IAS, KAS, PSI, BANKING ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ಪಷ್ಟತೆಯೇ ಕೀಲಿಕೈ

ಕೆಎಎಸ್, ಐಎಎಸ್ ಪರೀಕ್ಷೆ ಸಿದ್ಧತೆ ಹೇಗಿರಬೇಕು? ಪರೀಕ್ಷೆಗಳು ಹೇಗಿರುತ್ತವೆ? ಪ್ರಥಮ ವರ್ಷ ಪದವಿ ಓದುತ್ತಿರುವ ಮಗಳಿಗೆ ಐಎಎಸ್ ಮಾಡಿಸಬೇಕು ಎಂಬ ಆಸೆ ಇದೆ. ಈಗಿನಿಂದಲೇ ಸಿದ್ಧತೆ ಸಾಧ್ಯವೇ? ಬ್ಯಾಂಕಿಂಗ್ ಪರೀಕ್ಷೆಯನ್ನು ಸುಲಭ ಮಾಡಿಕೊಳ್ಳುವುದು ಹೇಗೆ? ಪಿಡಿಒ ಪರೀಕ್ಷೆಗೆ ಯಾವ ವಿಷಯಗಳನ್ನು ಓದಿಕೊಂಡಿರಬೇಕು? ಎಂಬ ಹತ್ತು ಹಲವು ಪ್ರಶ್ನೆಗಳನ್ನು ಹೊತ್ತು ರಾಜ್ಯದ ಮೂಲೆ ಮೂಲೆಯಿಂದ ವಿಜಯವಾಣಿ ಫೋನ್ ಇನ್​ಗೆ ಕರೆ ಮಾಡಿದ ಸಾರ್ವಜನಿಕರಿಗೆ ದಿ ಕ್ಲಾಸಿಕ್ ಕೆಎಎಸ್, ಐಎಎಸ್ ಸ್ಟಡಿ ಸರ್ಕಲ್ ನಿರ್ದೇಶಕ ಹಾಗೂ ಸ್ಪರ್ಧಾ ಸ್ಪೂರ್ತಿ ಪ್ರಧಾನ ಸಂಪಾದಕ ಲಕ್ಷ್ಮಣ ಎಸ್. ಉಪ್ಪಾರ ಸಮಾಧಾನಚಿತ್ತರಾಗಿ ಉತ್ತರಿಸಿದರು. ಇದೇ ವೇಳೆ, ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ಮತ್ತಷ್ಟು ವಿಷಯಗಳನ್ನು ಹಂಚಿಕೊಂಡರು.

# ಕ್ಲಾಸಿಕ್ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಆರಂಭದ ಆಲೋಚನೆ ಮತ್ತು ಪ್ರಾರಂಭವಾಗಿದ್ದು ಹೇಗೆ?

1990ರ ದಶಕದ ಹೊತ್ತಿಗೆ ಎಲ್ಲ ಸರ್ಕಾರಿ ನೇಮಕಾತಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಅನಿವಾರ್ಯವಾಯಿತು. ಆದರೆ, ಕರ್ನಾಟಕದಲ್ಲಿ ಆ ಹೊತ್ತಿಗೆ ಯಾವುದೇ ತರಬೇತಿ ಕೇಂದ್ರಗಳು ಇರಲಿಲ್ಲ. ವಿದ್ಯಾರ್ಥಿಗಳು ತರಬೇತಿಗಾಗಿ ದೆಹಲಿ, ಹೈದರಾಬಾದಿಗೆ ತೆರಳುವಂತಾಗಿತ್ತು. ಇದು ನನಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನದ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಟ್ಟಿತು. ಈ ಹಿನ್ನೆಲೆಯಲ್ಲಿ 1997ರಲ್ಲಿ ಧಾರವಾಡದಲ್ಲಿ ಈ ತರಬೇತಿ ಕೇಂದ್ರ ಆರಂಭಿಸಿದೆ. ಮೊದಲಿಗೆ ಪಿಎಸ್​ಐ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು ಮುಂದಾದೆ. ಇದೀಗ 10 ವಿವಿಧ ರೀತಿಯ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ಸರ್ಕಾರಿ ಉದ್ಯೋಗದ ಸಾವಿರಾರು ಆಕಾಂಕ್ಷಿಗಳು ತರಬೇತಿ ಪಡೆಯುತ್ತಿದ್ದಾರೆ. ನುರಿತ ಉಪನ್ಯಾಸಕವರ್ಗ, ಸುಸಜ್ಜಿತ ವರ್ಗಕೊಠಡಿಗಳು, 24ಗಿ7 ಗ್ರಂಥಾಲಯ ಸೇವೆ, ಒಳ್ಳೆಯ ಆಡಳಿತ ಸಿಬ್ಬಂದಿ ಇರುವುದರಿಂದ ಹೆಚ್ಚಿನ ಅಭ್ಯರ್ಥಿಗಳು ನಮ್ಮಲ್ಲಿಗೆ ಬರುತ್ತಾರೆ. 2005ರಲ್ಲಿ ಸ್ಪರ್ಧಾ ಸ್ಪೂರ್ತಿ ಪ್ರಕಾಶನ ಆರಂಭಿಸಲಾಯಿತು. ಇದೀಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಪುಸ್ತಕಗಳನ್ನು ಮುದ್ರಣ ಮಾಡುತ್ತಿದ್ದೇವೆ.

# ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣ ರಾಗಲು ಎಷ್ಟು ವರ್ಷದ ಶ್ರಮ ಬೇಕು?

ಇದೊಂದು ವಿಶಾಲವಾದ ಕ್ಷೇತ್ರವಾಗಿದೆ. ಇಂತಿಷ್ಟೇ ವರ್ಷ ವ್ಯಾಸಂಗ ಮಾಡಬೇಕು ಎಂದು ಹೇಳಲು ಬರುವುದಿಲ್ಲ. ಕೆಲವೇ ತಿಂಗಳಲ್ಲಿ ಉದ್ಯೋಗ ಪಡೆದವರೂ ಇದ್ದಾರೆ. ವರ್ಷದ ನಂತರ ಗುರಿ ಮುಟ್ಟಿದವರೂ ಇದ್ದಾರೆ. ಹೀಗಾಗಿ ಅವರ ಬುದ್ಧಿಶಕ್ತಿ ಮತ್ತು ವ್ಯಾಸಂಗದ ಶೈಲಿಯ ಮೇಲೆ ಅವಧಿ ನಿಂತಿರುತ್ತದೆ. ಅಲ್ಲದೆ, ವಿವಿಧ ಹುದ್ದೆಗಳಿಗೆ ಅನುಗುಣವಾಗಿ ತರಬೇತಿ ಇರುವುದರಿಂದ ವಿದ್ಯಾರ್ಥಿಗಳು ಮೊದಲು ಯಾವ ಹುದ್ದೆ ಪಡೆಯಬೇಕೆಂಬ ಗುರಿಯನ್ನು ಸ್ಪಷ್ಟಪಡಿಸಿಕೊಳ್ಳಬೇಕು.

# ಸ್ಪರ್ಧಾತ್ಮಕ ಪರೀಕ್ಷೆಗೆ ಯಾವ ವಯಸ್ಸಿನಿಂದ ಸಿದ್ಧತೆ ಆರಂಭಿಸಬೇಕು?

ಪಿಯು ವಿದ್ಯಾರ್ಹತೆಯ ಮೇಲೆ ಸಾಕಷ್ಟು ಸರ್ಕಾರಿ ಉದ್ಯೋಗಗಳ ಭರ್ತಿಗೆ ಸರ್ಕಾರ ಅಧಿಸೂಚನೆ ಹೊರಡಿಸುತ್ತದೆ. ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಮೂಡಿಸಿದರೆ ಪದವಿ ಮುಗಿಸುವ ವೇಳೆಗೆ ಸರ್ಕಾರಿ ಉದ್ಯೋಗ ಪಡೆದುಕೊಳ್ಳಬಹುದಾಗಿದೆ.

# ದೂರದ ಊರಿನವರು ಧಾರವಾಡದಲ್ಲಿ ಬಂದು ತರಬೇತಿ ಪಡೆಯಲು ವ್ಯವಸ್ಥೆ ಇದೆಯೇ?

ಉದ್ಯೋಗ ಆಕಾಂಕ್ಷಿಗಳ ಅವಶ್ಯಕತೆಗಳನ್ನು ಈಡೇರಿಸುವುದೇ ನಮ್ಮ ಗುರಿಯಾಗಿದೆ. ಹೀಗಾಗಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನಾವು ಧಾರವಾಡದಲ್ಲಿರುವ ನಮ್ಮ ತರಬೇತಿ ಕೇಂದ್ರದಲ್ಲಿ ಪ್ರತ್ಯೇಕ ವಸತಿ ವ್ಯವಸ್ಥೆಗೆ ಅವಕಾಶ ಕಲ್ಪಿಸಿದ್ದೇವೆ. ದೂರದ ಊರಿನ ಅಭ್ಯರ್ಥಿಗಳು ಇಲ್ಲೇ ಉಳಿದುಕೊಂಡು ತರಬೇತಿ ಪಡೆಯಬಹುದಾಗಿದೆ.

# ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಅವಶ್ಯಕತೆ ಇದೆಯಾ?

ನನ್ನ ಪ್ರಕಾರ ತರಬೇತಿ ಅವಶ್ಯಕತೆ ಇದೆ. ಕಾರಣ, ಸ್ಪರ್ಧಾತ್ಮಕ ಪರೀಕ್ಷೆ ಎಂದರೇನು? ಎಂಬ ವಿಷಯದಿಂದ ಆರಂಭಿಸಿ ಓದುವ ವಿಧಾನ, ಪ್ರಶ್ನೆ ಪತ್ರಿಕೆಯ ವಿಧಾನ, ಸ್ಟಡಿ ಮೆಟಿರಿಯಲ್, ಯಶಸ್ಸಿನ ಹಾದಿ, ಸಾಧಕರ ಹಿತನುಡಿ ಎಲ್ಲವನ್ನೂ ನಾವು ತರಬೇತಿಯಲ್ಲಿ ತಿಳಿಸಿಕೊಡುತ್ತೇವೆ. ಹೀಗಾಗಿ ಸಂಪೂರ್ಣ ಜ್ಞಾನ ಪಡೆಯುವುದರಿಂದ ವಿದ್ಯಾರ್ಥಿಗಳು ಆನಂತರದಲ್ಲಿ ವ್ಯಾಸಂಗ ಮಾಡುವ ವಿಧಾನವನ್ನು ರೂಢಿಸಿಕೊಂಡು ಮುಂದೆ ಹೋಗಬಹುದಾಗಿದೆ. ಇಲ್ಲವಾದರೆ, ಗೊಂದಲದಲ್ಲೇ ಕಾಲ ಕಳೆಯುವ ಸಾಧ್ಯತೆಯೇ ಹೆಚ್ಚಿರುತ್ತದೆ.

# ಪರೀಕ್ಷೆಯಲ್ಲಿ ಅನುತ್ತೀರ್ಣರಾದಲ್ಲಿ ಮುಂದೇನು?

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಆಸಕ್ತಿ ಇರುವವರು ಮತ್ತು ಇದಕ್ಕಾಗಿಯೇ ವ್ಯಾಸಂಗ ಮಾಡುವವರು ಅನುತ್ತೀರ್ಣರಾಗುವುದು ಕಡಿಮೆ. ಯಾರೋ ಪಾಲಕರ ಬಲವಂತಕ್ಕೆ ಅಥವಾ ಸ್ನೇಹಿತರನ್ನು ನೋಡಿ ಹುಮ್ಮಸ್ಸಿನಿಂದ ಬಂದು ಪಠ್ಯಪುಸ್ತಕ ನೋಡಿ ಭಯ ಪಡುವವರು ಅನುತ್ತೀರ್ಣರಾಗುತ್ತಾರೆ. ಕೆಲವರು ಹಲವಾರು ಬಾರಿ ಫೇಲ್ ಆದರೂ ತಮ್ಮ ಪ್ರಯತ್ನ ಬಿಡುವುದಿಲ್ಲ. ಅಂತಹವರು ಉದ್ಯೋಗ ಪಡೆಯವುದು ಖಚಿತ. ಒಂದು ಪರೀಕ್ಷೆಗೆ ಸಿದ್ಧರಾದಲ್ಲಿ, ಹಲವಾರು ಪರೀಕ್ಷೆ ಬರೆಯಬಹುದು. ಹೀಗಾಗಿ ಅನುತ್ತೀರ್ಣರಾಗುವವರ ಸಂಖ್ಯೆ ಕಡಿಮೆ.

# ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೋಲಿಸಿದರೆ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವವರ ಪ್ರಮಾಣ ಕಡಿಮೆಯಿದೆ. ಇದಕ್ಕೆ ಕಾರಣ ಮತ್ತು ಪರಿಹಾರೋಪಾಯಗಳು ಏನು?

