ಅಶ್ವತ್ಥಕಟ್ಟೆ ನಿರ್ನಾಮಕ್ಕೆ ಮುಹೂರ್ತ!

ಗಾಂಧಿಕಟ್ಟೆ ಅಭಿವೃದ್ಧಿ ನೆಪದಲ್ಲಿ ಇತಿಹಾಸ ಪ್ರಸಿದ್ಧ ಪುತ್ತೂರು ಅಶ್ವತ್ಥ ಕಟ್ಟೆ ನೆಲಸಮ ಹುನ್ನಾರ> 

ಶ್ರವಣ್‌ಕುಮಾರ್ ನಾಳ, ಪುತ್ತೂರು

ಅಂತೂ ಇಂತು ಪುತ್ತೂರಿನ ಗಾಂಧಿಕಟ್ಟೆ ಬಳಿಯಿರುವ ಅಶ್ವತ್ಥ ಕಟ್ಟೆ ನಿರ್ನಾಮಕ್ಕೆ ಮುಹೂರ್ತ ಸಿದ್ಧವಾದಂತಿದೆ. ಪ್ರಸ್ತುತ ಪುತ್ತೂರು ಗಾಂಧಿಕಟ್ಟೆ ಅಭಿವೃದ್ಧಿಗೆ ನಗರಸಭೆ ಮುಂದಾಗಿದ್ದು, ರಸ್ತೆ ಸಮಾನಾಂತರವಾಗಿ ಪ್ರತಿಮೆ ಪುನರ್ ಸ್ಥಾಪನೆಗೆವ ನಿರ್ಧರಿಸಿದೆ. ವಿಪರ್ಯಾಸ ಎಂದರೆ ಗಾಂಧಿಕಟ್ಟೆ ಅಭಿವೃದ್ಧಿ ಕಾರ್ಯ ನಡೆದರೆ ಇದರ ಪಕ್ಕದಲ್ಲೇ ಇರುವ ಅಶ್ವತ್ಥಕಟ್ಟೆ ಸ್ವಾಭಾವಿಕವಾಗಿ ಕುಸಿತವಾಗುವ ಭೀತಿ ಎದುರಾಗಿದೆ.

ಗಾಂಧಿಕಟ್ಟೆ ಬಳಿ ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಕಟ್ಟಡದ ಮಾಲೀಕರು ಗಾಂಧಿಕಟ್ಟೆ ಬಳಿಯಿರುವ ಐತಿಹಾಸಿಕ ಅಶ್ವತ್ಥ ಮರ ತೆರವುಗೊಳಿಸಬೇಕು ಎಂದು ನಗರಸಭೆಗೆ ಹಲವು ಬಾರಿ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ನಗರಸಭೆ ಐತಿಹಾಸಿಕ ಗಾಂಧಿಕಟ್ಟೆ ಹಾಗೂ ಅಶ್ವತ್ಥ ಮರ ತೆರವಿಗೆ ಮುಂದಾಗಿತ್ತು. ಈ ಸಂದರ್ಭ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ಗಾಂಧಿಕಟ್ಟೆ ಹಾಗೂ ಅಶ್ವತ್ಥ ಮರದಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಇಲ್ಲ, ಆದರೆ ಸರ್ಕಾರಿ- ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಕಟ್ಟಡದ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಕಟ್ಟೆ ತೆರವು ಅವೈಜ್ಞಾನಿಕ ಎಂದು ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಈ ಮಧ್ಯೆ ನಗರಸಭಾ ಸದಸ್ಯರು ಗಾಂಧಿಕಟ್ಟೆ ತೆರವಿಗೆ ಲಾಬಿ ನಡೆಸಿದ್ದಾರೆ ಎಂಬ ಆರೋಪವೂ ಇದೆ. ಪ್ರಸ್ತುತ ಗಾಂಧಿಕಟ್ಟೆ ಅಭಿವೃದ್ಧಿ ನೆಪದಲ್ಲಿ ಇತಿಹಾಸ ಪ್ರಸಿದ್ಧ ಪುತ್ತೂರು ಅಶ್ವತ್ಥ ಕಟ್ಟೆ ನಿರ್ನಾಮಕ್ಕೆ ಮುಹೂರ್ತ ಇಟ್ಟಂತಿದೆ.

