ಆತ್ಮಹತ್ಯೆ ಮಾಡ್ಕೋಬೇಡಿ ಪ್ಲೀಸ್

ಕೆ.ಆರ್.ಎಸ್.: ಕೈ ಮುಗಿದು ಮನವಿ ಮಾಡಿಕೊಳ್ಳುತ್ತೇನೆ, ಆತ್ಮಹತ್ಯೆ ಮಾಡಿಕೊಳ್ಳಬೇಡಿ. ದಯವಿಟ್ಟು ನೀವು ಆತ್ಮಹತ್ಯೆ ಮಾಡಿಕೊಂಡು ನಮಗೂ ನೋವು ಕೊಡಬೇಡಿ. ಉತ್ತಮ ಮಳೆಯಾಗಿದ್ದು, ತಮಿಳುನಾಡಿಗೆ ನೀರು ಹರಿಸಲಾಗಿದೆ. ಮುಂದಿನ ಸೆಪ್ಟೆಂಬರ್​ವರೆಗೆ ತಮಿಳುನಾಡಿಗೆ ನೀರು ಕೊಡಬೇಕಿಲ್ಲ. ಧೈರ್ಯವಾಗಿ ಭತ್ತ ಬೆಳೆಯಿರಿ…

-ಇದು ಮಂಡ್ಯ ಜಿಲ್ಲೆಯ ರೈತರಿಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾಡಿದ ವಿಶೇಷ ಮನವಿ. ಕೆಆರ್​ಎಸ್​ನಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಆರ್​ಎಸ್ ತುಂಬಿದ್ದು, ಜಿಲ್ಲೆಯ ರೈತರು ಧೈರ್ಯವಾಗಿ ಭತ್ತ ಬೆಳೆಯಬಹುದು. ಕಟ್ಟೆ ತುಂಬಿರುವುದರಿಂದ ಎರಡೂ ರಾಜ್ಯದ ನಡುವೆ ಸಮಸ್ಯೆಗಳಿಲ್ಲ. ಪ್ರಕೃತಿ ನಮ್ಮ ಪರವಾಗಿದೆ, ಆತಂಕ ಬೇಡ. ಈಗಾಗಲೇ ಎರಡು ರಾಜ್ಯದವರು ಕೇಂದ್ರ ಸರ್ಕಾರದ ಸಮ್ಮುಖದಲ್ಲಿ ಮಾತುಕತೆ ನಡೆಸಿದ್ದೇವೆ. ಈ ಸರ್ಕಾರದ ಬಗ್ಗೆ ಯಾರಿಗೂ ಅನುಮಾನ ಬೇಡ, ಇದು ಸ್ಥಿರ ಸರ್ಕಾರ. ಸಂಪೂರ್ಣ ಸಾಲಮನ್ನಾಕ್ಕೆ ಇನ್ನು ಸ್ವಲ್ಪ ಸಮಯ ಬೇಕಾಗುತ್ತದೆ. ಸರ್ಕಾರ ರಚಿಸಿ ಆರಾಮವಾಗಿದ್ದಾರೆ ಎಂಬುದು ಕೆಲವರ ಭಾವನೆ. ಆದರೆ ನನ್ನ ವೇದನೆ ಏನೆಂಬುದನ್ನು ಹೃದಯ ಬಿಚ್ಚಿ ತೋರಿಸಲು ಸಾಧ್ಯವಿಲ್ಲ. ನಿಮಗೆ ಏನೇ ಕಷ್ಟ ಇದ್ದರೂ ಅದನ್ನು ಬಗೆಹರಿಸಲು ಕಾರ್ಯಕ್ರಮ ರೂಪಿಸುವ ಜವಾಬ್ದಾರಿ ನಮ್ಮದು ಎಂದರು.

ಕುಮಾರಸ್ವಾಮಿ ಬಜೆಟ್ ಮಂಡ್ಯ ಜಿಲ್ಲೆಯ ಬಜೆಟ್ ಅಲ್ಲ. ಕೊಡಗಿನಲ್ಲಿ ಮಳೆಯಿಂದ ಆದ ಅನಾಹುತಕ್ಕೆ 100 ಕೋಟಿ ರೂ. ಕೊಟ್ಟಿದ್ದೇನೆ. ಇದನ್ನು ಅಲ್ಲಿನ ಬಿಜೆಪಿ ಶಾಸಕರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಕೊಡಗಿನ ತಲಕಾವೇರಿಗೆ ಹೋದರೆ ಅಧಿಕಾರ ಹೋಗುತ್ತದೆ ಎನ್ನುವುದಕ್ಕೆ ನಾನು ಹೆದರುವುದಿಲ್ಲ ಎಂದರು.

ಜಲಾಶಯಗಳಿಗೆ ಬಾಗಿನ ಅರ್ಪಣೆ: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯಕ್ಕೆ ಶುಕ್ರವಾರ ಮಧ್ಯಾಹ್ನ ಸಿಎಂ ಕುಮಾರಸ್ವಾಮಿ, ಸಂಪುಟ ಸಹೋದ್ಯೋಗಿಗಳೊಂದಿಗೆ ಬಾಗಿನ ಅರ್ಪಿಸಿದರು. ನಂತರ ಸಂಜೆ ಕೆಆರ್​ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಪತ್ನಿ ಅನಿತಾ ಕುಮಾರಸ್ವಾಮಿ, ಸಚಿವರಾದ ಡಿ.ಕೆ.ಶಿವಕುಮಾರ್, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಇತರರಿದ್ದರು.

