ್ರೋ ಮಾರ್ಗವನ್ನು ಚಳ್ಳಘಟ್ಟದವರೆಗೆ ಕೊಂಡೊಯ್ಯಲು ಸರ್ಕಾರ ತೀರ್ವನಿಸಿದೆ. ಇದು ಕಾರ್ಯಗತವಾದಲ್ಲಿ ಮೈಸೂರು ರಸ್ತೆಯಲ್ಲಿ ರಿಯಾಲ್ಟಿ ಕ್ಷೇತ್ರದ ದಿಕ್ಕೇ ಬದಲಾಗಲಿದೆ. 3ನೇ ಹಂತದಲ್ಲಿ 95ಕಿ.ಮೀ ಹೊಸ ಮೆಟ್ರೋ ಜಾಲ ರೂಪುಗೊಳ್ಳಲಿದೆ.

ಬೃಹತ್ ಹೂಡಿಕೆದಾರರ ಕಣ್ಣು

ಉತ್ತಮ ಪರಿಸರ ಹಾಗೂ ಅಂತರ್ಜಲ ಹೊಂದಿರುವ ಮೈಸೂರು ರಸ್ತೆ ಆಸುಪಾಸಿನ ಜಮೀನುಗಳ ಮೇಲೆ ಹಣ ಹೂಡಲು ದೈತ್ಯ ರಿಯಾಲ್ಟಿ ಕಂಪನಿಗಳು ಮುಂದಾಗಿವೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಉತ್ತಮ ರೈಲು ಮಾರ್ಗವನ್ನು ಹೊಂದಿರುವ ಮೈಸೂರು ರಸ್ತೆಯ ಜಮೀನಿಗೆ ಹಣ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಬೆಲೆ ದುಪ್ಪಟ್ಟಾಗಲಿದೆ ಎಂಬುದನ್ನು ಅರಿತು ಕಂಪನಿಗಳು ಜಮೀನು ಖರೀದಿಗೆ ಮುಂದಾಗಿವೆ. ಅಲ್ಲದೆ ವಿವಿಧ ಕೈಗಾರಿಕೆಗಳು ಸ್ಥಾಪನೆಗೆ ಜಮೀನು ಕೊಳ್ಳಲು ಮುಂದೆ ಬಂದಿವೆ. ಮೈಸೂರು ರಸ್ತೆಯಿಂದ ಇಲೆಕ್ಟ್ರಾನಿಕ್ ಸಿಟಿ, ಆನೇಕಲ್​ಗೆ ಸಂಪರ್ಕ ಕಲ್ಪಿಸುವ ಹಲವು ರಸ್ತೆಗಳು ನಿರ್ವಣವಾಗಿವೆ. ಅದೇ ರೀತಿ ಮಾಗಡಿ, ತುಮಕೂರು ಹಾಗೂ ಬಳ್ಳಾರಿ ರಸ್ತೆಗಳಿಗೂ ನೇರ ಸಂಪರ್ಕ ಕಲ್ಪಿಸುವ ರಸ್ತೆಗಳು ಇವೆ. ಇದರಿಂದ ಹೂಡಿಕೆದಾರರ ಕಣ್ಣು ಮೈಸೂರು ರಸ್ತೆ ಮೇಲೆ ಬಿದ್ದಿದೆ.

ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳು

ಮೈಸೂರು ರಸ್ತೆಯಲ್ಲಿ ವಿಶ್ವದರ್ಜೆಯ ಖಾಸಗಿ ಶಿಕ್ಷಣ ಸಂಸ್ಥೆಗಳು ಈಗಾಗಲೇ ತಲೆ ಎತ್ತಿವೆ. ಇನ್ನು ಕೆಲವು ಶಿಕ್ಷಣ ಸಂಸ್ಥೆಗಳು ಜಮೀನು ಖರೀದಿಗೆ ತುದಿಗಾಲಲ್ಲಿ ನಿಂತಿವೆ. ರಾಷ್ಟ್ರೀಯ ಹೆದ್ದಾರಿ ನಿರ್ವಣವಾಗುತ್ತಿರುವುದರಿಂದ ನಗರದ ಹೊರ ವಲಯದಲ್ಲಿ ಉತ್ತಮ ಪರಿಸರದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಹಲವರು ಮುಂದಾಗಿದ್ದಾರೆ. ಕ್ರೖೆಸ್ಟ್, ಜೈನ್ ಕಾಲೇಜು, ಸ್ವಾಮಿ ನಾರಾಯಣಗುರುಕುಲ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ನಿರ್ವಣಗೊಂಡಿವೆ. ಬಿಡದಿಯಲ್ಲಿ ಬೃಹತ್ ಕೈಗಾರಿಕೆಗಳು ತಲೆ ಎತ್ತಿವೆ. ಹೀಗಾಗಿ ಈ ಪ್ರದೇಶದ ಜಮೀನಿಗೆ ಬೇಡಿಕೆ ಅಧಿಕಗೊಳ್ಳುತ್ತಿದೆ.

Leave a Reply

Your email address will not be published. Required fields are marked *