More

    ಧರ್ಮದಿಂದಲೇ ಭೌತಿಕ ಅಭ್ಯುದಯ, ಆಧ್ಯಾತ್ಮಿಕ ಔನ್ನತ್ಯ

    ಧರ್ಮದಿಂದಲೇ ಭೌತಿಕ ಅಭ್ಯುದಯ, ಆಧ್ಯಾತ್ಮಿಕ ಔನ್ನತ್ಯಇಂದ್ರಿಯನಿಗ್ರಹ ಇಲ್ಲದವರ, ದುರ್ಬಲರ ಕೈಯಲ್ಲಿ ಧರ್ಮ ತನ್ನ ಪ್ರಭಾವವನ್ನು ಬೀರಲಾರದೇ ಹೋಯಿತು. ಮಿತಿಮೀರಿದ ಇಂದ್ರಿಯಸುಖದ ಸಂತೃಪ್ತಿಗಾಗಿ ನಿರ್ವಹಿಸಲ್ಪಟ್ಟ ಚಟುವಟಿಕೆಗಳು ಮಾನವನನ್ನು ಶಾರೀರಿಕ, ಮಾನಸಿಕ ರೋಗಗಳಿತ್ತು ಬಲಿಗೆಡವಿತು ಎಂಬ ಸತ್ಯವನ್ನು ಇತಿಹಾಸ ದಾಖಲಿಸಿದೆ. ಭಾರತದಲ್ಲಿಯೂ ಸಮಾಜವಾದ ಎಂಬುದೊಂದು ಮೋಸವಾಗಿ ದಾಖಲಾಯ್ತು.

    ಎರಡು ಜಾಗತಿಕ ಯುದ್ಧಗಳು, ಸೆರೆಶಿಬಿರಗಳು ಮತ್ತು ವ್ಯವಸ್ಥಿತ ಮಾನವ ಹತ್ಯಾಕಾಂಡಗಳು ಘಟಿಸಿದ ನಂತರ ಜನರಲ್ ಓಮರ್ ಬ್ರ್ಯಾಡ್ಲಿಯ ಮಾತುಗಳು ಜಗತ್ತಿನ ಸ್ಥಿತಿಯನ್ನು ನಮ್ಮ ಮುಂದಿಟ್ಟು ಚಿಂತಾಕ್ರಾಂತರನ್ನಾಗಿಸುವುದು ಸುಳ್ಳಲ್ಲ. ಅವನೆನ್ನುತ್ತಾನೆ: ‘ಜಗತ್ತು ಇಂದು ಹೆಚ್ಚಿನ ಸಂಖ್ಯೆಯ ವಿಜ್ಞಾನಿಗಳನ್ನು ಹೊಂದಿದೆ, ಆದರೆ ದೈವೀ ಪುರುಷರು ಅತಿ ಕಡಿಮೆ. ಅಣುವಿನ ರಹಸ್ಯವನ್ನು ಬೇಧಿಸಿದ ನಾವು ಪರ್ವತದ ಮೇಲೆ ಮೊಳಗಿದ ಸಂತಸಂದೇಶವನ್ನು ತಿರಸ್ಕರಿಸಿದ್ದೇವೆ. ಜಗತ್ತು ಇಂದು ಸಾಧಿಸಿರುವುದು ಆತ್ಮಸಾಕ್ಷಿರಹಿತ ಬಲ ಮತ್ತು ವಿವೇಕರಹಿತ ಪ್ರಸಿದ್ಧಿ! ಜಗತ್ತಿನ ಜನರೋ ಅಣುವಿಜ್ಞಾನದಲ್ಲಿ ದಿಗ್ಗಜರು, ನೈತಿಕತೆಯಲ್ಲಿ ಶಿಶುಗಳು! ಜಗತ್ತು ನಮಗಿಂದು ಶಾಂತಿಗಿಂತ ಅಧಿಕವಾಗಿ ಯುದ್ಧಗಳ ಕುರಿತು ಮತ್ತು ಬದುಕಿಸುವುದಕ್ಕಿಂತ ಹೆಚ್ಚಾಗಿ ಸಾಯಿಸುವುದನ್ನು ಪರಿಚಯಿಸುತ್ತ ಸಾಗಿದೆ’.

