ಪಾನಮತ್ತನಾಗಿ ಲಂಡನ್​ಗೆ ತೆರಳಬೇಕಿದ್ದ ವಿಮಾನವೇರಿ ವಜಾಗೊಂಡ, ಈಗ ಉತ್ತರ ಪ್ರಾಂತ್ಯದ ಪ್ರಾದೇಶಿಕ ನಿರ್ದೇಶಕನಾದ!

ನವದೆಹಲಿ: ಇದು ಆಗಿದ್ದು 2018 ನವೆಂಬರ್​ನಲ್ಲಿ. ಆಗ ಏರ್​ ಇಂಡಿಯಾ ವಿಮಾನದ ಸೀನಿಯರ್​ ಪೈಲಟ್​ ಆಗಿದ್ದ ಕ್ಯಾಪ್ಟನ್​ ಅರವಿಂದ್​ ಕಟ್​ಪಾಲಿಯಾ ಕಾರ್ಯಾಚರಣೆ ವಿಭಾಗದ ನಿರ್ದೇಶಕರಾಗಿದ್ದರು. ಪೈಲಟ್​ ಹುದ್ದೆಯಿಂದ ವಜಾಗೊಂಡಿದ್ದ ಅವರು 2019ರ ಏಪ್ರಿಲ್​ 30ರಂದು ಏರ್​ ಇಂಡಿಯಾದ ಉತ್ತರ ಪ್ರಾಂತ್ಯದ ಪ್ರಾದೇಶಿಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ.

ಏ.30ರಂದು ಸೇವಾ ನಿವೃತ್ತಿ ಹೊಂದಿದ ಪಂಕಜ್​ ಕುಮಾರ್​ ಅವರ ಸ್ಥಾನದಲ್ಲಿ ಅರವಿಂದ್​ ಕಾಟ್​ಪಾಲಿಯಾ ಕಾರ್ಯನಿರ್ವಹಿಸಲಿದ್ದಾರೆ. ಬುಧವಾರದಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಏರ್​ ಇಂಡಿಯಾದ ಅಧಿಸೂಚನೆ ತಿಳಿಸಿದೆ. ಆದರೆ, ಈ ನೇಮಕಾತಿಗೆ ಏರ್​ ಇಂಡಿಯಾದ ಪೈಲಟ್​ಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು, ನಿಯಮಗಳನ್ನು ಮೀರಿ ಅರವಿಂದ ಕಾಟ್​ಪಾಲಿಯಾ ಅವರನ್ನು ಪ್ರಾದೇಶಿಕ ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಆದರೆ, ಕಾಟ್​ಪಾಲಿಯಾ ಅವರ ನೇಮಕಾತಿಯನ್ನು ಸಮರ್ಥಿಸಿಕೊಂಡಿರುವ ಏರ್​ ಇಂಡಿಯಾ ಸಂಸ್ಥೆಯ ವಕ್ತಾರ ಧನಂಜಯ್​ ಕುಮಾರ್​, ಕಾನೂನಿನ ಪ್ರಕಾರವೇ ಕಾಟ್​ಪಾಲಿಯಾ ಅವರನ್ನು ಪ್ರಾದೇಶಿಕ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಈ ಮೊದಲು ಅವರು ಕಾರ್ಯಾಕಾರಿ ನಿರ್ದೇಶಕರಾಗಿದ್ದರು. ಈಗ ಅದಕ್ಕೆ ತತ್ಸಮಾನವಾದ ಪ್ರಾದೇಶಿಕ ನಿರ್ದೇಶಕ ಹುದ್ದೆಗೆ ನೇಮಿಸಲಾಗಿದೆ ಎಂದು ಹೇಳಿದ್ದಾರೆ.

ಅಂದು ಏನಾಗಿತ್ತು?
ಅದು ಏರ್​ ಇಂಡಿಯಾದ ವಿಮಾನ. ನವದೆಹಲಿಯಿಂದ ಲಂಡನ್​ಗೆ ತೆರಳಲಿದ್ದ ಎಐ-111 ಬೋಯಿಂಗ್​ 787 ಡ್ರೀಮ್​ಲೈನರ್​ ವಿಮಾನದ ಪೈಲಟ್​ ಆಗಿದ್ದ ಕ್ಯಾಪ್ಟನ್​ ಅರವಿಂದ ಕಟ್​ಪಾಲಿಯಾ ಪಾನಮತ್ತರಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಕಡ್ಡಾಯ ಮದ್ಯಪಾನ ಪರೀಕ್ಷೆಗೆ ಒಳಪಡಿಸಿದಾಗ ಅವರ ರಕ್ತದಲ್ಲಿರಬೇಕಾದ ಆಲ್ಕೋಹಾಲ್​ ಪ್ರಮಾಣ ಗರಿಷ್ಠ ಮಟ್ಟದಲ್ಲಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಪೈಲಟ್​ ಸ್ಥಾನದಿಂದ ವಜಾಗೊಳಿಸಲಾಗಿತ್ತು.

3 ವರ್ಷದ ಅವಧಿಗೆ ಅವರ ಪೈಲಟ್​ ಲೈಸೆನ್ಸ್​ ಅನ್ನು ರದ್ದುಗೊಳಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಆದೇಶಿಸಿತ್ತು. ಸಾಲದ್ದಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ ಕಾರ್ಯಾಚರಣೆ ವಿಭಾಗದ ನಿರ್ದೇಶಕ ಸ್ಥಾನದಿಂದ ಕಿತ್ತೊಗೆಯುವಂತೆ ಏರ್​ ಇಂಡಿಯಾ ಸಂಸ್ಥೆಗೆ ಸೂಚಿಸಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *