ಪುಲ್ವಾಮಾ ದಾಳಿ: ಪಾಕ್​ ಕ್ರಿಕೆಟಿಗರ ಫೋಟೋಗಳನ್ನು ತೆಗೆದ ಕೆಎಸ್​ಸಿಎ

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ಕ್ರಿಕೆಟ್​ ಅಸೋಸಿಯೇಷನ್​ (ಕೆಎಸ್​ಸಿಎ) ಪಾಕ್​ ಕ್ರಿಕೆಟಿಗರ ಫೋಟೋಗಳನ್ನು ತೆಗೆದುಹಾಕಿದೆ.

ಮುಂಬೈನ ಕ್ರಿಕೆಟ್​ ಕ್ಲಬ್​ ಆಫ್​ ಇಂಡಿಯಾ ತನ್ನ ಕ್ಲಬ್​ನಲ್ಲಿ ಹಾಕಿದ್ದ ಪಾಕ್​ ಕ್ರಿಕೆಟಿಗರ ಫೋಟೋಗಳನ್ನು ತೆಗೆಯುವ ನಿರ್ಧಾರ ತೆಗೆದುಕೊಂಡಿತ್ತು. ಕ್ರಿಕೆಟ್​ ಕ್ಲಬ್​ ಆಫ್​ ಇಂಡಿಯಾ ನಂತರ ಮೊಹಾಲಿಯ ಪಿಸಿಎ ಕ್ರೀಡಾಂಗಣ, ಜೈಪುರದ ಸವಾಯಿ ಮಾನ್​ ಸಿಂಗ್​ ಕ್ರೀಡಾಂಗಣ, ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್​ ಅಸೋಸಿಯೇಷನ್​ ಕ್ರೀಡಾಂಗಣದಲ್ಲಿದ್ದ ಪಾಕ್​ ಆಟಗಾರರ ಫೋಟೋಗಳನ್ನು ತೆಗೆದುಹಾಕಲಾಗಿತ್ತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಕಿದ್ದ ಪಾಕ್​ ಪ್ರಧಾನ ಮಂತ್ರಿ ಮತ್ತು ಮಾಜಿ ಕ್ರಿಕೆಟಿಗ ಇಮ್ರಾನ್​ ಖಾನ್​ ಸೇರಿ ಹಲವು ಪಾಕ್​ ಕ್ರಿಕೆಟಿಗರ ಫೋಟೋಗಳನ್ನು ತೆಗೆಯಲಾಗಿದೆ. ನಮ್ಮ ಸೇನೆಗೆ ಬೆಂಬಲ ಸೂಚಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾವು ಪುಲ್ವಾಮಾ ಉಗ್ರ ದಾಳಿಯನ್ನು ಖಂಡಿಸುತ್ತೇವೆ ಎಂದು ಕೆಎಸ್​ಸಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.