ಶಾರ್ಟ್ ಸರ್ಕ್ಯೂಟ್‌ನಿಂದ ತೋಟದ ಬೆಳೆ ಬೆಂಕಿಗಾಹುತಿ

ಬೇಲೂರು:  ತಾಲೂಕಿನ ಸೋಮನಹಳ್ಳಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸುಮಾರು 15 ಎಕರೆಯಷ್ಟು ತೋಟದಲ್ಲಿದ್ದ ಕಾಫಿ, ಮೆಣಸು, ಸಿಲ್ವರ್ ಮರ ಹಾಗೂ ಪೈಪ್‌ಗಳು ಬೆಂಕಿಗಾಹುತಿಯಾಗಿದ್ದು, ರೈತರ ಗೋಳು ಹೇಳತೀರದಾಗಿದೆ.

ತಾಲೂಕಿನ ಅರೇಹಳ್ಳಿ ಹೋಬಳಿಯ ಸೋಮನಹಳ್ಳಿ ಗ್ರಾಮದಲ್ಲಿನ ಕಾಫಿ ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್‌ನಿಂದ ಶಾರ್ಟ್ ಸರ್ಕ್ಯೂಟ್ ಆಗಿದೆ. ಇದರಿಂದಾಗಿ ಸೋಮನಹಳ್ಳಿ ಗ್ರಾಮದ ಹನುಮೇಗೌಡ, ಬಸವರಾಜು, ಜಯರಾಮ್, ಮದನ್, ಚನ್ನೇಗೌಡ, ರಾಮಯ್ಯ, ಅರುಣ್‌ಕುಮಾರ್, ಸೋಮೇಗೌಡ ಎಂಬುವವರಿಗೆ ಸೇರಿದ ಸುಮಾರು 15 ಎಕರೆಯಲ್ಲಿ ಬೆಳೆದಿದ್ದ ಕಾಫಿ, ಮೆಣಸು, ಸಿಲ್ವರ್ ಮರಗಳು ಹಾಗೂ ತೋಟಕ್ಕೆ ನೀರು ಹಾಯಿಸಲು ಹಾಕಿದ್ದ 200ಕ್ಕೂ ಹೆಚ್ಚು ಪೈಪ್‌ಗಳು ಬೆಂಕಿಗಾಹುತಿಯಾಗಿವೆ. ಇದರಿಂದ ರೈತರು ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ.

ಬೆಂಕಿ ನಂದಿಸಲು ಎಷ್ಟೇ ಪ್ರಯತ್ನಿಸಿದರೂ ಗಾಳಿಯಿಂದಾಗಿ ಬೆಂಕಿ ತೋಟವನ್ನೆಲ್ಲಾ ಆವರಿಸಿ ಸುಟ್ಟು ಹಾಕಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದರೂ ಕೆಲ ಭಾಗ ಮಾತ್ರ ಬೆಂಕಿ ನಂದಿಸಲು ಸಾಧ್ಯವಾಗಿದೆ. ಉಳಿದಂತೆ ತೋಟವೆಲ್ಲ ಸಂಪೂರ್ಣವಾಗಿ ಸುಟ್ಟು ಬಯಲು ಪ್ರದೇಶದಂತಾಗಿದೆ.

ಸ್ಥಳಕ್ಕೆ ಅರೇಹಳ್ಳಿ ಹೋಬಳಿಯ ಕಂದಾಯಾಧಿಕಾರಿಗಳಾದ ನಾರಾಯಣ್, ಭಾನುಪ್ರಕಾಶ್ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.