ನಾನು ಎಲ್ಲಿಯವರೆಗೂ ಅಧಿಕಾರದಲ್ಲಿ ಇರಬೇಕೆಂದು ತಾಯಿ ಚಾಮುಂಡೇಶ್ವರಿ ನಿರ್ಧರಿಸುತ್ತಾಳೋ ಅಲ್ಲಿಯವರೆಗೂ ಅಧಿಕಾರದಲ್ಲಿರುತ್ತೇನೆ. ಕೊಡಗಿನ ದೇವತೆ, ಮೈಸೂರಿನ ಅಧಿದೇವತೆಯ ಆಶೀರ್ವಾದ ನನಗಿದೆ. ಅಧಿಕಾರ ಕಳೆದುಕೊಳ್ಳುವ ಆತಂಕವಿಲ್ಲ. ಕೆಲ ಮಾಧ್ಯಮಗಳು, ವ್ಯಕ್ತಿಗಳು ಸರ್ಕಾರವನ್ನು ಅಭದ್ರಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

| ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ


ಕಾವೇರಿ ವಿವಾದ ಸೃಷ್ಟಿಯಾಗದು

ಮೈಸೂರು/ತಲಕಾವೇರಿ: ಈ ಸಲ ಉತ್ತಮ ಮಳೆಯಾಗಿರುವುದರಿಂದ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ವಿವಾದ ಸೃಷ್ಟಿಯಾಗುವ ಪ್ರಮೇಯವೇ ಇಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು. ಚಾಮುಂಡಿಬೆಟ್ಟಕ್ಕೆ ಶುಕ್ರವಾರ ಭೇಟಿ ನೀಡಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಬರುವ ಸೆಪ್ಟೆಂಬರ್​ನಲ್ಲಿ ತಮಿಳುನಾಡಿಗೆ ಬಿಡಬೇಕಿದ್ದ ಅಷ್ಟು ನೀರನ್ನೂ ಈಗಾಗಲೇ ಹರಿಸಲಾಗಿದೆ. 12 ವರ್ಷಗಳ ಬಳಿಕ ಕೆಲ ಜಲಾಶಯಗಳಿಗೆ ನಾನೇ ಬಾಗಿನ ಅರ್ಪಣೆ ಮಾಡುತ್ತಿದ್ದೇನೆ. ಇದಕ್ಕೆಲ್ಲ ಚಾಮುಂಡೇಶ್ವರಿ ಆಶೀರ್ವಾದ ಕಾರಣ ಎಂದರು.

ರಾಜ್ಯದ 16 ವಿವಿಗಳ ನಾಮನಿರ್ದೇಶಿತ ಸದಸ್ಯರನ್ನು ಹಿಂಪಡೆದ ವಿಚಾರವಾಗಿ ಏನು ಪ್ರತಿಕ್ರಿಯೆ ಕೊಡಲ್ಲ. ರಾಜಕೀಯ ವಿಷಯವನ್ನೂ ಮಾತನಾಡಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಪತ್ರದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಮುಖ್ಯಮಂತ್ರಿ ಬಾಗಿನ

ಕಾವೇರಿ ಕಣಿವೆ ಜಿಲ್ಲೆಗಳಲ್ಲಿ ಎರಡು ದಿನ ಪ್ರವಾಸ ಕೈಗೊಂಡಿದ್ದ ಸಿಎಂ ಕುಮಾರಸ್ವಾಮಿ ಶುಕ್ರವಾರ ಕೊಡಗಿನ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ, ಕಬಿನಿ ಹಾಗೂ ಕೆಆರ್​ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಬೆಳಗ್ಗೆ 8.10ಕ್ಕೆ ಭಾಗಮಂಡಲಕ್ಕೆ ಆಗಮಿಸಿದ ಸಿಎಂ, ತ್ರಿವೇಣಿ ಸಂಗಮದಲ್ಲಿ ಜಲಪ್ರೋಕ್ಷಣೆ ಮಾಡಿಕೊಂಡರು. 9.20ಕ್ಕೆ ತಲಕಾವೇರಿಗೆ ಆಗಮಿಸಿ ಅಗಸ್ಱೇಶ್ವರ, ಗಣಪತಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಪೌಳಿಯಲ್ಲಿ ಸಂಕಲ್ಪ ಹಾಗೂ ಬ್ರಹ್ಮಕುಂಡಿಕೆಯಲ್ಲಿ ಮಂಗಳಾರತಿ ನೆರವೇರಿಸಿದರು. 19 ವರ್ಷಗಳ ಹಿಂದೆ ಜೆ.ಎಚ್.ಪಟೇಲ್ ಮುಖ್ಯಮಂತ್ರಿ ಆಗಿದ್ದಾಗ ಇಲ್ಲಿಗೆ ಭೇಟಿ ನೀಡಿದ್ದರು.