ಸಾಧನೆಗಿಲ್ಲ ದೈಹಿಕ ನ್ಯೂನತೆ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ಶೇ.80ರಷ್ಟು ದೈಹಿಕ ನ್ಯೂನ್ಯತೆ ನಡುವೆ ಮನೆಯಲ್ಲೇ ಕುಳಿತು ಕರೆಸ್ಪಾಂಡೆನ್ಸ್ ಬಿಎ ಮಗಿಸಿದ ಛಲಗಾತಿ ಇವರು. ಉತ್ಸಾಹದ ಚಿಲುಮೆಯಂತಿದ್ದ ಅಮೃತಾ ಬದುಕಲ್ಲಿ ಮಸ್ಕಿಲರ್ ಡಿಸ್ಟ್ರೋಫಿ ಎಂಬ ವಿಷ ಕೋಲಾಹಲ ಎಬ್ಬಿಸಿದೆ.

ಕುಂದಾಪುರ ತಾಲೂಕು, ನಾಡಾ ಗ್ರಾಮ ಸಾಲಾಡಿ ನಿವಾಸಿ ಅಮೃತಾ (27) ಮಸ್ಕಿಲರ್ ಡಿಸ್ಟ್ರೋಫಿಯಿಂದ ನರಳುತ್ತಿರುವ ಯುವತಿ. ತಂದೆ ಗೋಪಾಲ ಶೆಟ್ಟಿ, ತಾಯಿ ವಸಂತಿ ಶೆಟ್ಟಿ ದಂಪತಿ ಇಬ್ಬರು ಮಕ್ಕಳಲ್ಲಿ ಅಮೃತಾ ಮೊದಲಿಗರು. ತಮ್ಮ ಮಣೀಶ್ ಖಾಸಗಿ ಬಸ್ ನಿರ್ವಾಹಕ. ತಂದೆ ಗೋಕಾಕ್‌ನಲ್ಲಿ ಹೋಟೆಲ್ ಕೆಲಸ ಮಾಡುತ್ತಿದ್ದು, ತಾಯಿ ಗೃಹಿಣಿ. ಮನೆ ಅಡಿ ಬಿಟ್ಟರೆ ಮತ್ತೇನು ಇಲ್ಲ. ತಂದೆ ಹಾಗೂ ತಮ್ಮನ ದುಡಿಮೆಯಲ್ಲಿ ಮನೆ ಹಾಗೂ ಅಮೃತಾಳ ಚಿಕಿತ್ಸೆ ವೆಚ್ಚ ಭರಿಸಬೇಕು.

ಹಗಲು ಹೊತ್ತು ಮಲಗಿದರೆ ಹಾಸಿಗೆ ಹಿಡಿದು ಬಿಡಬೇಕಾಗುತ್ತದೆ ಎಂದು ವಿಶ್ರಾಂತಿ ತೆಗೆದುಕೊಳ್ಳುವುದು ನಿಲ್ಲಿಸಿದ್ದಾರೆ. ಅಮೃತಾ ಹುಟ್ಟು ಸಹಜವಾಗಿಯೇ ಇತ್ತು. ಬರುತ್ತಾ ಬಾಯಿಂದ ನಾಲಿಗೆ ಹೊರಕ್ಕೆ ಬರಲು ಆರಂಭಿಸಿತು. ಕಾಲಿಗೆ ಹಿಂಭಾರ ಬಿದ್ದರೆ ಕುಸಿದು ಬೀಳುತ್ತಿದ್ದರು. ಆದರೂ ಎಲ್ಲರಂತೆ ಶಾಲೆಗೆ ಹೋಗಿ ಬರುತ್ತಿದ್ದಳು. ಎಂಟನೇ ತರಗತಿ ಮನೆಯಿಂದ ದೂರ ಹೋಗಬೇಕಾದುದರಿಂದ ನಡೆಯಲಾಗದೆ, 9ನೇ ತರಗತಿಗೆ ಕೊಲ್ಲೂರು ಹಾಸ್ಟೆಲ್ ಸೇರಿದರು. ಪದೇ ಪದೇ ಕಾಯಿಲೆ ಕಾಣಿಸಿದ್ದರಿಂದ ಶಾಲೆ ಬಿಡಬೇಕಾಯಿತು. ಬಳಿಕ ಮನೆಯಲ್ಲೇ ಕುಳಿತು ಎಸ್ಸೆಸ್ಸೆಲ್ಸಿ, ಡಿಗ್ರಿ ಮುಗಿಸಿ, ಪತ್ರಿಕಾ ರಂಗಕ್ಕೆ ಕಾಲಿಟ್ಟರು. ಕ್ರಮೇಣ ದೇಹ ಸ್ಥಿತಿ ಬಿಗಡಾಯಿಸಿದ್ದರಿಂದ ಅದನ್ನೂ ತ್ಯಜಿಸಬೇಕಾಯಿತು.