ಸ್ವಾತಂತ್ರ್ಯ ಚಳವಳಿ ಸಂದರ್ಭ 1934ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪುತ್ತೂರಿಗೆ ಆಗಮಿಸಿದ್ದರು. ಗಾಂಧೀಜಿ ಇದೇ ಕಟ್ಟೆಯಲ್ಲಿ ಕುಳಿತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಈ ನೆನಪಿನಲ್ಲಿ ಗಾಂಧಿ ಕಟ್ಟೆ ನಿರ್ಮಿಸಿ, ಗಾಂಧಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು. ಇತ್ತೀಚೆಗೆ ಗಾಂಧಿ ಕಟ್ಟೆಗೆ ರಕ್ಷಣೆ ಇಲ್ಲದಂತಾಗಿತ್ತು. ಗಾಂಧಿಕಟ್ಟೆ ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಕೆಎಸ್‌ಆರ್‌ಟಿಸಿ ಹಾಗೂ ಬಹುಮಹಡಿ ಕಟ್ಟಡದ ವ್ಯಾಪ್ತಿಗೆ ಬರುತ್ತದೆ. ಈ ಕಾರಣಕ್ಕಾಗಿ ಗಾಂಧಿ ಕಟ್ಟೆಯ ನಿರ್ವಹಣೆ ಜವಾಬ್ದಾರಿ ನಗರಸಭೆಗೆ ಸೇರಿಲ್ಲ, ಇದು ನಗರಸಭೆಗೆ ಸೇರಿದ ಆಸ್ತಿಯೂ ಅಲ್ಲ ಎಂಬುದಾಗಿ ತಿಳಿಸಿತ್ತು. ಬಳಿಕ ಆರ್‌ಟಿಐನಿಂದ ಪಡೆದ ಮಾಹಿತಿಯಲ್ಲಿ ಗಾಂಧಿಕಟ್ಟೆ ನಗರಸಭೆ ಆಸ್ತಿ ಎಂದು ತಿಳಿದ ಹಿನ್ನೆಲೆಯಲ್ಲಿ ಮತ್ತೆ ನಗರಸಭೆ ಪುತ್ತೂರು ಗಾಂಧಿಕಟ್ಟೆ ಅಭಿವೃದ್ಧಿ ಹೆಸರಲ್ಲಿ ಕಟ್ಟಡದ ಮಾಲೀಕರ ಲಾಬಿಗೆ ಬಲಿಯಾದಂತಿದೆ.

ಗಾಂಧಿ ಕಟ್ಟೆ ಸ್ಥಳಾಂತರ?: ಪುತ್ತೂರು-ದರ್ಬೆ ಮುಖ್ಯರಸ್ತೆ ಅಗಲಗೊಳ್ಳದೆ ಪುತ್ತೂರಿನಲ್ಲಿ ಸಂಚಾರ ನಿಯಂತ್ರಣ ಅಸಾಧ್ಯ. ಈ ರಸ್ತೆ ಅಗಲಗೊಳ್ಳಬೇಕಾದರೆ ಮೊದಲು ಗಾಂಧಿ ಕಟ್ಟೆ ಹಾಗೂ ಅಶ್ವತ್ಥ ಕಟ್ಟೆಯನ್ನು ತೆರವುಗೊಳಿಸಬೇಕು. ವರ್ಷಗಳ ಹಿಂದೆ ಚರ್ಚೆಯಾದಾಗ ಅನೇಕ ನಗರಸಭಾ ಸದಸ್ಯರು ಕಟ್ಟೆ ತೆರವಿಗೆ ಆಗ್ರಹಿಸಿದ್ದಾರೆ. ಈ ಸಂದರ್ಭ ಹಿರಿಯ ನಾಗರಿಕರ ಸಮಿತಿ ತೆರವಿಗೆ ವಿರೋಧ ವ್ಯಕ್ಯಪಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಬಿಡಲಾಗಿತ್ತು. ಮತ್ತೆ ಸ್ಥಳಾಂತರ ಮಾತು ಕೇಳಿಬಂದಿದೆ.

ಗಾಂಧಿ ಪ್ರತಿಮೆ ರಸ್ತೆ ಸಮಾನಾಂತರವಾಗಿ ಪುನರ್ ಸ್ಥಾಪಿಸುವ ಕಾರ್ಯಕ್ಕೆ ನಗರಸಭೆ ಕೈ ಹಾಕಿದೆ. ಇದರ ಹಿಂದಿರುವ ಉದ್ದೇಶ ಅಶ್ವತ್ಥ ಮರ ತಾನಾಗಿಯೇ ಬೀಳಲಿ ಎಂಬುದು. ಅವರು ಹೀಗಾಗುವುದನ್ನೇ ಕಾಯುತ್ತಿದ್ದಾರೆ. ಪುತ್ತೂರು ಗಾಂಧಿಕಟ್ಟೆ ಅಭಿವೃದ್ಧಿ ಪಡಿಸುವಾಗ ಅಶ್ವತ್ಥ ಕಟ್ಟೆಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕು.
ಬಿ. ಪುರಂದರ ಭಟ್
ಪುತ್ತೂರಿನ ಎಚ್ಚರ ಬಳಗದ ಸಂಚಾಲಕ