    ಬ್ರ್ಯಾಡ್ಲಿಯ ಮಾತುಗಳು ವಾಸ್ತವಸ್ಥಿತಿಯನ್ನು ಚಿತ್ರಿಸಿದರೂ ಇದು ಉದ್ಧಾರದ ಹೆದ್ದಾರಿಗೆ ನಾವು ಸನ್ನದ್ಧರಾಗಬೇಕೆಂದು ಎಚ್ಚರಿಸುತ್ತದೆ. ‘ಪ್ರಪಂಚದೊಂದಿಗೆ ತನಗಿರುವ ಸಂಬಂಧವನ್ನು ಮಾನವನು ಅರಿತುಕೊಳ್ಳದಿದ್ದರೆ ಅವನ ಪಾಲಿಗೆ ಅವನು ವಾಸಿಸುವ ಸ್ಥಳವೇ ಸೆರೆಮನೆಯಾಗುತ್ತದೆ’ ಎಂಬ ವಿಶ್ವಕವಿ ರವೀಂದ್ರನಾಥ ಟ್ಯಾಗೋರರ ಮಾತು ಆಲೋಚನೀಯ. An institution is the lengthened shadow of man ಅಲ್ಲವೇ? ಜೀವನ ಎಂಬುದು ಪ್ರಕೃತಿಯ ಕೊಡುಗೆ ಎಂದಾದರೂ ಸುಂದರ ಜೀವನ ವಿವೇಕದ ಕೊಡುಗೆ!

    ಅನಾದಿಕಾಲದಿಂದಲೂ ಮನುಷ್ಯನು ತನ್ನ ಬಗ್ಗೆ ತಾನೇ ಕೈಗೊಂಡ ಸಂಶೋಧನೆ ಗಳು ಅವನ ವಿರಾಟ್ ವ್ಯಕ್ತಿತ್ವವನ್ನು ಅನಾವರಣಗೊಳಿಸಿದೆ. ಅವನ ಬದುಕಿನ ವಿವಿಧ ಆಯಾಮಗಳನ್ನು ಕಾಲಘಟ್ಟಕ್ಕೆ ಅನುಗುಣವಾಗಿ, ಮನೋಧರ್ಮವನ್ನಾಧರಿಸಿ ಪರಿಚಯಿಸಿದೆ. ತನ್ನ ಬದುಕಿನ ಪಯಣ ‘ಸಾಮಾನ್ಯ ಸ್ಥಿತಿಯಿಂದ ಉನ್ನತಿಯೆಡೆಗೆ’ ಎಂಬ ಸತ್ಯ ಅವನಿಗೆ ವೇದ್ಯವಾಗುತ್ತಿದೆ. ವಿಶ್ವಗುರುಗಳಾದ ಶ್ರೀ ಶಂಕರಾಚಾರ್ಯರು ಮತ್ತು ಸ್ವಾಮಿ ವಿವೇಕಾನಂದರು ‘ಮಾನವ ಬದುಕಿನ ರಥಕ್ಕೆ ಧರ್ಮಸಾರಥಿಯೇ ಅನಿವಾರ್ಯ. ಅದೇ ಸದಾಚಾರ ಸಂಪನ್ನತೆ, ಅದುವೇ ಜೀವನ ಸಂಹಿತೆಯೆಂದಾದ ಧರ್ಮ’ ಎಂಬುದನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

