ಕರಾವಳಿ ರಾಜ್ಯಗಳಲ್ಲಿ ಸೈಕ್ಲೋನ್ ಅಪಾಯ ತಡೆಗೆ ಯೋಜನೆ

«ಕರ್ನಾಟಕದ 26 ಕಡೆ ಸೈರನ್ ಕೇಂದ್ರ, 11 ಕಡೆ ಶೆಲ್ಟರ್ ನಿರ್ಮಾಣ; ವಿಶ್ವ ಬ್ಯಾಂಕ್ ನೆರವಿನಲ್ಲಿ ಕೇಂದ್ರ ಸರ್ಕಾರ ನೇತೃತ್ವ»

ವೇಣುವಿನೋದ ಕೆ.ಎಸ್. ಮಂಗಳೂರು
ಪದೇಪದೆ ಕಾಡುವ ಚಂಡಮಾರುತ ಸುಳಿಯಿಂದ ಪಾರಾಗಲು ಕೇಂದ್ರ ಸರ್ಕಾರದ ನೇತೃತ್ವದಲ್ಲಿ, ಕರ್ನಾಟಕ ಸೇರಿದಂತೆ ಕರಾವಳಿ ರಾಜ್ಯಗಳಲ್ಲಿ ಸೈಕ್ಲೋನ್ ಅಪಾಯ ತಡೆ ಯೋಜನೆ ಕೈಗೊಳ್ಳಲಾಗುತ್ತಿದೆ.
ಕರ್ನಾಟಕದಲ್ಲಿ ಈ ಯೋಜನೆ ಶೇ.75-25 ಕೇಂದ್ರ-ರಾಜ್ಯ ಸಹಕಾರದಲ್ಲಿ ಒಟ್ಟು 128 ಕೋಟಿ ರೂ. ವೆಚ್ಚದಲ್ಲಿ ರೂಪಿಸಲಾಗಿದೆ. ಇದು ವಿಶ್ವ ಬ್ಯಾಂಕ್ ನೆರವಿನ ಯೋಜನೆಯಾಗಿದ್ದು, ಹೆಚ್ಚಾಗಿ ಚಂಡಮಾರುತ ಎದುರಿಸುವ ಪೂರ್ವ ಕರಾವಳಿಗೆ ಹೆಚ್ಚಿನ ಮೊತ್ತ ಮೀಸಲಿಡಲಾಗಿದೆ.

ಚಂಡಮಾರುತ ಬಂದಾಗ ಕರಾವಳಿಯ ಜನರನ್ನು ಯಾವ ರೀತಿ ಎಚ್ಚರಿಸುವುದು, ಕಾಪಾಡಿಕೊಳ್ಳುವುದು ಎಂಬುದು ಈ ಯೋಜನೆಯ ಉದ್ದೇಶ. 332 ಕಿ.ಮೀ. ಉದ್ದದ ಕರಾವಳಿ ಹೊಂದಿರುವ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಸೈಕ್ಲೋನ್ ಶೆಲ್ಟರ್ ನಿರ್ಮಾಣ, ಸೈಕ್ಲೋನ್ ಸೈರನ್ ಟವರ್ ರಚನೆ, ಯಾವುದೇ ಸಂಪರ್ಕ ವ್ಯವಸ್ಥೆ ಹದಗೆಟ್ಟರೆ ಬಳಕೆ ಮಾಡುವಂತಹ ಆಧುನಿಕ ಸ್ಯಾಟಲೈಟ್ ಫೋನ್, ಡಿಜಿಟಲ್ ರೇಡಿಯೊ ಸಹಿತ ಹಲವು ಅಂಶಗಳನ್ನು ಈ ಯೋಜನೆ ಒಳಗೊಂಡಿದೆ.

ಶಾಲೆಗಳೇ ಅಪ್‌ಗ್ರೇಡ್
ಸೈಕ್ಲೋನ್ ಶೆಲ್ಟರ್ ಆಗಿ ಹೊಸ ಕಟ್ಟಡ ರಚಿಸಿದರೆ ಅದು ದುರುಪಯೋಗ ಆಗುವ ಅಥವಾ ಉಪಯೋಗ ಶೂನ್ಯವಾಗುವ ಸಾಧ್ಯತೆ ಹೆಚ್ಚು. ಅದಕ್ಕಾಗಿ ಕೆಲವು ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದೆ. ಈ ಶಾಲೆಗಳಲ್ಲಿ 1000 ಮಂದಿ ಉಳಿದುಕೊಳ್ಳುವ ಕಟ್ಟಡ ನಿರ್ಮಿಸಲಾಗುತ್ತಿದೆ. ಚಂಡಮಾರುತ ಬಂದರೆ ಜನರಿಗೆ ನೆರವಾಗುವ, ಇಲ್ಲದಿದ್ದರೆ ಶಾಲಾ ಉಪಯೋಗಕ್ಕೆ ಸಿಗುವಂತಹ ರೀತಿಯಲ್ಲಿ ಇದನ್ನು ಕೈಗೆತ್ತಿಕೊಳ್ಳಲಾಗುವುದು, ಕರ್ನಾಟಕ ಕರಾವಳಿಯಲ್ಲಿ ಒಟ್ಟು 11 ಕಡೆ ಸೈಕ್ಲೋನ್ ಶೆಲ್ಟರ್ ನಿರ್ಮಾಣ ಪ್ರಗತಿಯಲ್ಲಿದೆ ಎಂದು ಕೆಎಸ್‌ಎನ್ ಎಂಡಿಸಿ ನಿರ್ದೇಶಕ ಡಾ.ಶ್ರೀನಿವಾಸ ರೆಡ್ಡಿ ‘ವಿಜಯವಾಣಿ’ಗೆ ತಿಳಿಸಿದರು. ಮಂಗಳೂರಿನಲ್ಲಿ ಉಳ್ಳಾಲದ ಒಂಭತ್ತುಕೆರೆ ಹಾಗೂ ಸುರತ್ಕಲ್ ಬಳಿಯ ಹೊಸಬೆಟ್ಟು ಎಂಬಲ್ಲಿ ಈ ಶೆಲ್ಟರ್ ನಿರ್ಮಾಣ ನಡೆಯಲಿದೆ.

