ಪ್ಲಾಸ್ಟಿಕ್ಕೇ ಇಲ್ಲಿ ಡೊನೇಷನ್: ಶಿಕ್ಷಣ ಕ್ಷೇತ್ರದಲ್ಲಿ ಯುವಜೋಡಿಯ ಕ್ರಾಂತಿ

ಇನ್ನೇನು ಕೆಲವೇ ದಿನಗಳಲ್ಲಿ ಶಾಲೆಗಳು ಆರಂಭಗೊಳ್ಳಲಿವೆೆ. ಶಾಲೆಯ ಹೆಸರು, ಘನತೆಗೆ ತಕ್ಕಂತೆ ಡೊನೇಷನ್ ಪಡೆಯಲು ಶಾಲೆಗಳು ಪೈಪೋಟಿಗೆ ಬಿದ್ದಿದ್ದರೆ, ತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಿಗೆ ಸೇರಿಸಲು ಹಲವು ಪೋಷಕರು ದುಡ್ಡು ಎಣಿಸುತ್ತಿದ್ದಾರೆ. ಆದರೆ ಅಸ್ಸಾಂನ ಗುವಾಹತಿಯಲ್ಲಿ ಅಪರೂಪದ ಶಾಲೆಯಿದೆ. ಇಲ್ಲೂ ಡೊನೇಷನ್ ಇದೆ, ಆದರೆ ಅದು ದುಡ್ಡಿನ ರೂಪದಲ್ಲಲ್ಲ, ಬದಲಿಗೆ ಪ್ಲಾಸ್ಟಿಕ್ ರೂಪದಲ್ಲಿ.

| ಸುಚೇತನಾ

ಅಸ್ಸಾಂನ ಗುವಾಹತಿಯಲ್ಲಿನ ಚಿಕ್ಕ ಗ್ರಾಮ ಪಾಮೋಹಿ. ಕೆಲ ವರ್ಷಗಳ ಹಿಂದಷ್ಟೇ ಈ ಗ್ರಾಮದ ಮಕ್ಕಳು ಅಕ್ಷರದಿಂದ ವಂಚಿತರಾದವರು. ಅವರಿಗೆ ಶಿಕ್ಷಣ ಬೇಕೆಂದೂ ಅನ್ನಿಸಿರಲಿಲ್ಲ. ಏಕೆಂದರೆ ಒಂದೆಡೆ ದುಬಾರಿ ಡೊನೇಷನ್ ಹಾವಳಿ, ಇನ್ನೊಂದೆಡೆ ಕಲ್ಲು ಕ್ವಾರಿಗೆ ಹೋಗಿ ದುಡಿಯುತ್ತಿರುವ ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಹೊಟ್ಟೆಯ ಗತಿಯೇನು ಎಂಬ ಚಿಂತೆ ಪಾಲಕರದ್ದು!

ಆದರೆ ಈ ಎರಡು ವರ್ಷಗಳಲ್ಲಿ ಗ್ರಾಮದ ಸಂಪೂರ್ಣ ಚಿತ್ರಣ ಬದಲಾಗಿದೆ. ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಅದೂ ಡೊನೇಷನ್ ಕೊಟ್ಟೇ ಬರುತ್ತಿದ್ದಾರೆ, ಅಷ್ಟೇ ಏಕೆ? ಸ್ವಂತ ದುಡಿಮೆಯನ್ನೂ ಶಾಲೆಯಲ್ಲಿಯೇ ಮಾಡುತ್ತಿದ್ದಾರೆ!

ಹೌದು. ಈ ಶಾಲೆಯಲ್ಲಿ ಡೊನೇಷನ್ ಇದೆ. ಆದರೆ ಅದು ದುಡ್ಡಿನ ರೂಪದಲ್ಲಿ ಅಲ್ಲ. ಬದಲಿಗೆ ಪ್ಲಾಸ್ಟಿಕ್ ರೂಪದಲ್ಲಿ. ಮಕ್ಕಳು ಎಷ್ಟು ಪ್ಲಾಸ್ಟಿಕ್ ತರುತ್ತಾರೋ ಅಷ್ಟು ಹೆಚ್ಚು ಡೊನೇಷನ್ ತಂದಿದ್ದಾರೆ ಎನ್ನುವ ಲೆಕ್ಕಾಚಾರ ಇಲ್ಲಿದೆ. ಇದೇ ಪ್ಲಾಸ್ಟಿಕ್​ನಿಂದ ವಿವಿಧ ಮಾದರಿಯ ವಸ್ತುಗಳನ್ನು ತಯಾರಿಸಿ ದುಡಿಮೆಯ ದಾರಿಯನ್ನೂ ಶಾಲೆಯಲ್ಲಿಯೇ ತೋರಿಸಿಕೊಡಲಾಗುತ್ತಿದೆ.