    ‘ಮಾನವನ ಜೀವನದಿಂದ ಧರ್ಮವನ್ನು ಬೇರ್ಪಡಿಸಿದರೆ ಕಡೆಗೆ ಅಲ್ಲಿ ಉಳಿಯುವುದು ಮಾನವ ರೂಪದ ಮೃಗಗಳಷ್ಟೇ. ಉನ್ನತ ವಿಚಾರಗಳನ್ನಿತ್ತು ವ್ಯಕ್ತಿಯನ್ನು ಹುಲಿಯನ್ನಾಗಿಸದಿದ್ದರೆ ಕಳಪೆ ಆಹಾರ ತಿಂದು ಅವನು ನರಿಯೇ ಆಗುತ್ತಾನೆ’ ಎಂಬುದು ವಿವೇಕವಾಣಿಯಾದರೆ, ‘ಜಗತ್ತಿನ ಸುಸ್ಥಿತಿಗೆ ಧರ್ಮವೇ ಕಾರಣ, ಜೀವಿಗಳ ಭೌತಿಕ ಅಭ್ಯುದಯ ಮತ್ತು ಆಧ್ಯಾತ್ಮಿಕ ಔನತ್ಯ ಸಾಧನೆಗೆ ಧರ್ಮವೇ ಸಾಧನ’ ಎನ್ನುತ್ತದೆ ಶಂಕರವಾಣಿ! ‘ನಾವುಗಳು ಜೀವಿಸಿರುವುದೇ ‘ನಂಬಿಕೆ’ ಎಂಬ ವಿಶ್ವಾಸದ ಅಡಿಗಲ್ಲಿನ ಮೇಲೆ. ತಾನೊಂದು ನಂಬಿಕೆಯನ್ನು ಸಾಕಾರಗೊಳಿಸಿಕೊಳ್ಳಲು ಬದುಕಿದ್ದೇನೆಂದು ಮಾನವನು ವಿಶ್ವಾಸ ಬೆಳೆಸಿಕೊಳ್ಳದಿದ್ದರೆ, ಅವನು ಬದುಕುವುದಾದರೂ ಯಾವ ಪುರುಷಾರ್ಥಕ್ಕೆ, ಅವನು ಬದುಕಿರಲು ಸಾಧ್ಯವೇ?’ ಎಂದಿದ್ದಾನೆ ಲಿಯೋ ಟಾಲ್​ಸ್ಟಾಯ್. ‘ಮನುಷ್ಯನ ಎಲ್ಲ ಧಾರ್ವಿುಕ ಚಿಂತನೆಗಳನ್ನು ಬಾಟಲೊಂದರಲ್ಲಿ ಹುದುಗಿಸಿ ಇಡಿ. ಶತಮಾನದ ನಂತರ ಬಾಟಲಿಯ ಮುಚ್ಚಳ ತೆರೆದರೆ ಕೇವಲ ವರ್ಷವೊಂದರಲ್ಲೇ ಧಾರ್ವಿುಕ ಚಿಂತನೆಗಳು ಗರಿಗೆದರಿ ಪಸರಿಸುತ್ತವೆ’ ಎಂದಿದ್ದಾನೆ ವಿಶವಿಖ್ಯಾತ ಇತಿಹಾಸಜ್ಞ ವಿಲ್​ಡ್ಯೂರೆಂಟ್.

    ಮಾನವನ ಉಡಾಫೆಯ ಪ್ರವೃತ್ತಿ ಹೇಳತೀರದು. ಅಮೆರಿಕದ ನಾಟಕಕಾರ ಜಾನ್ ಡ್ರೂಟೆನ್ ಹೇಳುತ್ತಾನೆ: ‘ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧ ಮತ್ತು ಇಪ್ಪತ್ತನೇ ಶತಮಾನದ ಪ್ರಾರಂಭಕಾಲದ ಜಗತ್ತಿನ ಮಾನಸಿಕ ಸ್ಥಿತಿಯನ್ನು ವಿಶ್ಲೇಷಿಸಿದಾಗ ನನಗನ್ನಿಸುತ್ತದೆ, ಗುರುತ್ವಾಕರ್ಷಣ ನಿಯಮದ ಆವಿಷ್ಕಾರದೊಂದಿಗೆ ಸರ್ ಐಸ್ಯಾಕ್ ನ್ಯೂಟನ್ ಭೌತಜಗತ್ತಿನಿಂದ ದೇವರನ್ನು ಉಚ್ಚಾಟಿಸಿ ಆ ಸ್ಥಾನವನ್ನು ಭೌತನಿಯಮಗಳಿಂದ ತುಂಬಿದ. ಚಾರ್ಲ್ಸ್ ಡಾರ್ವಿನ್ನನು ಜೀವ ಜಗತ್ತಿನಿಂದ ದೇವರನ್ನು ಹೊರದೋಡಿಸಿ ಆ ಸ್ಥಾನವನ್ನು ಪ್ರಾಕೃತ್ರಿಕ ವರಣ (ನ್ಯಾಚುರಲ್ ಸೆಲೆಕ್ಷನ್), ಸಾಮರ್ಥ್ಯಾನುಗುಣ ಊರ್ಜಿತತೆ (ಸರ್ವೆವಲ್ ಆಫ್ ದಿ ಫಿಟ್ಟೆಸ್ಟ್) ಮುಂತಾದ ನಿಯಮಗಳಿಂದ ತುಂಬಿದ. ನಂತರ ಬಂದ ಸಿಗ್ಮಂಡ್ ಫ್ರಾಯ್್ಡ ತನ್ನ ಮನೋವೈಜ್ಞಾನಿಕ (ಸೈಕೋ- ಆನ್ಯಾಲಿಸಿಸ್) ಸಿದ್ಧಾಂತಗಳ ಮೂಲಕ ಮನುಷ್ಯನ ಮಿದುಳು-ಅಂತರಂಗಗಳಿಂದ ಭಗವಂತನನ್ನು ಉಚ್ಚಾಟಿಸುವಲ್ಲಿ ಯಶಸ್ವಿಯಾಗಿದ್ದಾನೆ’. ಆದರೆ ಜಗತ್ತಿನ ಏಳ್ಗೆಯನ್ನು ಉದ್ದೇಶವಾಗಿ ಇರಿಸಿಕೊಂಡ ಕಾರ್ಲ್ ಮಾರ್ಕ್ಸ್,

