ಪ್ಲಾಸ್ಟಿಕ್ ತ್ಯಾಜ್ಯ ನಂದಿನಿ ಒಡಲಿಗೆ

ಲೋಕೇಶ್ ಸುರತ್ಕಲ್
ಸುರತ್ಕಲ್ ಆಸುಪಾಸು ಪ್ಲಾಸ್ಟಿಕ್ ತ್ಯಾಜ್ಯ ಎಸೆತದಿಂದ ಕೃತಕ ನೆರೆ ಸಮಸ್ಯೆ ಇತ್ಯಾದಿ ಆಗಾಗ ಬೆಳಕಿಗೆ ಬರುತ್ತಿದೆ. ಇದರಿಂದ ನೆರೆ ನೀರು ಸರಾಗವಾಗಿ ಹರಿದು ಹೋಗದೆ ಅಕ್ಕಪಕ್ಕದ ನಿವಾಸಿಗಳಿಗೆ ಅನಾರೋಗ್ಯ ಸಮಸ್ಯೆ, ಈ ನೀರು ಹರಿಯುವ ಪ್ರದೇಶದ ಕೃಷಿಕರಿಗೆ ಆರೋಗ್ಯ ಸಂಬಂಧಿ ಗಂಭೀರ ಸಮಸ್ಯೆಗಳೂ ಕಾಡುತ್ತಿವೆ.

ಸುರತ್ಕಲ್ ಪ್ರದೇಶದ ಕಟ್ಲ ಬಳಿಯಿಂದ ಸಾಗುವ ಪ್ರಮುಖ ಕೃಷಿ ತೋಡು ಮುಕ್ಕ ಬಳಿ ನಂದಿನಿ ನದಿ ಸೇರುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯಗಳೂ ಇಲ್ಲಿ ನದಿ ಒಡಲು ಸೇರುವುತ್ತಿದೆ. ಪಡ್ರೆ ಬಳಿ ಪ್ರತಿ ವರ್ಷ ತೋಡಿನಲ್ಲಿ ಪ್ಲಾಸ್ಟಿಕ್ ಬಾಟಲಿ ಇತ್ಯಾದಿ ಸಂಗ್ರಹವಾಗುತ್ತಿದೆ. ಸುರತ್ಕಲ್ ಭಾಗದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಕೃಷಿ ಕಾರ್ಯಕ್ಕೆ ಗದ್ದೆಗೆ ಇಳಿಯುವುದು ಕಷ್ಟವಾಗಿದೆ. ಪ್ಲಾಸ್ಟಿಕ್ ವಸ್ತುಗಳು ದನಗಳ ಹೊಟ್ಡೆ ಸೇರಿ ಕಾಯಿಲೆಗೆ ಕಾರಣವಾಗುತ್ತಿವೆ. ಪ್ರತಿವರ್ಷ ಈ ಭಾಗದಲ್ಲಿ ಕೃತಕ ನೆರೆ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಪಡ್ರೆ ನಿವಾಸಿ ರವಿ ದೂರಿದ್ದಾರೆ.
ಕಂಡಕಂಡಲ್ಲಿ ಪ್ಲಾಸ್ಟಿಕ್ ಬಾಟಲಿ ಇತ್ಯಾದಿ ಎಸೆತದಿಂದ ಹೀಗಾಗಿದೆ. ಈ ತ್ಯಾಜ್ಯ, ಬಾಟಲಿ ಇತ್ಯಾದಿ ತೆಗೆಯಲು ಜೆಸಿಬಿ ಬಳಸಲಾಗುವುದು ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾರಕ್ಕೆ 50-60 ಗೋಣಿ ಪ್ಲಾಸ್ಟಿಕ್ ಬಾಟಲಿ ಸಂಗ್ರಹ: ರಿಸೈಕಲ್ ನಡೆಸಬಹುದಾದ ಪ್ಲಾಸ್ಟಿಕ್ ವಸ್ತು ಇತ್ಯಾದಿ ಕಂಡ ಕಂಡಲ್ಲಿ ಬಿಸಾಡುವುದು ಸರಿಯಲ್ಲ. ಇದರಿಂದ ಆದಾಯ ಗಳಿಕೆ ಸಾಧ್ಯ. ಅದನ್ನು ಪಾಲಿಕೆಯ ಕಸ ಸಂಗ್ರಹ ಗುತ್ತಿಗೆದಾರರು ಸಂಗ್ರಹಿಸಿ ಬೇರ್ಪಡಿಸುವ ವ್ಯವಸ್ಥೆಯಿದೆ. ಸುರತ್ಕಲ್ ಬಳಿ ಕಳೆದ 35 ವಾರಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಎಂಆರ್‌ಪಿಎಲ್, ರಾಮಕೃಷ್ಣ ಮಿಷನ್, ಸ್ವಚ್ಛ ಸುರತ್ಕಲ್ ಆಂದೋಲನ ಮೂಲಕ ಪ್ರತಿವಾರ 50-60 ಗೋಣಿ ಚೀಲಗಳಷ್ಟು ಪ್ಲಾಸ್ಟಿಕ್ ವಸ್ತು ಬಾಟಲಿ ಇತ್ಯಾದಿ ಸಂಗ್ರಹಿಸಿದ್ದೇವೆ. ಮನೆಯಲ್ಲಿ ಹಸಿ ತ್ಯಾಜ್ಯ, ಒಣ ತ್ಯಾಜ್ಯ ಬೇರ್ಪಡಿಸಿ ಸಂಸ್ಕರಿಸಲು ಮಡಕೆ ಗೊಬ್ಬರ ತಯಾರಿ ಯೋಜನೆ ರೂಪಿಸಲಾಗಿದೆ. ನಾಗರಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಸುರತ್ಕಲ್ ನಾಗರಿಕ ಸಲಹಾ ಸಮಿತಿ ಸಂಚಾಲಕ ಪ್ರೊ.ಕೆ.ರಾಜ್ ಮೋಹನ್ ರಾವ್, ಸ್ವಚ್ಛ ಸುರತ್ಕಲ್ ಅಭಿಯಾನ ಸಂಚಾಲಕ ಸತೀಶ್ ಸದಾನಂದ ತಿಳಿಸಿದ್ದಾರೆ.