ಅಭ್ಯರ್ಥಿಗಳಲ್ಲಿ ಕನ್ಸಿಸ್ಟೆನ್ಸಿ ಕೊರತೆಯೇ ಇದಕ್ಕೆ ಕಾರಣ. ಇತರೆ ಪರೀಕ್ಷೆಗಳಿಗೆ ಹೋಲಿಸಿದರೆ ಬ್ಯಾಂಕಿಂಗ್ ಪರೀಕ್ಷೆ ಪಠ್ಯಕ್ರಮ ಭಿನ್ನವಾಗಿರುತ್ತದೆ. ಇತರೆ ಪರೀಕ್ಷೆಗಳಲ್ಲಿ ವಿಷಯಗಳು ಒಂದಕ್ಕೊಂದು ಪೂರಕವಾಗಿರುತ್ತವೆ. ಬ್ಯಾಂಕಿಂಗ್ ವಲಯದಲ್ಲಿ ಹಾಗಲ್ಲ. ಒಂದೆರಡು ಬಾರಿ ವಿಫಲವಾದಾಗ ಅಭ್ಯರ್ಥಿಗಳಲ್ಲಿ ಪರೀಕ್ಷೆ ಬರೆಯುವ ತನ್ನ ನಿರ್ಧಾರದಲ್ಲಿ ಬದ್ಧತೆಯ ಕೊರತೆ ಕಾಣಿಸುತ್ತದೆ. ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಋಣಾತ್ಮಕ ಅಂಕಗಳಿರುವುದು, ಸಮಯಾವಕಾಶ ಕಡಿಮೆಯಾಗಿರುವುದು ಪ್ರಮುಖ ಕಾರಣವಾಗಿವೆ. ಮತ್ತೊಂದು ಪ್ರಮುಖ ಅಂಶವೆಂದರೆ ಭಾಷಾ ಸಮಸ್ಯೆ. ಹಿಂದೆ ಬ್ಯಾಂಕಿಂಗ್ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಡೆಯುತ್ತಿದ್ದವು. ಹಾಗಾಗಿ ದಕ್ಷಿಣ ಭಾರತದವರು ಬ್ಯಾಂಕಿಂಗ್ ಉದ್ಯೋಗದತ್ತ ಹೆಚ್ಚು ಗಮನ ಹರಿಸುತ್ತಿರಲಿಲ್ಲ. ಇದೀಗ ಆಯಾ ರಾಜ್ಯ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿರುವುದು ಪರಿಸ್ಥಿತಿಯನ್ನು ಸುಧಾರಿಸಲಿದೆ.

# ಸ್ಪರ್ಧಾತ್ಮಕ ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುತ್ತವೆಯೇ?

ಕೇಂದ್ರ ಲೋಕಸೇವಾ ಆಯೋಗ ಬಹಳ ಕಟ್ಟುನಿಟ್ಟಿನಿಂದ ಪರೀಕ್ಷೆ ಆಯೋಜನೆ ಮಾಡುತ್ತದೆ. ಇಲ್ಲಿ ಎಲ್ಲಿಯೂ ಪ್ರಭಾವ, ಹಣದ ಬಲ ನಡೆಯುವುದಿಲ್ಲ. ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ವ್ಯಾಸಂಗ ಮಾಡಬೇಕು. ಅಂದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ.

# ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಇರುವ ಯಶಸ್ಸಿನ ಮಂತ್ರವೇನು?

ಕಠಿಣ ಪರಿಶ್ರಮ, ಆಸಕ್ತಿ, ಬದ್ಧತೆ ಮುಂದೆ ಯಾವುದೇ ಸೂತ್ರ ಅಥವಾ ಮಂತ್ರ ನಡೆಯುವುದಿಲ್ಲ. ವಿದ್ಯಾರ್ಥಿಗಳು ಕನಿಷ್ಟ ದಿನಕ್ಕೆ ಆರು ಗಂಟೆ ಕಾಲ ಓದಬೇಕು. ಯಾವುದನ್ನು ಓದಬೇಕೆಂಬುದನ್ನು ಮೊದಲು ಅರಿತುಕೊಳ್ಳಬೇಕು. ಸಿಕ್ಕಿದ್ದೆಲ್ಲವನ್ನೂ ಓದಿದರೆ ಸುಮ್ಮನೆ ಸಮಯ ವ್ಯರ್ಥವಾಗುತ್ತದೆ ಅಷ್ಟೆ.