    ಲೆನಿನ್, ಮಾವೋ, ಹೋಚಿಮಿನ್ ಮೊದಲಾದವರ ಸಾಮಾಜಿಕಕ್ರಾಂತಿ ಚಿಂತನೆಗಳು ಅಲ್ಪಕಾಲದಲ್ಲೇ ಅಸ್ತಂಗತವಾದದ್ದು ಇತಿಹಾಸ. ‘ಸಮಾಜವಾದ ಮಾನವನ ಪ್ರಕೃತಿಗೆ ಅಸಿಂಧು, ಅಸಾಧು’ ಎಂದು ಅರಿಸ್ಟಾಟಲ್ ಬಹಳ ಹಿಂದೆಯೇ ಹೇಳಿದ್ದ. ‘ಪ್ರಕೃತಿಯೇ ಸಮಾನತೆಯನ್ನು ವಿರೋಧಿಸುತ್ತದೆ, ಸಮಾಜವಾದ ಹೊಟ್ಟೆಕಿಚ್ಚನ್ನು ಉಲ್ಬಣಿಸುತ್ತದೆ. ಅದು ಜೀವಶಾಸ್ತ್ರದ ವಿರೋಧಿ’ ಎಂಬುದು ತತ್ತ್ವಜ್ಞಾನಿ ನಿಷೆಯ ಅಭಿಪ್ರಾಯ.

    ಸುಪ್ರಸಿದ್ಧ ಸಾಮಾಜಿಕ ಮನೋವಿಜ್ಞಾನಿ ಎರಿಕ್ ಫ್ರೋಮ್ ಹೇಳುತ್ತಾರೆ: ‘ಅಪರಿಮಿತ ಪ್ರಗತಿಯ ಮಹಾಭರವಸೆ, ಪ್ರಕೃತಿ ಪ್ರಾಬಲ್ಯದ ಭರವಸೆ, ಐಹಿಕ ಸಂಪತ್ತಿನ ಅಧಿಪತ್ಯದ ಭರವಸೆ, ಹೆಚ್ಚು ಜನರಿಗೆ ಹೇರಳ ಸುಖದ ಭರವಸೆ ಮತ್ತು ಅಡ್ಡಿಯೇ ಇಲ್ಲದ ವೈಯಕ್ತಿಕ ಸ್ವಾತಂತ್ರ್ಯದ ಭರವಸೆ- ಇವೆಲ್ಲವನ್ನೂ ದೊರಕಿಸಿ ಕೊಡುವೆನೆಂದು ವಾಗ್ದಾನ ಮಾಡಿದ್ದ ಸಮಾಜವಾದ ವಿಫಲವಾಗಿ ನೆಲ ಕಚ್ಚಿತು!’