ಅಂದ ಹಾಗೆ ಈ ಶಾಲೆಯ ಹೆಸರು ‘ಅಕ್ಷರ’. ಹೆಸರಿಗೆ ತಕ್ಕಂತೆ ಗ್ರಾಮದ ಮಕ್ಕಳಲ್ಲಿ ಅಕ್ಷರ ಕ್ರಾಂತಿ ಉಂಟು ಮಾಡಿದವರು ಶಿಕ್ಷಣ ವಂಚಿತ ಮಕ್ಕಳ ಬಗ್ಗೆ ಸದಾ ಕಾಳಜಿ ಹೊಂದಿರುವ ಮಜಿನ್ ಮುಕ್ತಾರ್ ಮತ್ತು ಪರ್ವಿುತ್ ಶರ್ಮಾ ಎನ್ನುವವರು. 2016ರಲ್ಲಿ ಇಂಥದ್ದೊಂದು ಶಾಲೆಯನ್ನು ಆರಂಭಿಸಿರುವ ಇವರೀಗ ದೇಶದ ಗಮನ ಸೆಳೆದಿದ್ದಾರೆ.

ಅಕ್ಷರದ ಗಂಧಗಾಳಿ ಇಲ್ಲದ, ಶಿಕ್ಷಣದ ಬಗ್ಗೆ ಕಿಂಚಿತ್ ಯೋಚನೆಯನ್ನೂ ಮಾಡದ ಗ್ರಾಮಸ್ಥರ ಮನವೊಲಿಸಿ ಮಕ್ಕಳಲ್ಲಿ ಅಕ್ಷರದ ಬೀಜ ಬಿತ್ತುವುದು ಈ ಜೋಡಿಗೆ ಸುಲಭವೇನೂ ಆಗಿರಲಿಲ್ಲ. ಇಲ್ಲಿಯ ಮಕ್ಕಳಿಗೆ ಹೇಗಾದರೂ ಮಾಡಿ ಶಿಕ್ಷಣ ದೊರಕಿಸಿಕೊಡುವ ಉದ್ದೇಶ ಹೊಂದಿದ್ದವರು ನ್ಯೂಯಾರ್ಕ್​ನಲ್ಲಿರುವ ಕೆಲಸವನ್ನು ಬಿಟ್ಟು ಬಂದಿದ್ದ ಮಜಿನ್ ಮುಕ್ತಾರ್. 2013ರಲ್ಲಿ ಅವರು ಇಂಥದ್ದೊಂದು ಉದ್ದೇಶ ಹೊಂದಿ ಯೋಜನೆ ರೂಪಿಸುತ್ತಿದ್ದಾಗಲೇ ಅವರಿಗೆ ಸಾಥ್ ನೀಡಿದ್ದು, ಸಮಾನ ಮನಸ್ಕರಾಗಿದ್ದ ಪರ್ವಿುತ್ ಶರ್ವ. ಇವರ ನೆರವಿಗೆ ಬಂದದ್ದು ‘ಟಾಟಾ ಇನ್ಸ್​ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್’ ಸಂಸ್ಥೆ.

ಮನೆಮನೆಗಳಿಗೆ ಹೋಗಿ ಪಾಲಕರ ಮನವೊಲಿಸುವ ಪ್ರಯತ್ನದಲ್ಲಿ ತೊಡಗಿದರು ಮಜಿನ್ ಮತ್ತು ಪರ್ವಿುತ್ ಜೋಡಿ. ಆದರೆ ದುಡಿಯುವ ಕೈಗಳಿಗೆ ನೋಟ್ ಬುಕ್, ಸ್ಲೇಟ್ ಕೊಡುವ ಮನಸ್ಸು ಮಾಡಲಿಲ್ಲ ಗ್ರಾಮಸ್ಥರು. ಇಡೀ ಊರನ್ನು ಸುತ್ತು ಹಾಕುವಾಗ ಈ ಇಬ್ಬರಿಗೂ ಕಂಡದ್ದು ಗ್ರಾಮದ ತುಂಬೆಲ್ಲಾ ಹರಡಿ ಬಿದ್ದಿದ್ದ ಪ್ಲಾಸ್ಟಿಕ್.