ಪೂರ್ವ ಕರಾವಳಿಗೆ ಆದ್ಯತೆ
ಪಶ್ಚಿಮ ಕರಾವಳಿಯ ಕೇರಳ ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿ ಈ ಯೋಜನೆ ಬರಲಿದೆ. ಆದರೆ, ಚಂಡಮಾರುತಕ್ಕೆ ಹೆಚ್ಚು ಗುರಿಯಾಗುವ ಪೂರ್ವದ ರಾಜ್ಯಗಳಿಗೆ 1000 ಕೋಟಿ ರೂ. ಯೋಜನಾ ಮೊತ್ತ ಮೀಸಲಿಡಲಾಗಿದೆ.

ಸೈರನ್ ಟವರ್ಸ್
ಸೈಕ್ಲೋನ್ ಬಂದಾಗ ಪೂರ್ವದಲ್ಲೇ ಕಡಲ ತೀರದ ಜನರಿಗೆ, ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡುವಂತಹ ಸೈಕ್ಲೋನ್ ಸೈರನ್ ಟವರ್ಸ್ ನಿರ್ಮಾಣಗೊಳ್ಳುತ್ತಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಉಸ್ತುವಾರಿಯಲ್ಲಿ ಇದನ್ನು ಕೈಗೆತ್ತಿಕೊಳ್ಳಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 13, ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿ ತಲಾ 6 ಮತ್ತು 7 ಸೇರಿದಂತೆ 26 ಸೈಕ್ಲೋನ್ ಸೈರನ್ ಟವರ್‌ಗಳು ನಿರ್ಮಾಣಗೊಳ್ಳಲಿವೆ. ಇವು ಎಲ್ಲೆಲ್ಲಿ ಆಗಬೇಕು ಎನ್ನುವ ಬಗ್ಗೆ ಸರ್ಕಾರ ಅಧೀನದ ಟೆಲಿಕಮ್ಯುನಿಕೇಶನ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್(ಟಿಸಿಐಎಲ್) ತಜ್ಞರು ಸಮೀಕ್ಷೆ ನಡೆಸಿದ್ದಾರೆ. ಶಾಲೆಗಳು, ಸರ್ಕಾರಿ ಕಟ್ಟಡಗಳನ್ನು ಇದಕ್ಕಾಗಿ ಆಯ್ದುಕೊಂಡಿದ್ದು, ಅವುಗಳಲ್ಲೇ ಟವರ್‌ಗಳನ್ನು ಅಳವಡಿಸಲಾಗುವುದು.

ಇದರಲ್ಲಿ ಕನಿಷ್ಟ 12ರಿಂದ 24 ಗಂಟೆ ಮೊದಲೇ ಉಪಗ್ರಹ ನೆರವಿನಿಂದ ಸೈಕ್ಲೋನ್ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗುವುದು. 2 ಕಿ.ಮೀ ದೂರಕ್ಕೂ ಇದು ಕೇಳಲಿದೆ. ಅಪಾಯ ಪ್ರದೇಶದ ಪರಿಧಿಯೊಳಗೆ ಬರುವ ಹೊರಗಿನವರ ಮೊಬೈಲ್‌ಗಳಿಗೂ ಮುನ್ಸೂಚನಾ ಸಂದೇಶಗಳು ಬರಲಿವೆ. ಆಯಾ ಜಿಲ್ಲಾಧಿಕಾರಿಗಳ ಕಂಟ್ರೋಲ್ ಸೆಂಟರ್‌ಗಳ ಮೂಲಕ ಸೈರನ್ ಕೇಂದ್ರಗಳನ್ನು ಬೆಸೆಯಲಾಗುವುದು.

ಚಂಡಮಾರುತ ಬಗ್ಗೆ ಮೊದಲೇ ಜನರಿಗೆ ಮಾಹಿತಿ ನೀಡುವ ಮೂಲಕ ಪರಿಣಾಮ ತಗ್ಗಿಸಲು, ಅಂತಹ ವಿಪತ್ತು ಬಂದಾಗ ಅದನ್ನು ಸುಲಭವಾಗಿ ನಿಭಾಯಿಸಲು ಸರ್ಕಾರ, ಸಂಸ್ಥೆಗಳಿಗೆ ಬೇಕಾದಂತೆ ಈ ಯೋಜನೆ ರೂಪಿಸಲಾಗಿದೆ. ಸೈಕ್ಲೋನ್ ಸೈರನ್, ಶೆಲ್ಟರ್ ಅಲ್ಲದೆ ರಸ್ತೆ ಗಳು, ಸೇತುವೆಗಳು, ಉಪ್ಪುನೀರು ತಡೆ ವ್ಯವಸ್ಥೆಗಳನ್ನೂ ನಿರ್ಮಿಸಲಾಗುತ್ತಿದೆ. ಜನರಿಗೂ ಹಲವು ಹಂತಗಳಲ್ಲಿ ತರಬೇತಿ ನೀಡಲಾಗುವುದು.
-ಶ್ರೀನಿವಾಸ ರೆಡ್ಡಿ, ನಿರ್ದೇಶಕರು, ಕೆಎಸ್‌ಡಿಎಂಎ