    ಇಂದ್ರಿಯನಿಗ್ರಹ ಇಲ್ಲದವರ ಮತ್ತು ದುರ್ಬಲರ ಕೈಯಲ್ಲಿ ಧರ್ಮ ತನ್ನ ಪ್ರಭಾವವನ್ನು ಬೀರಲಾರದೇ ಹೋಯಿತು. ಮಿತಿಮೀರಿದ ಇಂದ್ರಿಯಸುಖದ ಸಂತೃಪ್ತಿಗಾಗಿ ನಿರ್ವಹಿಸಲ್ಪಟ್ಟ ಚಟುವಟಿಕೆಗಳು ಮಾನವನನ್ನು ಶಾರೀರಿಕ ಮತ್ತು ಮಾನಸಿಕ ರೋಗಗಳಿತ್ತು ಬಲಿಗೆಡವಿತು ಎಂಬ ಸತ್ಯವನ್ನು ಇತಿಹಾಸ ದಾಖಲಿಸಿದೆ. ಭಾರತದಲ್ಲಿಯೂ ಸಮಾಜವಾದ ಎಂಬುದೊಂದು ಮೋಸವಾಗಿ ದಾಖಲಾಯ್ತು. ನಮ್ಮ ಸಮಾಜವಾದದ ಹೊಂದಾಣಿಕೆ ಶ್ರೀಮಂತರಿಂದ ಬಡವರಿಗೆ ಸಂಪತ್ತು ವರ್ಗಾವಣೆಯಾಗದೆ, ಕೇವಲ ಪ್ರಾಮಾಣಿಕ ಶ್ರೀಮಂತರಿಂದ ಅಪ್ರಾಮಾಣಿಕ ಶ್ರೀಮಂತರಿಗೆ ವರ್ಗಾವಣೆಯಾದದ್ದು ದುರಂತ! ಇದೊಂದು ರೀತಿಯಲ್ಲಿ ಜಾರ್ಜ್ ಬರ್ನಾಡ್ ಷಾ ಹೇಳಿದಂತೆ, ‘ಮಾನವನು ಹುಲಿಯನ್ನು ಕೊಂದಾಗ ಅದನ್ನು ‘ಕ್ರೀಡೆ’ ಎಂದು ಹೆಸರಿಸುತ್ತಾನೆ; ಒಂದು ವೇಳೆ ಹುಲಿಯೇ ಮಾನವನನ್ನು ಕೊಂದರೆ ಅದು ‘ಕ್ರೌರ್ಯ’ ಎಂದು ಅಭಿಪ್ರಾಯಿಸುತ್ತಾನೆ’. ಹಾಗಾದರೆ ಧರ್ಮ ಮನುಷ್ಯನನ್ನು, ಸಮಾಜವನ್ನು ನಿರ್ದೇಶಿಸಿದ್ದಾದರೂ ಹೇಗೆ? ‘ಧರ್ಮದ ತಿರುಳಿರುವುದು ಸಿದ್ಧಾಂತಗಳಲ್ಲಲ್ಲ, ಆಚರಣೆಯಲ್ಲಿ. ಒಳ್ಳೆಯವನಾಗುವುದು ಮತ್ತು ಒಳ್ಳೆಯದನ್ನು ಮಾಡುವುದೇ ಧರ್ಮದ ಸರ್ವಸ್ವ. ನಿನ್ನನ್ನು ನೀನು ನಂಬು. ನಿನ್ನ ನಿರೀಕ್ಷೆಗಳು ಎಂದಿಗೂ ನಿನ್ನ ವಿಶ್ವಾಸ- ಸಾಮರ್ಥ್ಯಗಳನ್ನೇ ಅವಲಂಬಿಸಿರಲಿ. ಯಾರನ್ನೂ ಅವಲಂಬಿಸಬೇಡ. ನಿನ್ನ ನೆರಳನ್ನು ಕೂಡ ನೆಚ್ಚಿ ಕುಳಿತಿರಬೇಡ, ಏಕೆಂದರೆ ಕತ್ತಲಲ್ಲಿ ನಿನ್ನ ನೆರಳೂ ಕೂಡ ನಿನ್ನ ಜೊತೆಗಿರದು!’ ಎಂದು.

    ಛಾಂದೋಗ್ಯೋಪನಿಷತ್ತು ಮಾನವನನ್ನು, ‘ನೀನು ಯಾವುದೇ ಕಾರ್ಯವನ್ನು ನಿರ್ವಹಿಸುವಾಗ ಆಶ್ರಯಿಸಬೇಕಾದ್ದು ಸಮರ್ಪಕ ಜ್ಞಾನ, ಶ್ರದ್ಧೆ ಮತ್ತು ಆಧ್ಯಾತ್ಮಿಕ ದೃಷ್ಟಿಕೋನವನ್ನು’ ಎಂದಿದೆ. ಧರ್ಮವಿರುವುದು ಅನುಷ್ಠಾನ, ಆಚರಣೆಗಳಿಗೇ ಹೊರತು ಪ್ರದರ್ಶನಕ್ಕಲ್ಲ. ಮೂಲಭೂತವಾದ ಮಾನವೀಯ ಮೌಲ್ಯಗಳನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು ವೈಯಕ್ತಿಕ ಮತ್ತು ಸಾಂಘಿಕ ಜೀವನದಲ್ಲಿ ನಾವು ನಮ್ಮ ಬದುಕನ್ನು ಮೇಲ್ಮುಖವಾಗಿಸಿಕೊಳ್ಳಬೇಕು.

