ಪಿಎಲ್​ಡಿ ಬ್ಯಾಂಕ್​ಗೆ ಮುತ್ತಿಗೆ

ಭಟ್ಕಳ: ದಾಖಲೆ ತಿದ್ದಲು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಮತ್ತು ಚುನಾವಣಾಧಿಕಾರಿ ರಜಾ ದಿನದಲ್ಲೂ ರಾತ್ರಿವರೆಗೂ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಬ್ಯಾಂಕ್ ಸದಸ್ಯರು ಪಿಎಲ್​ಡಿ ಬ್ಯಾಂಕಿಗೆ ಮುತ್ತಿಗೆ ಹಾಕಿ ಪ್ರಕರಣವನ್ನು ಠಾಣೆಗೆ ಒಯ್ದಿದ್ದಾರೆ.

ಕಳೆದ ಭಾನುವಾರ ಭಟ್ಕಳದ ಪಿಎಲ್​ಡಿ ಬ್ಯಾಂಕ್​ನಲ್ಲಿ ಚುನಾವಣೆ ನಡೆದು 15 ಸದಸ್ಯರಲ್ಲಿ ಹಾಲಿ ಶಾಸಕರ 14 ಬೆಂಬಲಿಗರು ಜಯಶಾಲಿಯಾಗಿದ್ದರು. ಪರಾಜಿತ ಕೆಲವು ಅಭ್ಯರ್ಥಿಗಳು ಚುನಾವಣೆಯ ಕುರಿತಾದ ಕೆಲವೊಂದು ದಾಖಲೆಗಳನ್ನು ಚುನಾವಣಾಧಿಕಾರಿಗಳ ಬಳಿ ಕೇಳಿದ್ದರು. ಚುನಾವಣಾಧಿಕಾರಿ ಒಂದು ದಿನದ ಸಮಯಾವಕಾಶ ಕೇಳಿದ್ದರು ಎನ್ನಲಾಗಿದೆ. ಬುಧವಾರ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ಸಾರ್ವತ್ರಿಕ ರಜೆ ಇದ್ದರೂ ಚುನಾವಣಾಧಿಕಾರಿ ಹಾಗೂ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರು ದಾಖಲೆ ತಿದ್ದುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಸದಸ್ಯರು, ರಾತ್ರಿ ಬ್ಯಾಂಕಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಈ ಕುರಿತು ರಾಮಕೃಷ್ಣ ನಾಯ್ಕ ನಗರ ಠಾಣೆಗೆ ದೂರು ನೀಡಿ ಸೂಕ್ತ ಕ್ರಮಕ್ಕಾಗಿ ಆಗ್ರಹಸಿದ್ದಾರೆ. ವಿಠಲ್ ನಾಯ್ಕ, ವೆಂಕಟೇಶ ನಾಯ್ಕ, ದೇವಿದಾಸ ನಾಯ್ಕ, ರಮೇಶ ನಾಯ್ಕ, ಈಶ್ವರ ನಾಯ್ಕ ಬೈಲೂರು, ಸತೀಶ ನಾಯ್ಕ, ಜಿಮ್ ವೆಂಕಟೇಶ ನಾಯ್ಕ ಇತರೆ ಸ್ವತಂತ್ರ ಅಭ್ಯರ್ಥಿಗಳು ಹಾಜರಿದ್ದರು.

ಹಿರಿಯ ಅಧಿಕಾರಿಗಳ ಆದೇಶದಂತೆ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಗಾಗಿ ನೋಟಿಸ್ ನೀಡಲು ಬ್ಯಾಂಕ್ ಸಿಬ್ಬಂದಿಯೊಂದಿಗೆ ಬರಲಾಗಿತ್ತು. ಗುರುವಾರ ತುರ್ತು ಕಾರ್ಯದ ನಿಮಿತ್ತ ಕಾರವಾರಕ್ಕೆ ತೆರಳುವ ಕಾರ್ಯವಿದ್ದುದರಿಂದ ಬುಧವಾರವೇ ಇದರ ತಯಾರಿ ನಡೆಸುವುದು ಅನಿವಾರ್ಯವಾಗಿತ್ತು. | ಭಾಸ್ಕರ ನಾಯ್ಕ, ಚುನಾವಣಾಧಿಕಾರಿ. ಪಿಎಲ್​ಡಿ ಬ್ಯಾಂಕ್ ಭಟ್ಕಳ