ಬಳಿಕ ಬಾಯಿ ದವಡೆ ಜಾರಿದ್ದರಿಂದ ಮಂಗಳೂರು ಎಜೆ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ಸರಿಮಾಡಿದ್ದು, ಅಲ್ಲಿನ ವೈದ್ಯರ ಸಲಹೆ ಮೇರೆಗೆ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದ್ದು, ಅಮೃತಾ ಆರೋಗ್ಯಕ್ಕೆ ಮಸ್ಕಿಲರ್ ಡಿಸ್ಟ್ರೋಫಿ ಕಾರಣ ಎಂದು ಗೊತ್ತಾಗಿದೆ. ಕಷ್ಟದಲ್ಲಿದ್ದರೂ ಅಮೃತಾ ಕೈಚಾಚಿ ನಿಂತಿಲ್ಲ. ವೀಲ್‌ಚೇರ್‌ನಲ್ಲಿ ಹೋಗಿಬರುವ ದಾರಿ ಸಿಕ್ಕರೆ ಸಾಕು ಎನ್ನುತ್ತಾರೆ. ಬಂಟರ ಸಂಘ ಅವರ ನೆರವಿಗೆ ಬರಬೇಕಿದೆ. ಅಮೃತಾ ಸಂಪರ್ಕ ಸಂಖ್ಯೆ 9900784356.

ರಕ್ತ ಸಂಬಂಧಿ ಮದುವೆ ಮುನ್ನ ಯೋಚಿಸಿ: ಜಾತಕ, ಗೋತ್ರ, ಬಳಿ ಎಂದರೆ ಮೂಢನಂಬಿಕೆ ಎಂದು ಮೂಗು ಮುರಿಯುವ ಮಂದಿಗೆ ಅಮೃತಾ ಜೀವನ ಸ್ಪಷ್ಟಸಾಕ್ಷಿ. ಬಳಿ, ಸ್ವಗೋತ್ರ ಮದುವೆ ಕೂಡದು ಎನ್ನುವುದು ಹಿಂದಿನವರ ನಂಬಿಕೆ. ರಕ್ತ ಸಂಬಂಧಿಗಳ ನಡುವೆ ವಿವಾಹ ನಡೆದರೆ ಅವರ ಮಕ್ಕಳಿಗೆ ಸಮಸ್ಯೆಯಾಗುತ್ತದೆ. ವಿಜ್ಞಾನ ಕೂಡ ಇದನ್ನೇ ಹೇಳುತ್ತದೆ. ವಿಕಲಚೇತನ ಮಕ್ಕಳು, ಬುದ್ಧಿಮಾಂದ್ಯ ಮಕ್ಕಳು ಜನಿಸುವುದೇ ರಕ್ತ ಸಂಬಂಧ ಮದುವೆ ಮೂಲಕ ಎನ್ನುತ್ತದೆ ವೈದ್ಯಲೋಕ. ಅಮೃತಾ ಜೀವನದಲ್ಲೂ ಆಗಿರುವುದು ಇದೇ ದುರಂತ. ತಂದೆ ತಾಯಿ ಒಂದೇ ರಕ್ತದವರಾಗಿದ್ದು, ಅದರ ಪರಿಣಾಮ ಅಮೃತಾ ಮೇಲಾಗಿದೆ.
ಮಾನವೀಯತೆ ಮೆರೆಯಾಯಿತೇ?

