ಅರಣ್ಯ ಇಲಾಖೆ ಎದುರು ದಸಂಸ ಕಾರ್ಯಕರ್ತರ ಪ್ರತಿಭಟನೆ

ಪಿರಿಯಾಪಟ್ಟಣ: ತಾಲೂಕಿನ ಗಿರಿಗೂರಿನ ಮಿಳಿಂದ ವಿದ್ಯಾಸಂಸ್ಥೆ ಆವರಣದಲ್ಲಿ ಬೆಳೆದಿದ್ದ ತೇಗದ ಮರಗಳನ್ನು ಕಡಿದ ಆರೋಪಿಗಳನ್ನು ರಕ್ಷಿಸಲು ಅರಣ್ಯ ಇಲಾಖೆ ಮುಂದಾಗಿದೆ ಎಂದು ಆರೋಪಿಸಿ ದಸಂಸ ಕಾರ್ಯಕರ್ತರು ಅರಣ್ಯ ಇಲಾಖೆಯ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಮಿಳಿಂದ ವಿದ್ಯಾಸಂಸ್ಥೆ ಆವರಣದಲ್ಲಿ ಬೆಳೆದಿದ್ದ ತೇಗದ ಮರಗಳನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಅಕ್ರಮವಾಗಿ ಕಡಿದು ಅಡುಗೆ ಕೋಣೆಯಲ್ಲಿ ಸಂಗ್ರಹಿಸಿಟ್ಟಿರುವ ಕುರಿತು ಮಾಹಿತಿ ತಿಳಿದ ಅರಣ್ಯ ಇಲಾಖೆಯವರು ಸ್ಥಳಕ್ಕೆ ದಾಳಿ ನಡೆಸಿ ಮರದ ತುಂಡುಗಳನ್ನು ವಶಪಡಿಸಿಕೊಂಡು ಶಾಲೆಯ ಆಡಳಿತ ಮಂಡಳಿ ಸದಸ್ಯ ಅಣ್ಣಯ್ಯ ಎಂಬುವವರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿಕೊಂಡು ಬೇರೆಯವರನ್ನು ಕೈಬಿಟ್ಟಿದ್ದಾರೆ ಎಂದು ದೂರಿದರು.

ಈ ವೇಳೆ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಆರ್‌ಎಫ್‌ಒ ರತನ್‌ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ತಾಪಂ ಸದಸ್ಯ ಎಸ್.ರಾಮು, ಪ್ರಕರಣ ಸಂಬಂಧ ಸಂಸ್ಥೆ ಮುಖ್ಯಸ್ಥ ಎಚ್.ಗೋವಿಂದಯ್ಯ, ಸಿಬ್ಬಂದಿ ಸುರೇಶ್ ಹಾಗೂ ಅಣ್ಣಯ್ಯ ವಿರುದ್ಧ ದೂರು ನೀಡಿದ್ದರೂ ಇಬ್ಬರನ್ನು ಕೈಬಿಟ್ಟು ಪ್ರಕರಣ ದಾಖಲಿಸಿಕೊಳ್ಳಲು ಕಾರಣವೇನು ಎಂದು ಪ್ರಶ್ನಿಸಿದರು.

ಪ್ರಕರಣವನ್ನು ಎಆರ್‌ಎಫ್‌ಒ ರಾಮು ದಾಖಲಿಸಿದ್ದಾರೆ. ಈ ಬಗ್ಗೆ ನಾನು ತನಿಖೆ ನಡೆಸಿ ಉಳಿದವರು ತಪ್ಪಿತಸ್ಥರು ಎಂದು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ರತನ್‌ಕುಮಾರ್ ಹೇಳಿದಾಗ, ಅದನ್ನೊಪ್ಪದ ಪ್ರತಿಭಟನಾಕಾರರು ರಾಮು ಅವರನ್ನು ಕೂಡಲೇ ಅಮಾನತುಪಡಿಸಬೇಕು, ಸ್ಥಳಕ್ಕೆ ಎಸಿಎಫ್, ಡಿಸಿಎಫ್ ಬರಬೇಕು ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ಬಂದ ಎಸಿಎಫ್ ಸೋಮಯ್ಯ, ಪ್ರಕರಣದ ತನಿಖಾಧಿಕಾರಿಯನ್ನು ಬದಲಿಸಲಾಗುವುದು. ಜತೆಗೆ ಈ ಎಲ್ಲ ವಿಷಯವನ್ನು ಡಿಸಿಎಫ್ ಗಮನಕ್ಕೆ ತರಲಾಗುವುದು ಎಂಬ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ಈ ಸಂದರ್ಭ ದಸಂಸ ರಾಜ್ಯ ಸಹ ಸಂಚಾಲಕ ಸಿ.ಎಸ್.ಜಗದೀಶ್, ಮುಖಂಡರಾದ ಸಣ್ಣಪ್ಪ, ಮಲ್ಲಿಕಾ, ಗಿರೀಶ್, ಶಿವಪ್ರಕಾಶ್, ಶೇಖರ್, ರವಿ, ಚನ್ನಮ್ಮ, ಕಾಂತರಾಜು, ಕರಿಯಪ್ಪ, ಮಲ್ಲೇಶ್, ಶಿವರಾಜು, ಮಂಜು, ಮುನಿಯಪ್ಪ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *