ತರೀಕೆರೆ: ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ತಾಲೂಕು ಕನಕ ನೌಕರರ ಬಳಗಕ್ಕೆ ಪುರಸಭೆಯೊಂದಿಗೆ ಚರ್ಚಿಸಿ ಅವಕಾಶವಿದ್ದರೆ ನಿವೇಶನ ಕೊಡಿಸುವುದಾಗಿ ಶಾಸಕ ಜಿ.ಎಚ್.ಶ್ರಿನಿವಾಸ್ ಭರವಸೆ ನೀಡಿದರು.
ಪಟ್ಟಣದ ಶ್ರೀಗುರು ರೇವಣಸಿದ್ದೇಶ್ವರ ಮಾಂಗಲ್ಯ ಮಂದಿರದಲ್ಲಿ ಭಾನುವಾರ ತಾಲೂಕು ಕನಕ ನೌಕರರ ಸಂಘದಿಂದ ಏರ್ಪಡಿಸಿದ್ದ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕನಕಶ್ರೀ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಬಹುತೇಕ ಇಲಾಖೆಗಳಲ್ಲಿ ಕುರುಬ ಸಮುದಾಯದ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ವಿವಿಧ ಸಮಸ್ಯೆ ಹೊತ್ತು ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಜನಸ್ನೇಹಿಗಳಾಗಬೇಕು. 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿನ 30 ವಿದ್ಯಾರ್ಥಿಗಳು ಶೇ.90ಕ್ಕಿಂತ ಅಧಿಕ ಫಲಿತಾಂಶ ಗಳಿಸಿ ಸಮಾಜದ ಘನತೆ ಹೆಚ್ಚಿಸಿದ್ದು, ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ ಗಳಿಸುವ ಮೂಲಕ ಸಮಾಜದ ಆಸ್ತಿಗಳಾಗಬೇಕು ಎಂದರು.
ಅನೇಕ ಅಡೆತಡೆಗಳ ನಡುವೆ ಪುನರಾರಂಭ ಮಾಡಿರುವ ಕನಕ ನೌಕರರ ಸಂಘ ಉತ್ತಮ ಚಿಂತನೆ ಹೊಂದಿದ್ದು, ಮತ್ತಷ್ಟು ಉತ್ತೇಜನಕಾರಿ ಕೆಲಸ ಮಾಡುವ ಹುಮ್ಮಸ್ಸಿನಲ್ಲಿದೆ. ಇನ್ನಷ್ಟು ಸದಸ್ಯರು ಸಂಘಕ್ಕೆ ಸೇರ್ಪಡೆಗೊಳ್ಳುವ ಮೂಲಕ ಸಂಘಟನೆ ಬಲಗೊಳಿಸಬೇಕು. ಬಿಬಿಎಂಪಿ ಎಎ ಎಚ್.ಕೆ.ತಿಪ್ಪೇಶ್ ಪ್ರತಿಭಾ ಪುರಸ್ಕಾರಕ್ಕೆ ಉತ್ತೇಜನ ನೀಡುತ್ತಿದ್ದು, ಎರಡು ವರ್ಷಗಳಿಂದ ಅದರ ವೆಚ್ಚ ಭರಿಸಿ ಔದಾರ್ಯ ತೋರುತ್ತಿದ್ದಾರೆ. ಸಂಘ ಅಂಥವರ ಸೇವೆ ಬಳಸಿಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆ ಕೀಲು ಮತ್ತು ಮೂಳೆ ತಜ್ಞ ಡಾ. ಟಿ.ಎಂ.ದೇವರಾಜ್ ಮಾತನಾಡಿ, ಹಿಂದುಳಿದ ಜನಾಂಗ ಮುಖ್ಯ ವಾಹಿನಿಗೆ ಬರಲು ಶಿಕ್ಷಣ ಮೂಲ ಕಾರಣ. ಪ್ರೋತ್ಸಾಹ ಇದ್ದಾಗ ಕಲಿಕೆ ಹಂತದಲ್ಲಿರುವ ಮಕ್ಕಳ ಗುರಿ ದೊಡ್ಡದಾಗಿರಬೇಕು. ಪ್ರತಿ ಕ್ಷೇತ್ರದಲ್ಲೂ ಸಾಧನೆಗೆ ಅವಕಾಶವಿದ್ದು, ಸಿಕ್ಕ ಅವಕಾಶ ಬಳಸಿ ಜೀವನದಲ್ಲಿ ಯಶಸ್ಸು ಸಾಧಿಸಬೇಕು. ಶಾಸಕರ ಸಹಕಾರದಿಂದ ಪಟ್ಟಣದಲ್ಲಿ 30 ಹಾಸಿಗೆಯುಳ್ಳ ಆಸ್ಪತ್ರೆ ಮಂಜೂರಾಗಿದ್ದು, ಸದ್ಯದಲ್ಲೇ ಆರಂಭವಾಗಲಿದೆ. ಸರ್ಕಾರಿ ಆಸ್ಪತ್ರೆಗೆ 1.40 ಕೋಟಿ ರೂ. ಸಿಎಸ್‌ಆರ್ ಅನುದಾನ ಮಂಜೂರಾಗಿದ್ದು, ಆದಷ್ಟು ಬೇಗ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ದಾನಿ ಟಿ.ಗೋವಿಂದಪ್ಪ ಅವರಿಗೆ ಕನಕಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುರಸಭೆ ಸದಸ್ಯರಾದ ಗಿರಿಜಾ, ವಸಂತ, ಮಾಜಿ ಅಧ್ಯಕ್ಷರಾದ ಟಿ.ಎಸ್.ಪ್ರಕಾಶ್‌ವರ್ಮ, ಟಿ.ಎಸ್.ರಮೇಶ್, ಸಿಡಿಪಿಒ ಎನ್.ಚರಣ್‌ರಾಜ್, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಿ.ಎಂ.ಮುರುಗೇಶಪ್ಪ, ತಾಲೂಕ ಕಸಾಪ ಅಧ್ಯಕ್ಷ ರವಿ ದಳವಾಯಿ, ತಾಲೂಕು ಕನಕ ನೌಕರರ ಬಳಗದ ಅಧ್ಯಕ್ಷ ಸಿ.ಎಸ್.ಬಸವರಾಜಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಟಿ.ತಿಪ್ಪೇಶಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಬಿ.ರಾಮಚಂದ್ರಪ್ಪ, ಟಿ.ಬಿ.ಶ್ರೀಧರ್, ಡಿ.ಎಲ್.ಹರೀಶ್, ಎಚ್.ಡಿ.ಓಂಕಾರಪ್ಪ, ಟಿ.ಶಿವಮೂರ್ತಿ, ಕೆ.ನಟರಾಜ್, ಡಿ.ಮಂಜುನಾಥ್, ಇ.ವೆಂಕಟೇಶ್, ಎಚ್.ಶೇಖರಪ್ಪ, ಟಿ.ಕೆ.ಜಗದೀಶ್‌ಕುಮಾರ್, ಬಿ.ಆರ್.ರಂಜಿತಾ ಇತರರಿದ್ದರು.