ಅಮೃತಾ ಚಿಕಿತ್ಸೆಗೆ ಹೋಗಬೇಕಿದ್ದರೆ ಮನೆಯಿಂದ ಒಂದು ಕಿ.ಮೀ. ದೂರ ನಡೆಯಬೇಕು. ಮನೆ ಬಾಗಿಲಿಗೆ ಸೈಕಲ್ ಬರುವಷ್ಟು ದಾರಿ ಇಲ್ಲ. ಮನೆಯಿಂದ ಗದ್ದೆ ಬದಿ ತೋಟದ ಅಂಚಲ್ಲಿ ಅಮೃತಾ ಅವರನ್ನು ಕರೆದುಕೊಂಡು ಹೋಗುವುದು ನಿಜಕ್ಕೂ ಸಾಹಸ. ಅಮೃತಾ ನೆರವಿಗೆ ಸ್ವಯಂಸೇವಾ ಸಂಸ್ಥೆ ವೀಲ್‌ಚೇರ್ ನೀಡಿದ್ದರೂ ಅದನ್ನು ಬಳಸಲು ಆಗುತ್ತಿಲ್ಲ. ಅಮೃತಾ ತಿರುಗಾಡುವ ದಾರಿ ಅವರ ಸ್ವಜಾತಿಯವರದ್ದೇ. ವೀಲ್‌ಚೇರ್ ಹೋಗುವಷ್ಟು ದಾರಿ ಕೊಡದೆ ಇರುವುದು ಮಾನವೀಯತೆ ಮರೆಯಾಗಿದೆ ಎಂಬುದಕ್ಕೆ ಸಾಕ್ಷಿ.

ಅಮೃತಾಳ ಕಾಯಿಲೆಗೆ ನಿರ್ದಿಷ್ಟ ಔಷಧಿಯಿಲ್ಲ. ಮಸ್ಕಿಲರ್ ಡಿಸ್ಟ್ರೋಫಿ ವಂಶ ಪಾರಂಪರ‌್ಯ ಹಾಗೂ ರಕ್ತ ಸಂಬಂಧಿಗಳ ನಡುವೆ ನಡೆಯುವ ವಿವಾಹದಿಂದಲೂ ಬರುತ್ತದೆ. ಮಸ್ಕಿಲರ್ ಡಿಸ್ಟ್ರೋಫಿ ತಂದೆ ತಾಯಿಗಳಿಗೆ ಇರಬೇಕು ಎಂದಿಲ್ಲ. ಹಿಂದೆ ಯಾರಿಗಾದರೂ ಇದ್ದರೂ ಬರುತ್ತದೆ. ಇದು ಬಹಳ ಅಪರೂಪದ ಕಾಯಿಲೆ. ಸಂಬಂಧಿಕರಲ್ಲಿ ಮದುವೆ ಆಗುವವರಿಗೆ ಸಾಮಾನ್ಯವಾಗಿ ಬರುತ್ತದೆ. 2-3 ಜನರೇಶನ್ ಹಿಂದೆ ಹೀಗೆ ಮದುವೆ ಆದರೆ ಜೀನ್ಸ್ ಮುಂದುವರಿದು ಈ ಕಾಯಿಲೆಗೆ ದಾರಿ ಮಾಡಿಕೊಡುತ್ತದೆ.
| ಡಾ.ಚಂದ್ರಶೇಖರ್, ಹಿರಿಯ ವೈದ್ಯ, ಸಾರ್ವಜನಿಕ ಆಸ್ಪತ್ರೆ ಕುಂದಾಪುರ

ಚಿಕಿತ್ಸೆಗೆ ಆಸ್ಪತ್ರೆಗೆ ಹೋಗಿ ಬರುವುದು ದೊಡ್ಡ ಸಮಸ್ಯೆ. ನಾವೇನು ದೊಡ್ಡ ರಸ್ತೆ ಮಾಡಿಕೊಡಬೇಕು ಎನ್ನುವುದಿಲ್ಲ. ಕೊನೇ ಪಕ್ಷ ವೀಲ್‌ಚೇರ್ ಹೋಗುವಷ್ಟು ದಾರಿ ಬಿಟ್ಟುಕೊಟ್ಟರೆ ಸಾಕು. ನೀರಿನ ತೋಡಿಗೆ ಸ್ಲ್ಯಾಬ್ ಅಥವಾ ವೀಲ್‌ಚೇರ್ ಹೋಗುವ ಹಾಗೆ ಚಪ್ಪಡಿ ಹಾಕಿಕೊಟ್ಟರೂ ಆದೀತು. ಮನೆಯಲ್ಲೇ ಸುಮ್ಮನೇ ಕುಳಿತುಕೊಳ್ಳುವುದರಿಂದ ಮತ್ತಷ್ಟು ಯೋಚಿಸಿ, ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬ ಉದ್ದೇಶದಿಂದ ಮನೆಯಲ್ಲೇ ಕುಳಿತು ಕರೆಸ್ಪಾಂಡೆಂಟ್ ಮೂಲಕ ಡಿಗ್ರಿ ಮುಗಿಸಿದ್ದೇನೆ.
| ಅಮೃತಾ, ಮಸ್ಕಿಲರ್ ಡಿಸ್ಟ್ರೋಫಿ ಪೀಡಿತ ಯುವತಿ