    ಯಾವುದೇ ಧರ್ಮದಲ್ಲಿ ಸಜ್ಜನ ದುರ್ಜನರೀರ್ವರೂ ಇದ್ದಾರೆ. ಇವರಿಬ್ಬರ ಗುಣನಡವಳಿಕೆಗಳನ್ನು ಕಂಡು ನಾವು ಧರ್ಮದ ನೆಲೆ ಮತ್ತು ಬೆಲೆಯನ್ನು ಉಪೇಕ್ಷಿಸಬಾರದು. ಎಲ್ಲ ಕಾಲಕ್ಕೂ, ಎಲ್ಲೆಡೆಗೂ ಹರಡಿಕೊಂಡಿರುವ ಧರ್ಮವೆಂಬುದು ಸಮುದ್ರವಿದ್ದಂತೆ. ಸಮುದ್ರದಲ್ಲಿ ಕಪ್ಪೆ ಸತ್ತರೆ ನೀರೆಲ್ಲ ಕೊಳೆತು ನಾರುವುದೇ? ಯಾರು ಯಾರು ಏನೇ ಮಾಡಿದರೂ ಅದರ ಸ್ವಭಾವ ಬದಲಾಗದು! ಆಚಾರ ಕೆಟ್ಟರೂ ಆಕಾರ ಕೆಡದಂತೆ ಮನುಷ್ಯರು ವರ್ತಿಸಬಹುದೇನೋ? ಆದರೆ, ‘ಅಸಹನೆ ಎಂಬುದು ಮನುಷ್ಯನನ್ನು ನುಂಗಿ ಹಾಕುವ ಭಾವವಿಕಾರ. ಪುರುಷಪ್ರಯತ್ನವಿಲ್ಲದೆ ಕೇವಲ ದೈವಬಲವೂ ನಮ್ಮ ತಮಸ್ಸನ್ನು ನಿಮೂಲನ ಮಾಡದು. ವೈಫಲ್ಯ ಎದುರಿಸುವ ಸಮರ್ಥನಷ್ಟೇ ಸಾಫಲ್ಯ ಗಳಿಸಲು ಯೋಗ್ಯ’ ಎಂಬ ಆತ್ಮಶಕ್ತಿಯ ಶಾಶ್ವತ ಸ್ರೋತವನ್ನು ಪರಿಚಯಿಸುತ್ತದೆ.

