ಆಸ್ಟ್ರೇಲಿಯಾ-ಭಾರತ ನಡುವಿನ ಸಿಡ್ನಿ ಟೆಸ್ಟ್​ಗೆ ಅಡ್ಡಿಯಾದ ಮಂದ ಬೆಳಕು

ಸಿಡ್ನಿ: ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ಸಿಡ್ನಿಯಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಕೊನೇ ಟೆಸ್ಟ್​ನ ಮೂರನೇ ದಿನದಾಟ ಮಂದ ಬೆಳಕಿನ ಹಿನ್ನೆಲೆಯಲ್ಲಿ ರದ್ದಾಗಿದೆ.

ಸದ್ಯ ಆಸ್ಟ್ರೇಲಿಯಾ 83.3 ಓವರ್​ಗಳಲ್ಲಿ ಆರು ವಿಕೆಟ್​ಗಳ ನಷ್ಟದೊಂದಿಗೆ 236 ರನ್​ ಗಳಿಸಿದೆ.

ಪಂದ್ಯದ ಎರಡನೇ ದಿನ ಬ್ಯಾಟಿಂಗ್​ ಆರಂಭಿಸಿರುವ ಆಸೀಸ್​ ತಂಡ ಈಗಾಗಲೇ ತನ್ನ ಪ್ರಮುಖ ಬ್ಯಾಟ್ಸ್​ಮನ್​ಗಳನ್ನು ಕಳೆದುಕೊಂಡು ಸಣ್ಣ ಮೊತ್ತ ಕಲೆ ಹಾಕಿದ್ದು, ಫಾಲೋಆನ್​ ಅನುಭವಿಸಬಹುದಾದ ಆತಂಕದಲ್ಲಿದೆ.


ಶುಕ್ರವಾರ ಪಂದ್ಯ ಕೊನೆಗೊಳ್ಳುವುದಕ್ಕೂ ಸ್ವಲ್ಪ ಮೊದಲು ಬ್ಯಾಟಿಂಗ್​ ಆರಂಭಿಸಿದ್ದ ಆಸ್ಟ್ರೇಲಿಯಾ ತಂಡ 10 ಓವರ್​ಗಳಲ್ಲಿ ವಿಕೆಟ್​ ನಷ್ಟವಿಲ್ಲದೇ 28ರನ್​ ಗಳಿಸಿತ್ತು. ಇಂದಿನ ಆಟದಲ್ಲಿ ಒಟ್ಟಾರೆ 236 ರನ್​ ಗಳಿಸಿದೆ. ಸದ್ಯ ಪಿಎಸ್​ಪಿ ಹ್ಯಾಂಡ್ಸ್​ಕೋಮ್​ 28 ರನ್​, ಕ್ಯುಮಿನ್ಸ್​ 25ರನ್​ ಗಳಿಸಿ ವಿಕೆಟ್​ ಉಳಿಸಿಕೊಂಡಿದ್ದಾರೆ. ತಂಡದ ಪರ ಹ್ಯಾರಿಸ್ 78 ರನ್​ ಗಳಿಸಿದ್ದು ಬಿಟ್ಟರೆ ಮತ್ತ್ಯಾರೂ ಉತ್ತಮ ಆಟವಾಡಲಿಲ್ಲ.

ಇತ್ತ ಭಾರತದ ಪರ ಬೌಲಿಂಗ್​ನಲ್ಲಿ ಕುಲದೀಪ್​ ಯಾದವ್​ ಮೂರು ವಿಕೆಟ್​ ಕಸಿದು ಮಿಂಚಿದರು. ಜಡೆಜಾ ಎರಡು ವಿಕೆಟ್​ ಮತ್ತು ಮೊಹಮದ್​ ಶಮಿ 1 ವಿಕೆಟ್​ ಗಳಿಸಿದ್ದಾರೆ.

ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್​ ಸರಣಿ ಗೆಲ್ಲುವ ಮಹದಾಸೆಯಲ್ಲಿರುವ ಭಾರತ ತಂಡ ಈ ಪಂದ್ಯದಲ್ಲಿ ತನ್ನ ಪರವಾದ ಫಲಿತಾಂಶ ನಿರೀಕ್ಷೆ ಮಾಡುತ್ತಿದೆ. ಆದರೆ, ಮಂದ ಬೆಳಕಿನ ಕಾಟ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಣ್ಣದೊಂದು ಆತಂಕವೂ ಸದ್ಯ ಎದುರಾಗಿದೆ.