ಕ್ಲಬ್ ಮಟ್ಟದಲೂ ಆಟಗಾರರು ಆಯ್ಕೆಯಾಗಬೇಕು

ವಿರಾಜಪೇಟೆ: ರಾಷ್ಟ್ರೀಯ ಹಾಕಿ ತಂಡಕ್ಕೆ ಕ್ರೀಡಾ ತರಬೇತಿ ಶಾಲೆಗಳಿಂದ ಆಯ್ಕೆ ಪ್ರಕ್ರಿಯೆ ಬದಲು ಕ್ಲಬ್ ಮಟ್ಟದಲೂ ಆಟಗಾರರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವಂತಾಗಬೇಕು ಎಂದು ಮಾಜಿ ಒಲಂಪಿಯನ್ ಡಾ.ಅಂಜಪರವಂಡ ಸುಬ್ಬಯ್ಯ ಹೇಳಿದರು.

ಹಾಕಿ ಕೂರ್ಗ್ ಸಂಸ್ಥೆ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ಆಯೋಜಿಸಿದ್ದ ಕೊಡವ ಹಾಕಿ ಚಾಂಪಿಯನ್ ಶಿಪ್ ಲೀಗ್ ಹಾಕಿ ಪಂದ್ಯದಲ್ಲಿ ಮಾತನಾಡಿದ ಅವರು, ಪ್ರಸ್ತುತ ಕೊಡಗಿನ ಐದು ಹಾಕಿ ಆಟಗಾರರು ಭಾರತ ತಂಡದ ಹಿರಿಯರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಮಹಿಳಾ ತಂಡದಲ್ಲೂ ಜಿಲ್ಲೆಯ ಒಬ್ಬ ಮಹಿಳೆ ತರಬೇತಿ ಪಡೆಯುತ್ತಿದ್ದಾರೆ. ಕ್ರೀಡೆಗಳಿಗೆ ಪಾಲಕರು ಪ್ರೋತ್ಸಾಹ ಹಾಗೂ ಉತ್ತೇಜನ ನೀಡಬೇಕು. ಹಾಕಿ ಕೂರ್ಗ್ ಸಂಸ್ಥೆಯ ಮೂಲಕ ಹಾಕಿ ಪಂದ್ಯಾವಳಿಗಳನ್ನು ನಡೆಸುವುದರಿಂದ ಯುವ ಆಟಗಾರರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಹೇಳಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕಡ್ರತಂಡ ಸುಬ್ಬಯ್ಯ ಮಾತನಾಡಿ, ಜಿಲ್ಲೆಯಲ್ಲಿ ವಿಕೋಪ ಸಂಭವಿಸಿದ ನಂತರ ಈ ವರ್ಷ ಹಾಕಿ ಪಂದ್ಯಾಟ ನಡೆಯುವುದಿಲ್ಲ ಎಂಬ ಜಿನ್ಞಾಸೆ ಇತ್ತು. ಆದರೆ ಹಾಕಿ ಕೊಡಗು ಸಂಸ್ಥೆ ಹಾಕಿ ಪಂದ್ಯಾಟಗಳನ್ನು ನಡೆಸಿ ಆಟಗಾರರಿಗೆ ಒಂದು ಹೊಸ ಹುರುಪನ್ನು ತಂದೊಗಿಸಿದೆ. ಆಟಗಾರರು ಆಟದ ನಿಯಮಗಳನ್ನು ಅರಿತು ತೀರ್ಪುಗಾರರೊಂದಿಗೆ ಸೌಜನ್ಯವಾಗಿ ವರ್ತಿಸಿ ಉತ್ತಮ ಆಟ ಪ್ರದರ್ಶಿಸಬೇಕು ಎಂದು ಹೇಳಿದರು.

ಹಾಕಿ ಕೂರ್ಗ್ ಸಂಸ್ಥೆಯ ಸಂಚಾಲಕ ಮೊಳ್ಳೆರ ಸುಬ್ಬಯ್ಯ ಮಾತನಾಡಿ, ಆಟದಲ್ಲಿ ಸೋಲು ಗೆಲವು ಸಾಮಾನ್ಯ. ಆದರೆ ಎಲ್ಲರ ಪಾಲ್ಗೊಳ್ಳುವಿಕೆ ಮುಖ್ಯ. ಎಲ್ಲರೂ ಕ್ರೀಡಾ ಸ್ಪೂರ್ತಿ ಮೆರೆಯಬೇಕು. ಒಂದು ತಂಡ ಉತ್ತಮವಾಗಿ ಆಡಬೇಕಾದರೆ ತಂಡದ ನಾಯಕನ ಪಾತ್ರ ಮುಖ್ಯವಾಗಿರುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಹಾಕಿ ಕೂರ್ಗ್ ಸಂಸ್ಥೆಯ ಉಪಾಧ್ಯಕ್ಷ ಮೇಕೇರಿರ ರವಿ ಪೆವ್ಮ್ಮಯ್ಯ, ಕ್ರೀಡಾಕೂಟದ ಸಂಚಾಲಕ ಬಲ್ಯಾಟಂಡ ಪಾರ್ಥಚಂಗಪ್ಪ, ಕಾರ್ಯದರ್ಶಿ ಬುಟ್ಟಿಯಂಡ ಚಂಗಪ್ಪ, ಕಾಕೊಟುಪರಂಬು ಸ್ಪೋಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಮೇವಡ ಚಿಣ್ಣಪ್ಪ, ಕಾಫಿ ಬೆಳೆಗಾರ ಮುದ್ದುರ ತಿವ್ಮ್ಮಯ್ಯ ಉಪಸ್ಥಿತರಿದ್ದರು.