ಒಂದೆಡೆ ಮಕ್ಕಳಿಗೆ ಶಿಕ್ಷಣ ನೀಡಬೇಕು, ಇನ್ನೊಂದೆಡೆ ಮಹಾಮಾರಿ ಪ್ಲಾಸ್ಟಿಕ್​ನಿಂದ ಈ ಗ್ರಾಮವನ್ನು ಮುಕ್ತಗೊಳಿಸಬೇಕು ಎಂಬ ಯೋಚನೆ ಈ ಜೋಡಿಗೆ ಬಂತು. ಚಳಿಗಾಲದ ಸಂದರ್ಭದಲ್ಲಿ ಸ್ಥಳೀಯರು ಪ್ಲಾಸ್ಟಿಕ್​ಗೆ ಬೆಂಕಿ ಹಾಕಿ ಮೈ ಕಾಯಿಸಿಕೊಳ್ಳುವುದು ಇಲ್ಲಿ ಮಾಮೂಲು. ಆದರೆ ಇದರ ದುಷ್ಪರಿಣಾಮದ ಬಗ್ಗೆಯೂ ಗ್ರಾಮಸ್ಥರಿಗೆ ತಿಳಿವಳಿಕೆ ಮೂಡಿಸಲು ಈ ಜೋಡಿ ನಿರ್ಧರಿಸಿತು.

ಆರಂಭದಲ್ಲಿ ಎಲ್ಲವೂ ಕಷ್ಟವೇ ಆಯಿತು. ಆದರೂ ಈ ಇಬ್ಬರೂ ಹಠ ಬಿಡಲಿಲ್ಲ. ಗ್ರಾಮಸ್ಥರ ಮನವೊಲಿಸಲು ಯೋಜನೆ ರೂಪಿಸಿಯೇ ಬಿಟ್ಟರು. ಮಕ್ಕಳಿಗೆ ಉಚಿತ ಶಿಕ್ಷಣವನ್ನೂ ನೀಡಿ, ಸಂಪಾದನೆಯ ದಾರಿಯನ್ನೂ ತೋರಿಸಿ ಜತೆಗೆ ಗ್ರಾಮವನ್ನು ಪ್ಲಾಸ್ಟಿಕ್​ವುುಕ್ತಗೊಳಿಸುವ ಪಣ ತೊಟ್ಟ ಅವರು ಬಹು ತಿಂಗಳ ಹೋರಾಟದ ನಂತರ ಕೊನೆಗೂ ಯಶಸ್ವಿಯಾದರು.

ಪ್ರತಿಯೊಬ್ಬ ವಿದ್ಯಾರ್ಥಿಗೆ ಡೊನೇಷನ್ ರೂಪದಲ್ಲಿ ಪ್ಲಾಸ್ಟಿಕ್ ತಂದು ಕೊಡುವಂತೆ ತಿಳಿಸಲಾಯಿತು. ಪ್ಲಾಸ್ಟಿಕ್ ಆರಿಸುವುದು, ಅದನ್ನು ಶಾಲೆಗೆ ತಂದುಕೊಡುವುದು ಕೂಡ ಮಕ್ಕಳಿಗೆ ಮಜ ನೀಡಿತು. ನಿಧಾನವಾಗಿ ಮಕ್ಕಳು ಶಾಲೆಗೆ ಬರಲು ಆರಂಭಿಸಿದರು. ಜತೆಗೆ, ಗ್ರಾಮದ ತುಂಬೆಲ್ಲಾ ಬಿದ್ದ ಪ್ಲಾಸ್ಟಿಕ್ ಆರಿಸಿ ತಂದುಕೊಡಲು ಶುರು ಮಾಡಿದರು. ಅಕ್ಕಪಕ್ಕದ ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆ ಕಂಡ ಇನ್ನುಳಿದ ಗ್ರಾಮಸ್ಥರೂ ತಮ್ಮ ಮಕ್ಕಳನ್ನು ನಿಧಾನವಾಗಿ ಶಾಲೆಗೆ ಕಳುಹಿಸಲು ಶುರು ಮಾಡಿದರು.