# ಸಿವಿಲ್ ಸರ್ವೀಸ್ ಹೊರತಾದ ಪರೀಕ್ಷೆಗಳಿಗೂ ಕ್ಲಾಸಿಕ್ ಕೋಚಿಂಗ್

ಸಾಕಷ್ಟು ಮುಂದುವರಿದ ಈ ಕಾಲದಲ್ಲೂ ಬಹುತೇಕರಿಗೆ ನಾಗರಿಕ ಸೇವಾ ಪರೀಕ್ಷೆಗಳ ಹೊರತಾದ ಪರೀಕ್ಷೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಉದಾಹರಣೆಗೆ ಬ್ಯಾಂಕಿಂಗ್ ಪರೀಕ್ಷೆಗಳು.ಈ ಕುರಿತು ಬಹುತೇಕ ವಿದ್ಯಾವಂತರಿಗೆ ತಿಳಿದಿಲ್ಲ. ಅದಕ್ಕೆ ಮಾಹಿತಿ ಕೊರತೆಯಾಗಿರಬಹುದು ಅಥವಾ ಇತರೆ ಕಾರಣಗಳಾಗಿರಬಹುದು. ದೇಶದಲ್ಲಿ ಹಲವಾರು ಸಂಸ್ಥೆಗಳು ವಿವಿಧ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿರ್ವಹಿಸುತ್ತವೆ. ಭಾರತೀಯ ಸೇನಾ ಪಡೆ, ನೌಕಾ ಪಡೆ ಹಾಗೂ ವಾಯುಪಡೆ ಕಾಲಕಾಲಕ್ಕೆ ಅಧಿಕಾರಿಗಳು, ಜವಾನರು, ಸೇಲರ್ ಸೇರಿ ವಿವಿಧ ಹುದ್ದೆಗಳಿಗೆ ನೇಮಕ ನಡೆಸುತ್ತಲೇ ಇರುತ್ತವೆ. ಇನ್ನು ಸ್ಟಾಫ್ ಸೆಲೆಕ್ಷನ್ ಕಮಿಷನ್ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳಲ್ಲಿರುವ ಹುದ್ದೆಗಳಿಗೆ ನೇಮಕ ನಡೆಸುತ್ತದೆ. ರೈಲ್ವೆ ನೇಮಕಾತಿ ಸಮಿತಿಯಂತೂ ಪ್ರತಿ ವರ್ಷ ಸಾವಿರಾರು ಹುದ್ದೆಗಳನ್ನು ಭರ್ತಿ ಮಾಡುತ್ತಲೇ ಇರುತ್ತದೆ. ಐಬಿಪಿಎಸ್ ಸಹ ನೇಮಕಾತಿಯಲ್ಲಿ ಮುಂದಿದೆ. ಇನ್ನು ರಾಜ್ಯಗಳಲ್ಲಿ ಸಾಮಾನ್ಯವಾಗಿ ಕೆಎಎಸ್ ಸೇರಿ ವಿವಿಧ ಹುದ್ದೆಗಳ ನೇಮಕ ನಡೆಯುತ್ತಲೇ ಇರುತ್ತದೆ. ಯುಪಿಎಸ್​ಸಿ ನಡೆಸುವ ಪರೀಕ್ಷೆಗಳು ಮದರ್ ಆಫ್ ಆಲ್ ಕಾಂಪಿಟೇಟಿವ್ ಎಕ್ಸಾಮ್್ಸ ಎಂದು ಕಡೆಯಲಾಗಿದೆ. ನಾಗರಿಕ ಸೇವಾ ಪರೀಕ್ಷೆಗಳ ತಯಾರಿಯೊಂದಿಗೆ ಎಸ್​ಎಸ್​ಬಿ, ಆರ್​ಆರ್​ಬಿ ಪರೀಕ್ಷೆಗಳತ್ತ ಗಮನ ಹರಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ಎಲ್ಲಾ ನೇಮಕಾತಿ ಪರೀಕ್ಷೆಗಳಿಗೂ ಕ್ಲಾಸಿಕ್ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತದೆ.

# ಐಎಎಸ್, ಕೆಎಎಸ್ ಸಂದರ್ಶನ ಹೇಗಿರುತ್ತದೆ?

ಇದನ್ನು ಸಂದರ್ಶನ ಎನ್ನುವುದಕ್ಕಿಂತ ವ್ಯಕ್ತಿತ್ವ ಪರೀಕ್ಷೆ ಎಂದು ಕರೆಯಬೇಕು. ಈ ಸಂದರ್ಭದಲ್ಲಿ ಅಭ್ಯರ್ಥಿಯ ವ್ಯಕ್ತಿತ್ವವು ಸಂದರ್ಶಕರ ಮುಂದೆ ಅನಾವರಣಗೊಳ್ಳುತ್ತದೆ. ಇದು ತುಂಬಾ ಮುಕ್ತವಾದ ವಾತಾವರಣದಲ್ಲಿ ನಡೆಯುತ್ತದೆ. ಒಂದು ವಿಷಯದ ಕುರಿತಾಗಿ ಅಭ್ಯರ್ಥಿಯು ಎಷ್ಟು ಸಕಾರಾತ್ಮಕವಾಗಿ ಚಿಂತನೆ ಮಾಡುತ್ತಾನೆ, ಕಠಿಣ ಸವಾಲುಗಳಿಗೆ ಎಂತಹ ಪರಿಹಾರಗಳನ್ನು ಕಂಡುಕೊಳ್ಳುತ್ತಾನೆ, ಅವನು ಎಷ್ಟೊಂದು ಆತ್ಮವಿಶ್ವಾಸ ಹೊಂದಿದ್ದಾನೆ, ಅವನು ತನ್ನ ಕೌಟುಂಬಿಕ, ಶೈಕ್ಷಣಿಕ, ಪ್ರಾದೇಶಿಕ ಹಿನ್ನೆಲೆ ಮತ್ತು ಪರಿಸರಗಳ ಬಗೆಗೆ ಎಷ್ಟೊಂದು ಪ್ರಜ್ಞೆ ಹೊಂದಿದ್ದಾನೆ ಎಂಬುದನ್ನು ಒರೆಗೆ ಹಚ್ಚಲಾಗುತ್ತದೆ. ಯಾವುದೇ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೆ ಅದನ್ನು ಎಷ್ಟು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾನೆ ಎಂಬುದೂ ಪರೀಕ್ಷೆಗೊಳಪಡುತ್ತದೆ. ಹಾಗೆಯೇ ಸಮಾಜದ ಕುರಿತು ಅವನ ಧೋರಣೆ ಎಂಥದ್ದಿದೆ ಎಂಬುದೂ ಗೊತ್ತಾಗುತ್ತದೆ. ಯಾವುದೇ ಕಾರಣಕ್ಕೆ ಸಂದರ್ಶಕರಿಗೆ ಸುಳ್ಳು ಹೇಳಿ ಬಚಾವಾಗಲು ಸಾಧ್ಯವಿಲ್ಲ ಎಂಬುದನ್ನು ಅಭ್ಯರ್ಥಿಗಳು ಅರಿತಿರಬೇಕು. ತಮ್ಮ ಹವ್ಯಾಸ, ಆಸಕ್ತಿಗಳ ಕುರಿತು ಸಾಕಷ್ಟು ತಿಳಿವಳಿಕೆ ಹೊಂದಿರಬೇಕು.