    ಖಗೋಳ ಭೌತವಿಜ್ಞಾನಿ ಮಿಲ್ಲಿಕನ್ ಆತ್ಮಚರಿತ್ರೆಯಲ್ಲಿ ಹೀಗೆಂದಿದ್ದಾರೆ: ‘ಸಮಸ್ತ ಮಾನವ ಕಲ್ಯಾಣ ಮತ್ತು ಮಾನವ ಪ್ರಗತಿಗಳನ್ನು ಹೊತ್ತಿರುವ ಎರಡು ಆಧಾರಸ್ತಂಭ ಗಳೆಂದರೆ ಧರ್ಮದೃಷ್ಟಿ ಮತ್ತು ವಿಜ್ಞಾನದೃಷ್ಟಿ. ಇವೆರಡೂ ತಮ್ಮದೇ ಆದ ಗುರುತರ ಪರಿಣಾಮ ಬೀರಲು ಒಂದು ಮತ್ತೊಂದರ ನೆರವನ್ನು ಪಡೆಯಲೇಬೇಕು. ವಿಜ್ಞಾನದೃಷ್ಟಿಯ ಅಭಿವೃದ್ಧಿಗೆ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಕೇಂದ್ರಗಳು ಲಭ್ಯವಿದೆ. ಆದರೆ ಯಾವುದೇ ವಿನಾಯಿತಿಯಿಲ್ಲದೆ ಪ್ರತಿಯೊಬ್ಬರಿಗೂ ಪರಮ ಅವಕಾಶವಿರುವುದು ಧರ್ಮದೃಷ್ಟಿಯ ವಿಚಾರದಲ್ಲಿ ಮಾತ್ರ!’ ಗಮನಿಸಬೇಕಾದ ಮುಖ್ಯ ವಿಚಾರಗಳೆಂದರೆ ಮಾನವರು ಸ್ವಭಾವತಃ ಆಂತರಿಕವಾಗಿ ಸ್ವಾತಂತ್ರ್ಯ ಪ್ರಿಯರು. ಈ ಸ್ವಾತಂತ್ರ್ಯ ನಿಜಾರ್ಥದಲ್ಲಿ ನಮ್ಮ ಮೂಲಭೂತಹಕ್ಕು ಮತ್ತು ಜನ್ಮಸಿದ್ಧಹಕ್ಕೂ ಆಗಿದೆ. ಆದರೆ ನಾವು ಅರ್ಥಮಾಡಿಕೊಳ್ಳಬೇಕಾದ ನಮ್ಮ ಮುಂದಿರುವ ಸವಾಲುಗಳೆಂದರೆ ಯೋಗ್ಯರೀತಿಯಲ್ಲಿ ಸ್ವಾತಂತ್ರ್ಯ ಪಡೆಯುವುದು ಹೇಗೆ? ಗಳಿಸಿದ ಸ್ವಾತಂತ್ರ್ಯವನ್ನು ಸದುಪಯೋಗಪಡಿಸಿಕೊಳ್ಳುವ ಬಗೆ ಹೇಗೆ? ಮತ್ತು ನನ್ನ ವೈಯಕ್ತಿಕ ಸ್ವಾತಂತ್ರ್ಯದ ಸದ್ಬಳಕೆಯನ್ನು ನನ್ನ ಸಮಾಜಕ್ಕೂ ವಿಸ್ತರಿಸುವುದು ಹೇಗೆ?

    ಇತರರ್ಯಾರೂ ನಮಗೆ ಸ್ವಾತಂತ್ರ್ಯವನ್ನು, ಸಮಾನತೆ, ನ್ಯಾಯ ಮೊದಲಾದವುಗಳನ್ನು ಉಡುಗೊರೆಯಾಗಿ ನೀಡಲಾರರು! ನಾವು ನಿಜಾರ್ಥದಲ್ಲಿ ಮಾನವರಾದಾಗಷ್ಟೇ ಇವೆಲ್ಲವೂ ನಮ್ಮ ಬಳಿ ಬರುತ್ತದೆ. ಶಕ್ತಿ ಬರುವುದೇ ಆತ್ಮಜ್ಞಾನದಿಂದ. ಸಮಾಜ, ಧರ್ಮ ಮುಂತಾದ ವಿಚಾರಗಳಲ್ಲಿ ಭಾರತ ಗಮನಿಸಬೇಕಾದ ಎಚ್ಚರಿಕೆಯನ್ನು ಸ್ವಾಮಿ ವಿವೇಕಾನಂದರು ಹೀಗೆ ಸೂಚಿಸುತ್ತಾರೆ: ‘ಭಾರತದಲ್ಲಿ ಧರ್ಮದ ಪ್ರಾಕಾರದಲ್ಲಿಯೇ ರಾಜಕೀಯ, ಸಮಾಜವಿಜ್ಞಾನ ಮೊದಲಾದುವೆಲ್ಲ ರೂಪುಗೊಳ್ಳಬೇಕು. ನಾವು ಕ್ರಮಿಸಬೇಕಾದ ಸನ್ಮಾರ್ಗವನ್ನು ತಿಳಿಹೇಳುವುದೇ ಧರ್ಮ. ಆಂಗ್ಲರು ರಾಜಕೀಯದ ಮೂಲಕ ಮತ್ತು ಅಮೆರಿಕನ್ನರು ಸಮಾಜಸುಧಾರಣೆ ಮೂಲಕ ಧರ್ಮವನ್ನು ಗ್ರಹಿಸಿಯಾರು. ಆದರೆ ಭಾರತೀಯರಿಗೆ ರಾಜಕೀಯ ಮತ್ತು ಸಮಾಜ ಸುಧಾರಣೆಗಳು ಅರಿವಾಗುವುದು ಧರ್ಮದ ಮೂಲಕವೇ! ಏಕೆಂದರೆ ಧರ್ಮ ಒಂದೇ ಮುಖ್ಯವಸ್ತು. ಉಳಿದೆಲ್ಲವೂ ಆ ಮೂಲ ರಾಗದ ಬೇರೆ ಬೇರೆ ಪ್ರಾಕಾರಾಂತಗಳಷ್ಟೇ. ಭಾರತದ ಜೀವ- ಜೀವಾಳವೆಂದರೆ ಧರ್ಮ ಮತ್ತು ಧರ್ಮ ಮಾತ್ರ. ಧರ್ಮನಷ್ಟವಾದರೆ ಭಾರತ ಸಾಯುತ್ತದೆ. ಭಾರತದಲ್ಲಿ ರಾಜಕೀಯ ವ್ಯವಸ್ಥೆಗಳೆಷ್ಟೇ ಆಗಲಿ, ಸಾಮಾಜಿಕ ಸುಧಾರಣೆಗಳೇನೇ ಆದರೂ, ದೇಶದ ಒಂದೊಂದು ಮಗುವಿನ ತಲೆಯ ಮೇಲೂ ಕುಬೇರನ ಐಶ್ವರ್ಯವನ್ನೇ ಸುರಿದರೂ, ಧರ್ಮವೊಂದಿಲ್ಲದಿದ್ದರೆ ಭಾರತ ಉಳಿಯಲಾರದು…’

