ನಿಖರ ಮುನ್ಸೂಚನೆ ಮೂಲಕ ಶೂನ್ಯ ಪ್ರಾಣಹಾನಿ ಗುರಿಸಾಧಿಸಿದ ಭಾರತೀಯ ಸರ್ಕಾರಕ್ಕೆ ವಿಶ್ವಸಂಸ್ಥೆಯ ಅಭಿನಂದನೆ

ವಿಶ್ವಸಂಸ್ಥೆ: ಅತ್ಯಂತ ಪ್ರಬಲವಾದ ಫೊನಿ ಚಂಡಮಾರುತದ ಕುರಿತು ನಿಖರವಾದ ಮುನ್ಸೂಚನೆ ನೀಡಿ, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಹಕರಿಸಿ ಹೆಚ್ಚಿನ ಪ್ರಾಣಹಾನಿ ತಪ್ಪಿಸಿದ್ದಕ್ಕಾಗಿ ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳನ್ನು ವಿಶ್ವಸಂಸ್ಥೆ ಅಭಿನಂದಿಸಿದೆ.

ಕಳೆದೆರಡು ದಶಕಗಳಲ್ಲಿ ಭಾರತದಲ್ಲಿ ಕಾಣಿಸಿಕೊಂಡ ಅತ್ಯಂತ ಪ್ರಬಲ ಚಂಡಮಾರುತ ಎಂದು ಹೇಳಲಾದ ಫೊನಿ ಚಂಡಮಾರುತ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಪುರಿಯಲ್ಲಿ ಭೂಮಿಗೆ ಅಪ್ಪಳಿಸಿತು. ಇದರ ಹೊಡೆತಕ್ಕೆ ಸಿಲುಕಿ ಕೇವಲ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಭಸವಾದ ಗಾಳಿ ಜತೆಗೂಡಿ ಭಾರಿ ಮಳೆಯಾಗಿದ್ದರಿಂದ ಇಡೀ ಪುರಿ ನಗರ ಜಲಾವೃತಗೊಂಡಿತ್ತು.

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಶೂನ್ಯ ಪ್ರಾಣಹಾನಿ ಸಾಧಿಸುವ ನಿಟ್ಟಿನಲ್ಲಿ ಸೆನ್​ಡಾಯ್​ ಫ್ರೇಮ್​ವರ್ಕ್​ ಅನ್ನು ಅನುಷ್ಠಾನಗೊಳಿಸುವಲ್ಲಿ ಬದ್ಧತೆ ತೋರಿದ್ದಕ್ಕಾಗಿ ವಿಪತ್ತು ಅಪಾಯ ಕಡಿಮೆಗೊಳಿಸುವ ವಿಶ್ವಸಂಸ್ಥೆಯ ವಿಭಾಗದ ಮಹಾಪ್ರಧಾನ ಕಾರ್ಯದರ್ಶಿಯ ವಿಶೇಷ ಪ್ರತಿನಿಧಿ ಮಮಿ ಮಿಜುಟೊರಿ ಭಾರತವನ್ನು ಅಭಿನಂದಿಸಿದ್ದಾರೆ.

ಏನಿದು ಸೆನ್​ಡಾಯ್​ ಫ್ರೇಮ್​ವರ್ಕ್​?
2015-2030ರ ಅವಧಿಯಲ್ಲಿ ವಿಪತ್ತು ಅಪಾಯ ಕಡಿಮೆಗೊಳಿಸುವ ನಿಟ್ಟಿನಲ್ಲಿ ಮಾಡಿಕೊಳ್ಳಲಾಗಿರುವ ಮೊಟ್ಟಮೊದಲ ಜಾಗತಿಕ ಒಪ್ಪಂದವಾಗಿದೆ. 2015ರ ನಂತರದಲ್ಲಿ ಮಾಡಿಕೊಳ್ಳಲಾಗಿರುವ ಅತಿ ಮುಖ್ಯವಾದ ಒಪ್ಪಂದ ಇದಾಗಿದೆ. ಪ್ರಾಕೃತಿಕ ವಿಪತ್ತಿನ ಸಂದರ್ಭದಲ್ಲಿ ಪ್ರಾಣ, ಆಸ್ತಿಪಾಸ್ತಿ ಹಾನಿ ಕಡಿಮೆಗೊಳಿಸುವ ನಿಟ್ಟಿನಲ್ಲಿ ಸ್ವಪ್ರೇರಣೆಯಿಂದ ಕ್ರಮ ಕೈಗೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಸ್ಥಳೀಯ ಸರ್ಕಾರ, ಆಡಳಿತ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳ ನೆರವಿನೊಂದಿಗೆ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿರುತ್ತದೆ.

ಫೊನಿ ಚಂಡಮಾರುತದ ಸಂದರ್ಭದಲ್ಲಿ ಭಾರತೀಯ ಸರ್ಕಾರ ಶೂನ್ಯ ಪ್ರಮಾಣದ ಪ್ರಾಣಹಾನಿಯ ಗುರಿ ಸಾಧಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು ಶ್ಲಾಘನೀಯ. ಮೊದಲಿಗೆ ಹವಾಮಾನ ಇಲಾಖೆ ನೆರವಿನಿಂದ ಸರ್ಕಾರ ಚಂಡಮಾರುತ ಅಪ್ಪಳಿಸುವ ಸ್ಥಳ ಮತ್ತು ಪ್ರದೇಶದ ಕುರಿತು ನಿಖರವಾದ ಮುನ್ಸೂಚನೆ ಪಡೆದುಕೊಂಡಿತು. ಬಳಿಕ ಪ್ರಬಲಾತಿ ಪ್ರಬಲ ಚಂಡಮಾರುತದ ಹಾವಳಿಯನ್ನು ತಡೆದುಕೊಳ್ಳಬಹುದಾದ 880 ವಿಶೇಷ ಶಿಬಿರಗಳು ಒಳಗೊಂಡು ನಿರ್ಮಿಸಲಾಗಿರುವ 4 ಸಾವಿರ ಶಿಬಿರಗಳಿಗೆ 12 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿತು. ತನ್ಮೂಲಕ ಶೂನ್ಯ ಪ್ರಾಣಹಾನಿಯ ಗುರಿಯನ್ನು ಸಾಧಿಸಿತು ಎಂದು ಯುಎನ್​ಐಎಸ್​ಡಿಆರ್​ ವಕ್ತಾರ ಡೆನಿಸ್​ ಮೆಕ್​ಕ್ಲೀನ್​ ಹೇಳಿದ್ದಾರೆ.

One Reply to “ನಿಖರ ಮುನ್ಸೂಚನೆ ಮೂಲಕ ಶೂನ್ಯ ಪ್ರಾಣಹಾನಿ ಗುರಿಸಾಧಿಸಿದ ಭಾರತೀಯ ಸರ್ಕಾರಕ್ಕೆ ವಿಶ್ವಸಂಸ್ಥೆಯ ಅಭಿನಂದನೆ”

  1. The action of Government,both central and state is highly laudable. This is more so,as the authorities,did not take umbrage under Election duty!
    Another thing Election commission to take note is in whichever state elections are over,the model code should be withdrawn. Because governments have been dysfunctional and functionaries do not take any decisions even for routine matters!

Comments are closed.