ಯಳಂದೂರಿನಿಂದ, ಅಳಂದವರೆಗೆ ಕರೆಗಳ ಮಹಾಪೂರ

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುವ ಸಂಬಂಧ ವಿಜಯವಾಣಿ ಪತ್ರಿಕೆ ಹಮ್ಮಿಕೊಂಡಿದ್ದ ಫೋನ್ ಇನ್​ಗೆ ಕರೆಗಳ ಮಹಾಪೂರವೇ ಹರಿದುಬಂದಿತು. ಬೆಳಗ್ಗೆ 11 ಗಂಟೆಗೆ ಫೋನ್ ಇನ್ ನಿಗದಿ ಆಗಿತ್ತಾದರೂ ಅದಕ್ಕೂ ಮೊದಲೇ ಕರೆಗಳು ಬಂದವು. ಹೆಚ್ಚಿನ ಕರೆಗಳು ಇದ್ದ ಹಿನ್ನೆಲೆಯಲ್ಲಿ ಎರಡೂವರೆ ಗಂಟೆಗೂ ಅಧಿಕ ಕಾಲ ಕಾರ್ಯಕ್ರಮವನ್ನು ಮುಂದುವರಿಸಬೇಕಾಯಿತು. ಪ್ರತಿ ಪ್ರಶ್ನೆಗೂ ಕ್ಲಾಸಿಕ್ ಕೆಎಎಸ್ ಮತ್ತು ಐಎಎಸ್ ಸ್ಟಡಿ ಸರ್ಕಲ್​ನ ಲಕ್ಷ್ಮಣ ಎಸ್. ಉಪ್ಪಾರ ಮತ್ತು ಸ್ಪರ್ಧಾಸ್ಪೂರ್ತಿ ಬಳಗದ ಹಿರಿಯ ಸಂಪಾದಕ ಐ.ಜಿ. ಚೌಗಲಾ ಆಸಕ್ತಿಯಿಂದ ಉತ್ತರಿಸಿ ಅಭ್ಯರ್ಥಿಗಳ ಗೊಂದಲಗಳನ್ನು ನಿವಾರಿಸಿದರು. ವಿಜಯವಾಣಿ ಪ್ರಯತ್ನಕ್ಕೆ ಓದುಗರಿಂದ ಅಪಾರ ಮೆಚ್ಚುಗೆಯೂ ವ್ಯಕ್ತವಾಯಿತು. ಕರೆ ಮಾಡಿದ ಬಹುತೇಕರು ವಿಜಯವಾಣಿ ವಿದ್ಯಾರ್ಥಿ ಮಿತ್ರದ ಗುಣಮಟ್ಟವನ್ನು ಕೊಂಡಾಡಿದರು.

ತಯಾರಿ ಯಾವ ಹಂತದಿಂದ?

