ಮಲ್ಯಗೆ ನಡುಕ ಶುರು: ಸಾಲದ ಅಸಲು ಕಟ್ತೀನೆಂದು ಹೊಸ ಪ್ರಸ್ತಾಪ

ಲಂಡನ್: ಹತ್ತು ಸಾವಿರ ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡದೇ ವಿದೇಶಕ್ಕೆ ಪರಾರಿಯಾಗಿ ಭಾರತೀಯ ಬ್ಯಾಂಕುಗಳನ್ನು ಸತಾಯಿಸುತ್ತಿರುವ ವಿಜಯ್ ಮಲ್ಯ, ಈಗ ಸಾಲದ ಸಂಪೂರ್ಣ ಅಸಲನ್ನು ಪಾವತಿ ಮಾಡಲು ಸಿದ್ಧ ಎಂದಿದ್ದಾರೆ.

ಮಲ್ಯ ಗಡಿಪಾರು ಪ್ರಕರಣಕ್ಕೆ ಸಂಬಂಧಿಸಿ ಡಿ.10ರಂದು ಲಂಡನ್ ಕೋರ್ಟ್ ಆದೇಶ ನೀಡಲಿದೆ. ಜತೆಗೆ ಬಲಿಷ್ಠ ರಾಜತಾಂತ್ರಿಕ ನೀತಿ ಮೂಲಕ ಅಗಸ್ತಾವೆಸ್ಟ್​ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮಿಶೆಲ್​ನನ್ನು ಭಾರತ ವಶಕ್ಕೆ ಪಡೆದಿರುವುದು ಮಲ್ಯಗೆ ಭೀತಿ ಉಂಟುಮಾಡಿದೆ ಎಂದು ಹೇಳಲಾಗುತ್ತಿದೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಮಲ್ಯ, ಸಾಲದ ಅಸಲು ಮೊತ್ತ ಪಾವತಿಸಲು ತಯಾರಿದ್ದೇನೆ. ದಯವಿಟ್ಟು ಪರಿಗಣಿಸಿ ಎಂದು ಮನವಿ ಮಾಡಿದ್ದಾರೆ. ‘ನನ್ನ ಸಾಲದ ವಿವರ ಹಾಗೂ ಹಸ್ತಾಂತರ ಪ್ರಕರಣ ತಾಳೆ ಹಾಕಬೇಡಿ. ಹಣ ಮರುಪಾವತಿಸಲು ತಯಾರಿದ್ದೇನೆ. ಕೇಂದ್ರ ಸರ್ಕಾರ ಈ ಮನವಿಗೆ ಪ್ರತಿಕ್ರಿಯೆ ನೀಡಿಲ್ಲ. ಬ್ಯಾಂಕುಗಳ ಹಣ ಪಡೆದು ಓಡಿ ಹೋಗಿದ್ದೇನೆ ಎಂದು ಮಾಧ್ಯಮಗಳು ಹಾಗೂ ರಾಜಕಾರಣಿಗಳು ಹೇಳುತ್ತಿದ್ದಾರೆ. ಆದರೆ ಇವೆಲ್ಲವೂ ಸುಳ್ಳು. ಕರ್ನಾಟಕ ಹೈಕೋರ್ಟ್ ಮುಂದೆ ನಾನು ಮಂಡಿಸಿರುವ ಪರಿಹಾರ ಸೂತ್ರದ ಬಗ್ಗೆ ಏಕೆ ಯಾರೂ ಮಾತನಾಡುವುದಿಲ್ಲ? ಸುಮಾರು 3 ದಶಕ ದೇಶದ ಖಜಾನೆಗೆ ಸಾವಿರಾರು ಕೋಟಿ ರೂ. ತೆರಿಗೆ ಪಾವತಿಸಿದ್ದೇನೆ. ತೈಲ ಬೆಲೆ ಏರಿಕೆಯಾದ ಕಾರಣ ಕಿಂಗ್​ಫಿಶರ್ ಏರ್​ಲೈನ್ಸ್ ನಷ್ಟ ಅನುಭವಿಸಬೇಕಾಯಿತು. ಆಗ ಕಚ್ಚಾ ತೈಲ ಪ್ರತಿ ಬ್ಯಾರೆಲ್​ಗೆ 140 ಡಾಲರ್ ತಲುಪಿತ್ತು ಎಂದಿದ್ದಾರೆ.

ಕೇಂದ್ರ ಸರ್ಕಾರದ ನಿಲುವೇನು?

ಮಲ್ಯ ಪರಿಹಾರ ಸೂತ್ರವನ್ನು ಕೇಂದ್ರ ಹಣಕಾಸು ಇಲಾಖೆ ಹಾಗೂ ಬ್ಯಾಂಕ್​ಗಳು ಈಗಾಗಲೇ ತಿರಸ್ಕರಿಸಿವೆ. ಪರಿಹಾರ ಮಾರ್ಗಗಳಿಗೆ ಕೇಂದ್ರ ಮಣಿಯದ ಹಿನ್ನೆಲೆಯಲ್ಲಿ ದೇಶದಿಂದ ಮಲ್ಯ ಪರಾರಿಯಾಗಿದ್ದರು. ಇತ್ತೀಚೆಗೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಕೂಡ ಇದನ್ನು ಖಾತ್ರಿಪಡಿಸಿದ್ದರು. ಹೀಗಾಗಿ ಮಲ್ಯ ಕೊನೆಯ ಹಂತದ ಯತ್ನದಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎನ್ನಲಾಗಿದೆ.

ಮಲ್ಯ ಭವಿಷ್ಯ 10ಕ್ಕೆ ನಿರ್ಧಾರ

ಮಲ್ಯ ಭಾರತ ಹಸ್ತಾಂತರ ಕುರಿತು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಲಂಡನ್ ಕೋರ್ಟ್ ಅಂತಿಮಗೊಳಿಸಿದ್ದು, ಡಿ.10ರಂದು ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ. ಮಲ್ಯ ಹಸ್ತಾಂತರಕ್ಕೆ ಸಂಬಂಧಿಸಿ ಭಾರತದ ಜೈಲುಗಳ ಸ್ಥಿತಿಗತಿ ಬಗ್ಗೆ ಮಾತ್ರ ಲಂಡನ್ ಕೋರ್ಟ್ ಕಾಳಜಿ ಹೊಂದಿರುವಂತಿದೆ. ಹೀಗಾಗಿ ಮಲ್ಯ ಹಸ್ತಾಂತರ ಬಹುತೇಕ ಖಾತ್ರಿಯಾಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ರಾಜತಾಂತ್ರಿಕ ಮಾರ್ಗದಲ್ಲೂ ಯತ್ನ ನಡೆಸಿದೆ.