ನವದೆಹಲಿ: ವಿಮಾನಗಳು ಹಾರಾಡುವ ಎತ್ತರದಲ್ಲಿ ಮನುಷ್ಯನೊಬ್ಬ ತೇಲುತ್ತಿದ್ದರೆ ಹೇಗಿರುತ್ತೆ?… ಖಂಡಿತ ಪೈಲಟ್ಗಳಿಗೆ ಶಾಕ್ ಆಗುತ್ತೆ…!
ಸಿನಿಮಾಗಳಲ್ಲಷ್ಟೇ ಸಾಧ್ಯವಾಗುವ ಇಂಥದ್ದೊಂದು ವಿದ್ಯಮಾನ ಅಮೆರಿಕದ ಲಾಸ್ ಎಂಜಲೀಸ್ ನಗರದಲ್ಲಿ ಜರುಗಿದೆ.
ಲಾಸ್ ಎಂಜಲೀಸ್ ವಿಮಾನ ನಿಲ್ದಾಣದ ಆಗಸದಲ್ಲಿ ವ್ಯಕ್ತಿಯೊಬ್ಬ ಜೆಟ್ಪ್ಯಾಕ್ ಅಳವಡಿಸಿಕೊಂಡು 3,000 ಅಡಿ ಎತ್ತರದಲ್ಲಿ ಹಾರಾಡುತ್ತಿದುದಾಗಿ ಅಮೆರಿಕ ಏರ್ಲೈನ್ಸ್ ವಿಮಾನದ ಪೈಲಟ್ಗಳು ಹೇಳಿದ್ದಾರೆ.
ಇದನ್ನೂ ಓದಿ; ಬಸ್ನಲ್ಲಿದ್ದ ವ್ಯಕ್ತಿಯಿಂದ 23 ಪ್ರಯಾಣಿಕರಿಗೆ ಕರೊನಾ ಸೋಂಕು; ಗಾಳಿಯಿಂದ ಹರಡುತ್ತಿದೆ ಎನ್ನಲು ಇದುವೇ ನಿದರ್ಶನ?
ಅದರಲ್ಲೂ ವಿಮಾನಕ್ಕೆ ಕೇವಲ 300 ಗಜಗಳಷ್ಟು ಸಮೀಪದಲ್ಲಿದ್ದ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಎರಡು ಬೇರೆ ಬೇರೆ ವಿಮಾನಗಳ ಪೈಲಟ್ಗಳು ಜೆಟ್ ಪ್ಯಾಕರ್ನನ್ನು ನೋಡಿದ್ದಾರೆ. ಭಾನುವಾರ ಸಂಜೆ 6.30ರಲ್ಲಿ ವಿಮಾನ ನಿಲ್ದಾಣ ಸಮೀಪಿಸುತ್ತಿದ್ದಂತೆ ಲ್ಯಾಂಡಿಂಗ್ಗೆ ಸಜ್ಜಾಗುತ್ತಿದ್ದಾಗ ಹಾರಾಡುತ್ತಿದ್ದ ವ್ಯಕ್ತಿಯನ್ನು ಗುರುತಿಸಿದ್ದಾಗಿ ಒಬ್ಬ ಪೈಲಟ್ ಹೇಳಿದ್ದಾರೆ.
ನಾವು ಈಗಷ್ಟೇ ಜೆಟ್ ಪ್ಯಾಕ್ನಲ್ಲಿ ಹಾರಾಡುತ್ತಿದ್ದ ವ್ಯಕ್ತಿಯನ್ನು ದಾಟಿದ್ದೇವೆ ಎಂದು ಪೈಲಟ್ ಹೇಳಿರುವುದು ವಿಮಾನ ಹಾರಾಟ ನಿಯಂತ್ರಣ ಕೇಂದ್ರದಲ್ಲಿ ದಾಖಲಾಗಿದೆ. ಆತ ವಿಮಾನದ ಎಡಭಾಗಕ್ಕೆ 300 ಗಜ ದೂರದಲ್ಲಿದ್ದ. ಈಗ ವಿಮಾನ 3000 ಅಡಿ ಎತ್ತರದಲ್ಲಿದೆ ಎಂದು ಪೈಲಟ್ ಮಾಹಿತಿ ನೀಡಿದ್ದಾನೆ. ಇದಾಗುತ್ತಿದ್ದಂತೆ ವಿಮಾನ ಹಾರಾಟ ನಿಯಂತ್ರಣ ಕೇಂದ್ರದಿಂದ ಎಲ್ಲ ವಿಮಾನಗಳಿಗೂ ಮಾಹಿತಿ ರವಾನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.