ಕೆರೆಗೆ ನೀರು ಹರಿಸಲು ಇಂದು ಪ್ರಾಯೋಗಿಕ ಚಾಲನೆ

ಗೊಳಸಂಗಿ: ಬತ್ತಿದ ಕೆರೆಗೆ ನೀರು ಹರಿಸುವ ಪ್ರಯತ್ನ ಕೊನೆಗೂ ಕೈಗೂಡುವ ಕಾಲ ಸನ್ನಿಹಿತವಾದ ಪರಿಣಾಮ ಅನ್ನದಾತರ ಬಹುದಿನದ ಕನಸು ಈಡೇರಿದಂತಾಗಿದೆ.

ರೈಲ್ವೆ ಸೇತುವೆ ಕಾಮಗಾರಿ ವಿಳಂಬಗೊಂಡು ಕಾಲುವೆಗೆ ನೀರು ಹರಿಯದೆ ಇದ್ದಾಗ ರೈತರ ಸಹನೆಯ ಕಟ್ಟೆ ಒಡೆದು ಹೋರಾಟದ ಹಾದಿ ತುಳಿದಿದ್ದರು. ಕೂಡಲೇ ಜಾಗೃತಗೊಂಡ ಆಲಮಟ್ಟಿ ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಪರ್ಯಾಯ ಮಾಗೋಪಾಯದತ್ತ ಮುಖ ಮಾಡಿ ತುರ್ತು ಪೈಪ್ ಮೂಲಕ ಕೆರೆಗೆ ನೀರು ಹರಿಸುವ ಪ್ರಯತ್ನ ಮುಂದುವರಿಸಿದರು. ಪರಿಣಾಮ ನ.15 ರಂದು ಬೆಳಗ್ಗೆ 9 ಗಂಟೆಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲರು ಗಂಗಾ ಪೂಜೆ ನೆರವೇರಿಸಿ ಕೆರೆಗೆ ನೀರು ಹರಿಸಲು ಪ್ರಾಯೋಗಿಕ ಚಾಲನೆ ನೀಡಲಿದ್ದಾರೆ. ಇದರಿಂದಾಗಿ 110 ಕಿ.ಮೀ. ವ್ಯಾಪ್ತಿಯ 15 ಕೆರೆಗಳಿಗೆ ಅಂದಾಜು 2.5 ಮೀಟರ್ ಸಾಮರ್ಥ್ಯದ ನೀರು ಪ್ರತಿ ಕೆರೆಗೆ ಪೂರೈಕೆಯಾಗಲಿದೆ. ಬಾಯಾರಿದ ದನಕರುಗಳ ದಾಹ ತಣಿಸುವ ಜತೆಗೆ ಅನ್ನದಾತರ ಅಲ್ಪಸ್ವಲ್ಪ ಜಮೀನೂ ಹಸಿಯಾಗುವ ಭರವಸೆಯಂತೂ ದೊರಕಿದೆ.