ಸಾಗರ: ರಕ್ತದ ಪ್ರಮಾಣ ಕಡಿಮೆ ಇದ್ದರೆ ಮಾನಸಿಕ, ದೈಹಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಭರತ್ ತಿಳಿಸಿದರು.

ತಾಲೂಕಿನ ಕೆಳದಿ ಭಾರತಿ ಪ್ರೌಢಶಾಲೆಯಲ್ಲಿ ಲಯನ್ಸ್ ಕ್ಲಬ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬಂದಗದ್ದೆ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ರಕ್ತದ ಗುಂಪು ವರ್ಗೀಕರಣ ಹಾಗೂ ಅದರ ಮಹತ್ವ ಕುರಿತು ಮಾಹಿತಿ ನೀಡುವ ಕಾರ್ಯಾಗಾರದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ರಕ್ತದ ಗುಂಪು ಯಾವುದೆಂಬುದನ್ನು ತಿಳಿದುಕೊಳ್ಳಬೇಕು. ಅಪಘಾತದಂತಹ ಸಂದರ್ಭದಲ್ಲಿ ರಕ್ತದ ಗುಂಪಿನ ಮಾಹಿತಿ ಅಗತ್ಯವಿರುತ್ತದೆ. ಆಪತ್ ಕಾಲದಲ್ಲಿ 18 ವರ್ಷ ತುಂಬಿದ ವಿದ್ಯಾರ್ಥಿಗಳು ರಕ್ತ ಕೊಡಬೇಕಾದ ಸಂದರ್ಭ ಹೆಚ್ಚು ಅನುಕೂಲವಾಗುತ್ತದೆ. ಹಿಮೋಗ್ಲೋಬಿನ್ ಪರೀಕ್ಷೆ ಹೆಣ್ಣು ಮಕ್ಕಳಿಗೆ ಅಗತ್ಯ. ರಕ್ತಹೀನತೆಗೆ ಜಂತುಹುಳು ಕಾರಣ. ಸೂಕ್ತ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಲಯನ್ಸ್ ಸಂಸ್ಥೆ ಅಧ್ಯಕ್ಷೆ ಪ್ರಭಾವತಿ ಶ್ರೀಧರ್ ಮಾತನಾಡಿ, ನಮ್ಮ ಸಂಸ್ಥೆಯ ಕಾರ್ಯಕ್ರಮಗಳು ಕೇವಲ ಪಟ್ಟಣ ಕೇಂದ್ರೀಕೃತವಾಗಿರದೆ ಗ್ರಾಮಾಂತರ ಜನರಿಗೂ ತಲುಪಬೇಕು ಎಂಬ ಆಶಯದಿಂದ ಇಲ್ಲಿ ರಕ್ತ ಗುಂಪು, ವರ್ಗೀಕರಣ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ. ಪ್ರೌಢಶಾಲೆ ವಿದ್ಯಾರ್ಥಿನಿಯರು ತಮ್ಮ ಆರೋಗ್ಯದ ಬಗ್ಗೆ ಸ್ವಚ್ಛತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ದೈಹಿಕ ಶುಚಿತ್ವದಿಂದ ಅನಾರೋಗ್ಯವನ್ನು ದೂರವಿಡಬಹುದು. ಸೊಪ್ಪು, ತರಕಾರಿ ಬಳಕೆಯಿಂದ ರಕ್ತಹೀನತೆ ನಿವಾರಿಸಿಕೊಳ್ಳಬಹುದು ಎಂದರು.
ಹಿರಿಯ ಆರೋಗ್ಯ ಮೇಲ್ವಿಚಾರಕಿ ಜಿ.ಸವಿತಾ ಅವರು ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಹರಿಹರೆಯದ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ಕೆಳದಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಬಿ.ವಿ.ಚಂದ್ರಶೇಖರ್ ಬೆಳೆಯೂರು ಅಧ್ಯಕ್ಷತೆ ವಹಿಸಿದ್ದರು.
ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಸವಿತಾ ಮಹಾಬಲೇಶ್, ಖಜಾಂಚಿ ಎಚ್.ಎಂ.ನಾಗರಾಜ್, ಲಯನ್ಸ್ ಜಿಲ್ಲಾ ಸಂಪುಟ ಸಮಿತಿ ಸದಸ್ಯ ಇ.ಡಿ.ಶ್ರೀಧರ್ ಈಳಿ, ಸದಸ್ಯರಾದ ಡಾ. ಪ್ರಸನ್ನ, ಅರ್ಚನಾ, ಕಿರಿಯ ಆರೋಗ್ಯ ಸುರಕ್ಷಾಧಿಕಾರಿ ಸುಚಿತ್ರಾ, ಕ್ಷಯರೋಗ ಪ್ರಯೋಗ ಶಾಲೆ ತಂತ್ರಜ್ಞ ರಾಘವೇಂದ್ರ, ಆರೋಗ್ಯ ಇಲಾಖೆಯ ನಿರ್ಮಲಾ, ಶಾಲಾ ಮುಖ್ಯಶಿಕ್ಷಕ ಸುರೇಶ್ ಇತರರಿದ್ದರು.