ನಿಪ್ಪಾಣಿ: ವೇದಗಂಗಾ ನದಿಯಿಂದ ಜವಾಹರ ಕೆರೆಗೆ ನೀರು ತುಂಬಿಸುವ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ ಕೇಂದ್ರ ಸರ್ಕಾರದ ಅಮೃತ 2.0 ಯೋಜನೆಯಡಿ 32.83 ಕೋಟಿ ರೂ. ಅನುದಾನ ಅನುಮೋದನೆಗೊಂಡಿದ್ದು ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಶೀಘ್ರದಲ್ಲೆ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ತಾಲೂಕಿನ ಯಮಗರ್ಣಿ ಗ್ರಾಮದ ಜಾಕವೆಲ್ ಸ್ಥಳಕ್ಕೆ ನಗರಸಭೆ ಪದಾಧಿಕಾರಿಗಳು ಹಾಗೂ ಅಧಿಕಾರಿಗಳೊಂದಿಗೆ ಶನಿವಾರ ಭೇಟಿ ನೀಡಿ ಮಾತನಾಡಿ, ನಗರದಲ್ಲಿ 24್ಡ7 ನಿರಂತರ ನೀರು ಸರಬರಾಜು ಮಾಡಲು 15 ಲಕ್ಷ ಲೀಟರ್ ಸಾಮರ್ಥ್ಯದ 2 ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗುವುದು. ಮಳೆಗಾಲದಲ್ಲಿ ಯಮಗರ್ಣಿಯ ಜಾಕವೆಲ್‌ಗೆ ತೆರಳಲು ಅನುಕೂಲವಾಗುವಂತೆ ಮುಖ್ಯ ರಸ್ತೆಯಿಂದ ಜಾಕವೆಲ್‌ವರೆಗೂ ಸೇತುವೆ ನಿರ್ಮಿಸಲಾಗುವುದು ಎಂದರು.
ನಗರಕ್ಕೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಮುಂಬರುವ 20 ವರ್ಷಗಳವರೆಗೂ ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುವುದು. ಜವಾಹರ ಕೆರೆಯಲ್ಲಿ ನೀರಿನ ಶೇಖರಣೆ ಮಟ್ಟ ಹೆಚ್ಚಿಸುವ ಕುರಿತು ಜೈನ್ ಇರಿಗೇಶನ್ ಹಾಗೂ ಕೆಯುಡಬ್ಲೂಎಸ್ ಆಂಡ್ ಡಿಬಿ ಬೋರ್ಡ್ ಅಧಿಕಾರಿಗಳು, ಪೌರಾಯುಕ್ತ ದೀಪಕ ಹರದಿ ಅವರಿಗೆ ಸಲಹೆ ನೀಡಿದರು.
ಜೈನ್ ಇರಿಗೇಶನ್ ಪ್ರಾಜೆಕ್ಟ್ ಮ್ಯಾನೇಜರ್ ಲಕ್ಷ್ಮೀಕಾಂತ ಶೆಳ್ಳಗಿ, ಕೆಯುಡಬ್ಲೂಎಸ್ ಸಹಾಯಕ ಇಂಜಿನಿಯರ್ ರಾಜು ಗಾಯಕವಾಡ, ನೀರು ಸರಬರಾಜು ಮುಖ್ಯಸ್ಥ ಪ್ರವೀಣ ಕಣಗಲೆ, ನಗರಸಭೆ ಅಧ್ಯಕ್ಷೆ ಸೋನಲ್ ಕೋಠಡಿಯಾ, ಉಪಾಧ್ಯಕ್ಷ ಸಂತೋಷ ಸಾಂಗಾವಕರ, ಸದಸ್ಯರಾದ ಜಯವಂತ ಭಾಟಲೆ, ಸುರೇಖಾ ದೇಸಾಯಿ, ರಾಜು ಗುಂದೇಶಾ, ವಿಲಾಸ ಗಾಡಿವಡ್ಡರ, ಜಸರಾಜ ಗಿರೆ, ಸದ್ದಾಂ ನಗಾರಜಿ, ಸುನೀಲ ಪಾಟೀಲ, ಪ್ರಶಾಂತ ಕೆಸ್ತಿ, ರವಿ ಕದಂ, ಸುಜಾತಾ ಕದಂ ಇತರರು ಇದ್ದರು.