ಸಾಲ ಮರಳಿಸದವರ ಹೆಸರು ಬಹಿರಂಗಪಡಿಸಿ

ಬೆಂಗಳೂರು: ನಿಮ್ಮ ಕೈಯಲ್ಲಿ ಸ್ವಿಸ್ ಬ್ಯಾಂಕ್​ನಿಂದ ಕಪ್ಪು ಹಣ ತರಲು ಆಗದಿದ್ದರೆ ಕನಿಷ್ಠ ದೇಶದ ಬ್ಯಾಂಕ್​ಗಳಿಂದ 17 ಲಕ್ಷ ಕೋಟಿ ರೂ. ಸಾಲ ಪಡೆದು ತೀರಿಸದ ಶ್ರೀಮಂತರ ಹೆಸರಾದರೂ ಬಹಿರಂಗಪಡಿಸಿ. ಸಾಧ್ಯವಾಗದಿದ್ದರೆ ಅಧಿಕಾರ ತ್ಯಜಿಸಿರಿ ಎಂದು ಪ್ರಧಾನಿ ಮೋದಿ ವಿರುದ್ಧ ಮಾಜಿ ಸ್ಪೀಕರ್ ರಮೇಶ್​ಕುಮಾರ್ ಟೀಕಿಸಿದ್ದಾರೆ.

ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾ.ತ. ಚಿಕ್ಕಣ್ಣ ಸಂಪಾದಕತ್ವದ ಜನಮನ ಪ್ರಕಾಶನದ ‘ಸಿದ್ದರಾಮಯ್ಯ ಆಡಳಿತ ಅಂತರಂಗ ಬಹಿರಂಗ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು. ದೇಶದ ಅರ್ಥಿಕ ಪರಿಸ್ಥಿತಿ ಕುಸಿದಿದೆ. ಕೆಲವು ಕೈಗಾರಿಕೆಗಳು ಬಾಗಿಲು ಮುಚ್ಚಿದರೆ, ಮತ್ತೆ ಕೆಲವು ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿವೆ. ಕಪ್ಪುಹಣ ತರಲು ಮೋದಿಗೆ ಈವರೆಗೆ ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರ ಕೆಲಸ ಮಾಡುತ್ತಿದೆ. ಕನಿಷ್ಠ ಕಪ್ಪುಹಣ ಹಿಂತಿರುಗಿ ತರಲು ಸಾಧ್ಯವಾಗದಿದ್ದರೆ, ಸುಸ್ತಿದಾರರಾಗಿರುವ ಬಂಡವಾಳಶಾಹಿಗಳ ಹೆಸರನ್ನಾ ದರೂ ಬಹಿರಂಗಪಡಿಸಿ. ಅವರಿಂದ ಸಾಲ ವಸೂಲಿ ಮಾಡಿ ದೇಶದ ಆರ್ಥಿಕ ವ್ಯವಸ್ಥೆ ಸುಧಾರಿಸಿ. ಇದು ಸಾಧ್ಯವಾಗದಿದ್ದರೆ ನೀವು ಅಧಿಕಾರ ಬಿಟ್ಟು ಹೊರ ಬನ್ನಿ. ರಾಜ್ಯದಲ್ಲಿ ಆರ್ಥಿಕ ಶಿಸ್ತು ಕಾಯ್ದುಕೊಂಡ ಸಿದ್ದರಾಮಯ್ಯ ಅಧಿಕಾರ ನಡೆಸಲಿ ಎಂದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಜನರಲ್ಲಿರುವ ರಾಜಕೀಯ ಮನೋಭಾವ ಬದಲಾಗಬೇಕಿದೆ. ಉಪ ಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಜನರು ಬಿಸಿ ಮುಟ್ಟಿಸಬೇಕು ಎಂದರು.

ರಾಜ್ಯದ ನೆರೆ ಪ್ರದೇಶಗಳಿಗೆ ಕೇಂದ್ರ ಹಣಕಾಸು ಸಚಿವರು, ಗೃಹ ಸಚಿವರು ಬಂದು ಹೋದರು, ಕೇಂದ್ರದ ಅಧ್ಯಯನ ತಂಡ ಬಂದು ಹೋದರೂ ಒಂದು ಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ. ಜನ ಕಷ್ಟಪಡುತ್ತಿದ್ದರೆ ನಮಗೆ ಓಟು ಸಲೀಸಾಗಿ ಬರುತ್ತೆ ಎಂದು ಅವರು ಭಾವಿಸಿದಂತಿದೆ. ಮೋದಿ ಅಮೆರಿಕಕ್ಕೆ ಹೋಗುವ ಮೊದಲು ಇಲ್ಲಿಗೆ ಬರಬೇಕಿತ್ತು. ಬಿಎಸ್​ವೈ ಕೂಡ ಸುಮ್ಮನಾಗಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾಹಿತಿ ಡಾ.ಕೆ. ಮರುಳಸಿದ್ದಪ್ಪ, ಜನಮನ ಪ್ರಕಾಶನದ ಗೋಪಾಲಕೃಷ್ಣಸ್ವಾಮಿ ಇತರರು ಇದ್ದರು.

ನೀನೆ.. ಸಾಕಿದ ಗಿಣಿ ಕುಕ್ಕುತ್ತಿದೆ..

ಸಿದ್ದರಾಮಯ್ಯ ಅವರೇ ಸಾಕಿದ ಗಿಣಿ ಇಂದು ಹದ್ದಾಗಿ ಕುಕ್ಕುತ್ತಿದೆ ಎಂದು ಹೇಳುವ ಮೂಲಕ ಅನರ್ಹ ಶಾಸಕರ ಬಗ್ಗೆ ರಮೇಶ್​ಕುಮಾರ್ ವ್ಯಂಗ್ಯವಾಡಿದರು. ಸಿದ್ದರಾಮಯ್ಯ ನಮ್ಮ ಸಮುದಾಯದವರು ಎಂಬ ಕಾರಣಕ್ಕೆ ಬೈರತಿ ಬಸವರಾಜು, ಎಂಟಿಬಿ ನಾಗರಾಜು ಸಿಎಂ ಕಚೇರಿಗೆ ಬರುತ್ತಿದ್ದರು. ಸಿದ್ದರಾಮಯ್ಯ ಅವರಿಂದ ಕೆಲಸ ಮಾಡಿಸಿಕೊಂಡವರು ಹೊರಗೆ ಹೋಗುವಾಗ ಸಿಎಂ ಕಚೇರಿಯಲ್ಲಿ ಬರೀ ಕುರುಬರೇ ಇರ್ತಾರೆ ಎಂದು ಅಪಪ್ರಚಾರ ಮಾಡಿದರು. ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮಾತನಾಡುವವರು ಸಿಗಲಿಲ್ಲ. ಅನ್ನಭಾಗ್ಯ ಯೋಜನೆಯನ್ನು ಯಾರೂ ಸಮರ್ಥಿಸಿಕೊಳ್ಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *