ಚಲಿಸುತ್ತಿರುವ ವಿಮಾನದಲ್ಲಿ ನಿದ್ರೆಗೆ ಜಾರಿದ ಪೈಲಟ್​ ಮುಂದೇನಾಯಿತು?

ಕ್ಯಾನ್​ಬೆರಾ: ಪೈಲಟ್​ ನಿದ್ರೆಗೆ ಜಾರಿದ ಪರಿಣಾಮ ವಿಮಾನವೊಂದು ತನ್ನ ನಿಗದಿತ ಗುರಿ ತಲುಪದೇ ಹೆಚ್ಚುವರಿ 46 ಕಿ.ಮೀ. ಹಾರಾಟ ನಡೆಸಿರುವ ಘಟನೆ ಕಳೆದ ನವೆಂಬರ್​ 8ರಂದು ಆಸ್ಟ್ರೇಲಿಯಾದ ಕ್ಯಾನ್​ಬೆರಾದಲ್ಲಿ ನಡೆದಿರುವುದಾಗಿ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಪೈಪರ್​ ಪಿಎ-31 ಹೆಸರಿನ ವಿಮಾನದಲ್ಲಿ ಪೈಲಟ್​ ಒಬ್ಬನೇ ಪ್ರಯಾಣಿಸುತ್ತಿದ್ದ. ವಿಮಾನವು ಆಸ್ಟ್ರೇಲಿಯಾದ ಡೆವನ್​ಪೋರ್ಟ್​ನಿಂದ ತಾಸ್ಮಾನಿಯಾದ ಕಿಂಗ್​ ಐಲ್ಯಾಂಡ್ ಕಡೆಗೆ ನವೆಂಬರ್​ 8ರಂದು ಪ್ರಯಾಣ ಬೆಳೆಸಿತ್ತು. ಈ ವೇಳೆ ಪೈಲಟ್​​ ನಿದ್ರೆಗೆ ಜಾರಿದ್ದರಿಂದ ವಿಮಾನ ನಿಗದಿತ ಗುರಿಗಿಂತ ಸುಮಾರು 46 ಕಿ.ಮೀ. ಹೆಚ್ಚು ಹಾರಾಟ ನಡೆಸಿದೆ.

ಆದರೆ, ಸುರಕ್ಷಿತವಾಗಿ ವಿಮಾನ ಲ್ಯಾಂಡ್​ ಆಗುವ ಮುನ್ನ ಪೈಲಟ್​ ಹೇಗೆ ಎಚ್ಚರಗೊಂಡ ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಈ ಘಟನೆಯನ್ನು ಅಸಮರ್ಥತೆ ಪ್ರಕರಣ ಎಂದು ವರ್ಗೀಕರಿಸಲಾಗಿದ್ದು, ಆಸ್ಟ್ರೇಲಿಯಾದ ಸಾರಿಗೆ ಸುರಕ್ಷತಾ ಸಂಸ್ಥೆಯಿಂದ ತನಿಖೆ ನಡೆಯುತ್ತಿದೆ.

ಕಳೆದ ವರ್ಷ ಮೆಲ್ಬೋರ್ನ್​ನಿಂದ ಕಿಂಗ್​ ಐಲ್ಯಾಂಡ್​ಗೆ ತೆರಳುತ್ತಿದ್ದ ವಿಮಾನ ಟೇಕ್​ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಐದು ಮಂದಿ ಸಾವಿಗೀಡಾಗಿದ್ದರು. (ಏಜೆನ್ಸೀಸ್​)