ಹುತಾತ್ಮ ಯೋಧನ ಪತ್ನಿಗೆ ನೌಕರಿ ಕೊಡಿಸುವ ಬಗ್ಗೆ ಆಲೋಚನೆಯಿದೆ: ಎಚ್‌ ಡಿ ಕುಮಾರಸ್ವಾಮಿ

ಹಾಸನ: ನಮ್ಮ ಸೈನಿಕರ ಮೇಲೆ ಉಗ್ರರ ದಾಳಿಯಾಗಿದೆ. ಈ ಘಟನೆ ನಡೆಯಬಾರದಿತ್ತು. ನಮ್ಮ ಕನ್ನಡಿಗನೂ ಇದರಲ್ಲಿ ಹುತಾತ್ಮ ಆಗಿದ್ದಾರೆ. ಅವರಿಗೆ ಶಾಂತಿ ಕೋರುತ್ತೇನೆ. ಮೃತ ಸೈನಿಕನ ಪತ್ನಿಗೆ ನೌಕರಿ ಕೊಡಿಸುವ ಬಗ್ಗೆ ಆಲೋಚನೆಯಲ್ಲಿದ್ದೇವೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಹಾಸನ ಶಾಸಕ ಪ್ರೀತಂ ಗೌಡನನ್ನು ಕೊಲೆ ಮಾಡುತ್ತಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು, ರೇವಣ್ಣ ಅಂತಹ ಕೆಲಸ ಮಾಡಲು ಸಾಧ್ಯವೇ? ಗಲಭೆ ಆದ ಐದು ನಿಮಿಷದಲ್ಲಿ ಭದ್ರತೆಗೆ ಸೂಚಿಸಿದ್ದೇನೆ. ಶಾಸಕ ಪ್ರೀತಂ ಹಿನ್ನೆಲೆ ಮತ್ತು ಅವರ ಬೆಂಬಲಿಗರ ಹಿನ್ನೆಲೆ ನೋಡಿದರೆ ಅವರೆಂತವರು ಎಂದು ತಿಳಿಯುತ್ತದೆ. ಬಿಜೆಪಿಯವರು ಕಪ್ಪು ಹಣ ಇಟ್ಟುಕೊಂಡು ಶಾಸಕರನ್ನು ಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.

ಅಮಿತ್ ಷಾ ಈ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ನನ್ನ ಬಗ್ಗೆ ಮಾತನಾಡುತ್ತಾರೆ. ಸದನದ ಮೊದಲ ದಿನವೇ ಬಾವಿಗಿಳಿದು ಬಿಜೆಪಿಯವರು ಗಲಾಟೆ ಮಾಡಿದರು. ಅವರ ಗುರಿ ಕುಮಾರಸ್ವಾಮಿ ಕೆಳಗಿಳಿಸುವುದು. ಆದರೆ, ನನ್ನ ಅಧಿಕಾರಾವಧಿಯನ್ನು ದೇವರು ಬರೆದಿದ್ದಾನೆ. ಇವರಿಂದ ಇಳಿಸಲು ಸಾಧ್ಯವಿಲ್ಲ. ಸರ್ಕಾರ ಕಲ್ಲುಬಂಡೆಯಂತಿದೆ. ಯಾವುದೇ ಅಧಿಕಾರಿಗಳನ್ನು ದುರುಪಯೋಗ ಮಾಡಿಲ್ಲ. ಒಂದೇ ಪಕ್ಷ ಅಧಿಕಾರ ಮಾಡುವ ರೀತಿಯಲ್ಲಿ ಅಧಿಕಾರ ಮಾಡಿದ್ದೇನೆ. ಬಿಜೆಪಿಯವರಿಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಹೇಳಿದರು.

ಚನ್ನರಾಯಪಟ್ಟಣ ತಾಲೂಕಿನ ಬೀರೂರು ಗ್ರಾಮಕ್ಕೆ ಕಾಚೇನಹಳ್ಳಿ ಹಾಗೂ ಹಾಲುಗೊಂಡನಹಳ್ಲಿ ಏತ ನೀರಾವರಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ತನ್ನನ್ನು ಕಾಂಗ್ರೆಸ್ ಕ್ಲರ್ಕ್ ಎಂದು ಹೇಳುವ ಅಮಿತ್ ಷಾ ದೇಶದ ವಿಚಾರ, ಬಿಎಸ್‌ವೈ ಆಡಿಯೋ ಬಗ್ಗೆ ಚರ್ಚೆ ಮಾಡಲಿ ಎಂದು ಸವಾಲೆಸೆದರು. (ದಿಗ್ವಿಜಯ ನ್ಯೂಸ್)