ಸುರತ್ಕಲ್‌ವರೆಗಿನ ಮಂಗಳೂರು ಮಹಾನಗರಪಾಲಿಕೆ ಪ್ರದೇಶವನ್ನು ಪ್ರವಾಸೋದ್ಯಮ ಅಭಿವೃದ್ಧಿ ಉದ್ದೇಶಕ್ಕಾಗಿ ಹಲವು ವರ್ಷ ಹಿಂದೆಯೇ ಪ್ಲಾಸ್ಟಿಕ್ ಮುಕ್ತ ವಲಯ ಎಂದು ದ.ಕ. ಜಿಲ್ಲಾಡಳಿತ ಪ್ರಕಟಿಸಿದೆ. ಈ ಬಗ್ಗೆ ಸೂಚನಾ ಫಲಕ ಎನ್‌ಐಟಿಕೆ ಬಳಿ ಹೆದ್ದಾರಿ ಪಕ್ಕದಲ್ಲಿ ಇದೆ. ಕಂಡ ಕಂಡಲ್ಲಿ ಪ್ಲಾಸ್ಟಿಕ್ ವಸ್ತು ಬಿಸಾಡಿದಲ್ಲಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಫಲಕದಲ್ಲಿ ಬರೆದಿದ್ದರೂ ಇದು ಜಾರಿಯಾಗಿಲ್ಲ.
ಜಯಂತ, ಸ್ವಚ್ಛತಾ ಕಾರ‌್ಯಕರ್ತ

Leave a Reply

Your email address will not be published. Required fields are marked *