ಟೇಕ್​ ಆಫ್​ ಆಗುವ ವೇಳೆ ಎರಡು ಹೆಲಿಕಾಪ್ಟರ್​ಗಳಿಗೆ ಡಿಕ್ಕಿ ಹೊಡೆದ ವಿಮಾನ: ಮೂವರು ಸಾವು

ಕಾಠ್ಮಂಡು: ಸಣ್ಣ ವಿಮಾನವೊಂದು ರನ್​ ವೇಯಲ್ಲಿ ಟೇಕ್​ಆಫ್​ ಆಗುವಾಗ ಎರಡು ಹೆಲಿಕಾಪ್ಟರ್​ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತರಾಗಿದ್ದು ಮೂವರು ಗಾಯಗೊಂಡಿದ್ದಾರೆ.

ಮೌಂಟ್​ ಎವರೆಸ್ಟ್​ ಪ್ರದೇಶದ ಮುಖ್ಯದ್ವಾರವೆನಿಸಿಕೊಂಡ ಲುಕ್ಲಾ ವಿಮಾನನಿಲ್ದಾಣದಲ್ಲಿ ಸಮೀಪ ಅವಘಡ ಸಂಭವಿಸಿದೆ. ಈ ಪ್ರದೇಶದಲ್ಲಿ ವಿಮಾನ ಟೇಕ್ ಆಫ್​ ಆಗುವುದು, ಲ್ಯಾಂಡ್​ ಆಗುವುದು ತುಂಬ ಕಠಿಣ. ಇದನ್ನು ಜಗತ್ತಿನ ಅತ್ಯಂತ ದುರ್ಗಮ ಮಾರ್ಗವನ್ನೊಳಗೊಂಡ ಏರ್​ಪೋರ್ಟ್ ಎನ್ನಲಾಗುತ್ತದೆ.

ಸಮ್ಮಿತ್​ ಏರ್​ಬೌಂಡ್​ ಒಡೆತನದ ಲೆಟ್ -410 ವಿಮಾನ ಅಪಘಾತಕ್ಕೀಡಾಗಿದ್ದು ಅದರಲ್ಲಿದ್ದ ಕೋ ಪೈಲೆಟ್​ ಮತ್ತು ಅಲ್ಲೇ ಇದ್ದ ಪೊಲೀಸ್​ ಅಧಿಕಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವ ಗಾಯಗೊಂಡಿದ್ದ ಪೊಲೀಸ್​ ಅಧಿಕಾರಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಏರ್​ಪೋರ್ಟ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಮಾನ ಟೇಕ್​ಆಫ್​ ಆಗುವ ಸಂದರ್ಭದಲ್ಲಿ ಆಯತಪ್ಪಿ ಅಲ್ಲಿಯೇ ಇದ್ದ ಹೆಲಿಪ್ಯಾಡ್​ನತ್ತ ನುಗ್ಗಿ, ಅಲ್ಲಿ ನಿಂತಿದ್ದ ಎರಡು ಹೆಲಿಕಾಪ್ಟರ್​ಗಳಿಗೆ ಅಪ್ಪಳಿಸಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎಂದಿದ್ದಾರೆ.