ಸ್ಪರ್ಧಾತ್ಮಕ ಪರೀಕ್ಷೆಗೆ ನಮ್ಮ ಯುವಜನತೆಯಲ್ಲಿ ಸಾಕಷ್ಟು ಮೂಲಜ್ಞಾನದ ಮಾಹಿತಿ ಕೊರತೆ ಇದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಅಭ್ಯರ್ಥಿಗಳನ್ನು ನಿರ್ದಿಷ್ಟವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆಂದೇ ತಯಾರು ಮಾಡುವಲ್ಲಿ, ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಕರ್ನಾಟಕದ ಯಶಸ್ಸಿನ ದರ ಹೆಚ್ಚಿಸುವಲ್ಲಿ ಕ್ಲಾಸಿಕ್ ಸಂಸ್ಥೆಯ ಮೂಲಕ ಶ್ರಮಿಸುತ್ತಿದ್ದೇವೆ. 8ನೇ ತರಗತಿ ಹಂತ ದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಸೂಕ್ತ. ಈ ನಿಟ್ಟಿನಲ್ಲಿ ಕ್ಲಾಸಿಕ್ ಇಂಟರ್​ನ್ಯಾಷನಲ್ ಪಬ್ಲಿಕ್ ಸ್ಕೂಲ್​ನಲ್ಲಿ 8ನೇ ತರಗತಿ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಅರಿವು ಮೂಡಿಸಲಾಗುತ್ತಿದೆ. ಪ್ರಾಥಮಿಕ ಹಂತದ ಪಠ್ಯಕ್ರಮ, ವಿಷಯಗಳನ್ನು ಅಧ್ಯಯನ ಮಾಡುವ ಮಕ್ಕಳಿಗೆ ಮುಂದೆ ಇದೇ ಜ್ಞಾನ ನಾಗರಿಕ ಸೇವಾ ಪರೀಕ್ಷೆ ಸೇರಿ ಹಲವು ಪ್ರಮುಖ ಪರೀಕ್ಷೆಗಳಿಗೆ ಯಾವ ರೀತಿ ಸಹಾಯವಾಗುತ್ತದೆ ಎಂಬುದರ ಸ್ಪಷ್ಟ ಅರಿವು ಮೂಡಿಸುತ್ತೇವೆ. ಬಡ, ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕೆಲ ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ, ಮಾರ್ಗದರ್ಶನ ಪುಸ್ತಕಗಳನ್ನೂ ನೀಡಿದ್ದೇವೆ. ಸಂಸ್ಥೆ ಸಾಮಾಜಿಕ ಕಳಕಳಿ ಹೊಂದಿರುವುದೂ ಯಶಸ್ಸಿಗೆ ಕಾರಣವಾಗಿದೆ.