ಮಕ್ಕಳಿಗೆ ಕುತೂಹಲ ಮೂಡಿಸುವ ಶಿಕ್ಷಣ

ಪ್ರತಿ ವಾರ ಒಬ್ಬ ವಿದ್ಯಾರ್ಥಿ, ಶಾಲೆಗೆ 25 ವಿವಿಧ ಪ್ಲಾಸ್ಟಿಕ್ ವಸ್ತು ತಂದುಕೊಡುವುದನ್ನು ಕಡ್ಡಾಯ ಮಾಡಲಾಗಿದೆ. ಮಕ್ಕಳು ಇದನ್ನು ಖುಷಿಯಿಂದ ಮಾಡುತ್ತಿದ್ದಾರೆ. ಪ್ಲಾಸ್ಟಿಕ್ ಮರುಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಒಮ್ಮೆ ಬಳಸಿದ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಚೀಲಗಳಿಂದ ವಿವಿಧ ವಸ್ತುಗಳನ್ನು ಹೇಗೆ ತಯಾರಿಸಬಹುದು ಎಂಬುದನ್ನು ತೋರಿಸಲಾಗುತ್ತಿದೆ. ಪ್ಲಾಸ್ಟಿಕ್​ನಿಂದ ಇವೆಲ್ಲಾ ಸಾಧ್ಯವೇ ಎಂಬುದು ಮಕ್ಕಳಿಗೆ ಅಚ್ಚರಿ ಮೂಡಿಸುತ್ತಿದೆ. ಈ ರೀತಿಯ ವಿಭಿನ್ನ ಬೋಧನಾ ಶೈಲಿ ಮಕ್ಕಳಿಗೆ ಶಿಕ್ಷಣದಲ್ಲಿ ಇನ್ನಷ್ಟು ಆಸಕ್ತಿ ಹುಟ್ಟಿಸಿದೆ. ಮಕ್ಕಳಿಗೆ ಶಿಕ್ಷಣವೂ ಸಿಗುತ್ತಿದೆ, ಗ್ರಾಮದಿಂದ ಪ್ಲಾಸ್ಟಿಕ್ ಕೂಡ ಮಾಯವಾಗುತ್ತಿದೆ. ಜತೆಗೆ ಮಕ್ಕಳಿಗೆ ಸಂಪಾದನೆಯ ಮಾರ್ಗವೂ ಸಿಗುತ್ತಿದೆ. ಪಾಲಕರಿಗೆ ಇನ್ನೇನು ಬೇಕು? ಇಷ್ಟೇ ಅಲ್ಲದೇ ಶಾಲೆಯ ಆವರಣದಲ್ಲಿ ತೋಟವನ್ನೂ ನಿರ್ವಿುಸಲಾಗಿದ್ದು, ಮಕ್ಕಳಿಗೆ ಅಲ್ಲಿಯೂ ಪರಿಸರ ಪಾಠವನ್ನು ಹೇಳಿಕೊಡಲಾಗುತ್ತಿದೆ. ಬೇರೆ ಬೇರೆಯಾಗಿ ಬಂದಿದ್ದ ಮಜಿನ್ ಮುಕ್ತಾರ್ ಮತ್ತು ಪರ್ವಿುತ್ ಶರ್ಮ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಆರಂಭದಲ್ಲಿ 25 ಮಕ್ಕಳನ್ನು ಕಷ್ಟಪಟ್ಟು ಈ ಜೋಡಿ ಕರೆತಂದಿತ್ತು. ಆದರೆ ಗ್ರಾಮಸ್ಥರೇ ಈಗ ಖುದ್ದು ಮುತುವರ್ಜಿ ವಹಿಸಿದ್ದರ ಫಲವಾಗಿ ಸದ್ಯ 100 ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಏಳು ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಸದ್ಯ ಈ ಶಾಲೆಯಲ್ಲಿ 4ರಿಂದ 15 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಒಂದರಿಂದ 9ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಇಂಥ 100 ಪರಿಸರಸ್ನೇಹಿ ಶಾಲೆಯನ್ನು ದೇಶದ ವಿವಿಧೆಡೆ ವಿಸ್ತರಿಸಬೇಕೆಂಬ ಆಸೆಯನ್ನು ಈ ದಂಪತಿ ಹೊಂದಿದ್ದಾರೆ.

4 Replies to “ಪ್ಲಾಸ್ಟಿಕ್ಕೇ ಇಲ್ಲಿ ಡೊನೇಷನ್: ಶಿಕ್ಷಣ ಕ್ಷೇತ್ರದಲ್ಲಿ ಯುವಜೋಡಿಯ ಕ್ರಾಂತಿ”

  1. Both of you are doing great work……..really appreciate your work……..My heartly wishes to both you…..God Bless you.

Leave a Reply

Your email address will not be published. Required fields are marked *