ಏರ್​ಪೋರ್ಟ್​ನಿಂದ ಪಿಂಕ್ ಟ್ಯಾಕ್ಸಿ 24/7 ಸೇವೆ ಶುರು

ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮಹಿಳೆಯರಿಗಾಗಿ ಆರಂಭಿಸಿರುವ ಮಹಿಳೆಯರೇ ಚಲಾಯಿಸುವ ಗುಲಾಬಿ ಕಾರು (ಪಿಂಕ್ ಟ್ಯಾಕ್ಸಿ) ಸೇವೆಗೆ ಸೋಮವಾರ ನಿಗಮದ ಎಂಡಿ ಕುಮಾರ ಪುಷ್ಕರ್ ಚಾಲನೆ ನೀಡಿದರು.

ಮಹಿಳೆಯರೇ ಚಾಲಕರಾಗಿರುವ 10 ಹೊಸ ಕಾರುಗಳು ರಸ್ತೆಗೆ ಇಳಿದಿವೆ. ಇವು ಮಹಿಳೆಯರಲ್ಲಿ ನಿರಾಳತೆ ಹಾಗೂ ಭದ್ರತೆ ಭಾವ ತರಲಿದೆ ಎಂದು ಕುಮಾರ ಪುಷ್ಕರ್ ಹೇಳಿದರು. ಬಿಐಎಎಲ್​ನ ಎಂಡಿ ಮತ್ತು ಸಿಇಒ ಹರಿ ಮರಾರ್ ಮಾತನಾಡಿ, ಮಹಿಳೆಯರ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಮಹಿಳಾ ಸಬಲೀಕರಣದೊಂದಿಗೆ, ಅವರ ಸುರಕ್ಷತೆ ‘ಪಿಂಕ್ ಟ್ಯಾಕ್ಸಿ’ ಪರಿಕಲ್ಪನೆಯಲ್ಲಿರುವುದು ಸ್ವಾಗತಾರ್ಹ ಎಂದರು.

ಹಗಲಿರುಳು ಕಾರ್ಯನಿರ್ವಹಣೆ: ಪಿಂಕ್ ಟ್ಯಾಕ್ಸಿ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ (ಪ್ರತಿ ಕಿ.ಮೀ.ಗೆ 21.5 ರೂ.) ಹಾಗೂ ರಾತ್ರಿ 12 ಗಂಟೆಯಿಂದ ಬೆಳಗ್ಗೆ 6ರವರೆಗೆ (ಪ್ರತಿ ಕಿ.ಮೀ.ಗೆ 23.50 ರೂ.) ದರ ನಿಗದಿ ಮಾಡಲಾಗಿದ್ದು, ಹಗಲಿರುಳು ಕಾರ್ಯನಿರ್ವಹಿಸಲಿದೆ. ವಿಮಾನ ನಿಲ್ದಾಣದ ಮಹಿಳಾ ಪ್ರಯಾಣಿಕರು ಈ ಟ್ಯಾಕ್ಸಿ ಸೇವೆಯ ಸದುಪಯೋಗ ಮಾಡಿಕೊಳ್ಳಬೇಕು. ಕೆಎಸ್​ಟಿಡಿಸಿಯ 24 ಗಂಟೆ ಕಾರ್ಯನಿರ್ವಹಿಸುವ ಸಂಪರ್ಕ ಕೇಂದ್ರ ಸಂಖ್ಯೆ 080-4466 4466ಗೆ ಕರೆ ಮಾಡಬಹುದು.

Leave a Reply

Your email address will not be published. Required fields are marked *