    ಶ್ರೇಷ್ಠ ಚಿಂತನೆಗಳು ನಮ್ಮಲ್ಲಿಗೆ ಎಲ್ಲೆಡೆಯಿಂದ ಬರಲಿ, ಜಗತ್ತಿನ ಎಲ್ಲ ಜನರು ಶಾಂತಿ-ತೃಪ್ತಿ-ಆನಂದಗಳಿಂದ ಜೀವಿಸಲಿ -ಇಂತಹ ಮಹಾನ್ ಆದರ್ಶಗಳಡಿಯಲ್ಲಿ ಮೂಡಿ ಬಂದ ಭಾರತೀಯ ಮೌಲ್ಯಗಳನ್ನು ಜಗತ್ತು ಇಂದು ಗಂಭೀರವಾಗಿ ಪರಿಗಣಿಸುತ್ತಿದೆ. ಚಿಂತಕ ಟಿಲ್​ಹಾರ್ಡ್ ಡಿ ಚಾರ್ಡಿನ್ನರ: ‘ಕೇವಲ ರಾಷ್ಟ್ರ, ರಾಷ್ಟ್ರೀಯತೆ ಎನ್ನುವ ಯುಗಾಂತ್ಯವಾಗಿದೆ. ಜಗತ್ತಿನ ಜನರು ತಮ್ಮ ಪುರಾತನ-ಪೂರ್ವಾಗ್ರಹ ಪೀಡನೆಗಳನ್ನು ಕಿತ್ತೊಗೆದು, ಎಲ್ಲರೂ ಒಬ್ಬ ವ್ಯಕ್ತಿಯಂತೆ ಒಂದಾಗಿ, ಈ ಜಗತ್ತನ್ನು ನಿರ್ವಿುಸುವ ಕಾಲ ಸನ್ನಿಹಿತವಾಗಿದೆ’ ಎಂಬ ಮಾತು ಭಾರತೀಯ ತತ್ತಾ ್ವದರ್ಶಗಳಿಗೆ ‘ಚಿನ್ನಕ್ಕೆ ಪುಟವಿಟ್ಟಂತೆ’ ಎಂಬಂತಾಗಿದೆ ಎನ್ನಿಸುವುದಿಲ್ಲವೇ? ವಿವೇಕಾನಂದರ, ‘Man should move forward, onward, inward and finally Godward’ ಎಂಬ ವಾಣಿ ಜಗತ್ತಿನ ಸಕಲ ಧರ್ಮಗಳ ಅಸ್ತಿತ್ವಕ್ಕೆ ವೈಚಾರಿಕ ತಳಹದಿ ಮತ್ತು ಉದಾತ್ತತೆಯನ್ನು ದೊರಕಿಸಿಕೊಟ್ಟದೆ ಎಂಬುದು ನಿರ್ವಿವಾದ.

    (ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts