ಸೂರ್ಯ ಕಿರಣ ವಿಮಾನಗಳ ಡಿಕ್ಕಿ: ಸಹಾಯ ಮಾಡಿದ ಯುವಕರಿಗೆ ಧನ್ಯವಾದ ಹೇಳಿದ ಪೈಲಟ್

ಬೆಂಗಳೂರು: ಏರೋ ಇಂಡಿಯಾ ಶೋ ಮುನ್ನಾ ದಿನ ನಡೆದಿದ್ದ ವಿಮಾನ ಅಪಘಾತದಲ್ಲಿ ಗಾಯಗೊಂಡಿದ್ದ ವಿಂಗ್​ ಕಮಾಂಡರ್​ ವಿಜಯ್​ ಶೇಲ್ಕೆ ಅಪಘಾತ ನಡೆದಾಗ ತಮಗೆ ಸಹಾಯ ಮಾಡಿದ್ದ ಇಬ್ಬರು ಯುವಕರನ್ನು ಭೇಟಿ ಮಾಡಿ ಧನ್ಯವಾದ ಅರ್ಪಿಸಿದ್ದಾರೆ.

ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯ್​ ಮತ್ತು ಅವರ ತಂದೆ ಶುಕ್ರವಾರ ಇಬ್ಬರು ಯುವಕರನ್ನು ಆಸ್ಪತ್ರೆಗೆ ಕರೆಸಿಕೊಂಡು ಧನ್ಯವಾದ ಅರ್ಪಿಸಿದ್ದಾರೆ.

ಫೆ. 19ರಂದು ತಾಲೀಮು ವೇಳೆ 2 ಸೂರ್ಯ ಕಿರಣ್​ ವಿಮಾನಗಳು ಆಕಾಶದಲ್ಲೇ ಡಿಕ್ಕಿಯಾಗಿ ಪತನಗೊಂಡಿದ್ದವು. ವಿಮಾನದಲ್ಲಿದ್ದ ಪೈಲಟ್​ಗಳಾದ ವಿಜಯ್ ಮತ್ತು ಸ್ಕ್ವಾಡ್ರನ್ ಲೀಡರ್​ ತೇಜೇಶ್ವರ್ ಸಿಂಗ್ ಪ್ಯಾರಾಚೂಟ್ ಧರಿಸಿ ಏರ್​ಕ್ರಾಫ್ಟ್​ನಿಂದ ಹೊರ ಜಿಗಿದಿದ್ದರು. ಕಳೆಗೆ ಇಳಿಯುವಾಗ ಈ ಇಬ್ಬರೂ ಗಾಯಗೊಂಡಿದ್ದರು. ತಕ್ಷಣ ಸಮೀಪದಲ್ಲಿದ್ದ ಚೇತನ್​ ಮತ್ತು ಆತನ ಸ್ನೇಹಿತರು ವಿಜಯ್​ ಅವರ ಸಹಾಯಕ್ಕೆ ಧಾವಿಸಿದ್ದರು.

ವಿಜಯ್​ ಅವರಿಗೆ ನೀರು ಕುಡಿಸಿ ಧೈರ್ಯ ತುಂಬಿ ಆರೈಕೆ ಮಾಡಿದ್ದರು. ಈ ಸಂದರ್ಭದಲ್ಲಿ ವಿಜಯ್​ ಅವರು ಯುವಕರ ಮಾಹಿತಿ ಪಡೆದುಕೊಂಡಿದ್ದರು.