| ಲಕ್ಷ್ಮಣ ಎಸ್.ಉಪ್ಪಾರ

ಕ್ಲಾಸಿಕ್ ಟಿಪ್ಸ್

  • ಎಸ್​ಡಿಎಯಿಂದ ಹಿಡಿದು ಯುಪಿಎಸ್​ಸಿ ಐಎಎಸ್ ಹುದ್ದೆಯವರೆಗೂ ನಡೆಯುವ ಪರೀಕ್ಷೆಗಳಿಗೆ ಅದರದೇ ಆದ ಪಠ್ಯಕ್ರಮ, ಸ್ಟ್ರಾಟಜಿ ಇರುತ್ತದೆ.
  • ಯಾವುದೇ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ಮುನ್ನ ಪಠ್ಯಕ್ರಮ ಅಧ್ಯಯನ ಮಾಡಿ. ಇದರಿಂದ ನಿಮ್ಮ ಅಧ್ಯಯನಕ್ಕೆ ಏನು ಓದಬೇಕು. ಎಷ್ಟು ಓದಬೇಕು. ಯಾವುದು ಅಗತ್ಯ,ಎಷ್ಟೆಷ್ಟು ಅಂಕಗಳಿರುತ್ತವೆ, ಎಷ್ಟು ಬರೆಯಬೇಕು ಎಂದು ಸ್ಪಷ್ಟವಾಗಿ ಮನವರಿಕೆಯಾಗುತ್ತದೆ.
  • ಬೌದ್ಧಿಕ ಸಾಮರ್ಥ್ಯ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಯಾವುದೇ ವಿದ್ಯಾರ್ಥಿಗೂ 18-20 ಗಂಟೆ ಓದುವುದು ಕಷ್ಟ ಸಾಧ್ಯ. ಆದ್ದರಿಂದ ನಿಮ್ಮ ಬೌದ್ಧಿಕ ಸಾಮರ್ಥ್ಯಕ್ಕೆ ತಕ್ಕಂತೆ ಟೈಮ್ ಡಿವೈಡ್ ಮಾಡಿಕೊಂಡು ದಿನಕ್ಕೆ ಇಂತಿಷ್ಟು ಸಮಯ ಎಂದಿಟ್ಟುಕೊಂಡು ಅಭ್ಯಾಸ ಮಾಡಿ.
  • ಯಾವುದೇ ಪರೀಕ್ಷೆಗೆ ಸಿದ್ಧತೆ ನಡೆಸಿದರೂ ನಿರ್ಧಾರ ಗಟ್ಟಿಯಾಗಿರಲಿ. ದೃಢ ನಿರ್ಧಾರ, ನಿರಂತರ ಕಠಿಣ ಶ್ರಮ, ಸುವ್ಯವಸ್ಥಿತ ಅಧ್ಯಯನ, ಮಾನಸಿಕ ಸಮತೋಲನ, ಸಕಾರಾತ್ಮಕ ಮನೋಭಾವವಿರಲಿ.
  • ಹಿಂದೆ ನಡೆದ ಅಂದಾಜು 10-12 ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಅವಲೋಕನ ಮಾಡಿ.
  • ಪ್ರಾಕ್ಟೀಸ್ ಟೆಸ್ಟ್ ಸಿರೀಸ್ ಅಟೆಂಡ್ ಮಾಡಿ. ತರಬೇತಿ ಪಡೆಯಿರಿ. ಇದರಿಂದ ಯಾವೆಲ್ಲ ವಿಷಯ ಕವರ್ ಆಗುತ್ತವೆ ಎಂಬುದು ಸ್ಪಷ್ಟವಾಗುತ್ತದೆ.
  • ಪ್ರಬಂಧ ಬರೆಯಲು ಮತ್ತು ಇಂಗ್ಲಿಷ್ – ಕನ್ನಡ, ಕನ್ನಡ- ಇಂಗ್ಲಿಷ್ ಭಾಷಾಂತರ ಪ್ರಾಕ್ಟೀಸ್ ಮಾಡಿ. ಅದಕ್ಕೆ ಪ್ರತಿನಿತ್ಯ ಕಡ್ಡಾಯವಾಗಿ ಒಂದು ಕನ್ನಡ ಮತ್ತು ಒಂದು ಇಂಗ್ಲಿಷ್ ಪತ್ರಿಕೆ ಓದಲೇಬೇಕು.
  • ನೆಗೆಟಿವ್ ಮಾರ್ಕಿಂಗ್ ಇರುವ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಸಮಯದ ಅಭಾವದಿಂದಾಗಿ ಒತ್ತಡಕ್ಕೊಳಗಾಗುವುದು ಸಹಜ. ಅಧ್ಯಯನ ಸಿದ್ಧತೆ, ಪರೀಕ್ಷೆ ವೇಳೆ ಟೈಮ್ ಮ್ಯಾನೇಜ್ ಮಾಡಿಕೊಳ್ಳಿ.
  • ಎನ್​ಸಿಇಆರ್​ಟಿ (6-12 ನೇ ತರಗತಿ) ಪುಸ್ತಕಗಳು ಬೇಸಿಕ್ ಸ್ಟಡಿಗೆ ತುಂಬ ಅನುಕೂಲ. ಗಣಿತ ವಿಷಯ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಹಾಗೂ ಇನ್ನಿತರ ವಿಷಯಗಳು, ಸಮಾಜ ವಿಜ್ಞಾನ ವಿಷಯಗಳು ಸಿವಿಲ್ ಸರ್ವೀಸಸ್ ಹಾಗೂ ಇತ್ಯಾದಿ ಪರೀಕ್ಷೆಗಳಿಗೆ ಮೂಲ ಅಧ್ಯಯನ ಸಾಮಗ್ರಿಯಾಗಿವೆ.

ಓದುಗರ ಪ್ರಶ್ನೆಗಳಿಗೆ ಲಕ್ಷ್ಮಣ ಎಸ್.ಉಪ್ಪಾರ ಅವರಿಂದ ಉತ್ತರಗಳು

# ಕೆಎಎಸ್ ಸಿದ್ಧತೆ ಹೇಗಿರಬೇಕು? ಪರೀಕ್ಷೆಗಳು ಹೇಗಿರುತ್ತವೆ?

| ಅಂಬಿಕಾ ದೊಡ್ಡಬಳ್ಳಾಪುರ

ಪ್ರಿಲಿಮ್್ಸ ಮತ್ತು ಮೇನ್ಸ್ ಇರುತ್ತದೆ. ಪ್ರಿಲಿಮ್್ಸ ನಲ್ಲಿ ಪೇಪರ್-1 ಮತ್ತು ಪೇಪರ್-2 ಎಂದು ಇರುತ್ತದೆ. ಪ್ರಸ್ತುತ ವಿದ್ಯಮಾನಗಳ ಬಗ್ಗೆ ಪೂರ್ಣ ಅರಿವು ಇರಬೇಕಾಗುತ್ತದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ವಿದ್ಯಮಾನಗಳ ಬಗ್ಗೆ ತಿಳಿದಿರಬೇಕು.

# ಪಿಡಿಓ ಸಿದ್ಧತೆಗೆ ಯಾವ ಪುಸ್ತಕವನ್ನು ಓದಬೇಕು, ಸಿದ್ಧತೆ ಹೇಗಿರಬೇಕು?

| ವರಲಕ್ಷ್ಮೀ ಬಾಗೇಪಲ್ಲಿ

ಪಿಡಿಒ ಪರೀಕ್ಷೆ ಸಿದ್ಧತೆಗಾಗಿಯೇ ಸ್ಪರ್ಧಾ ಸ್ಪೂರ್ತಿಯಿಂದ 400 ಪುಟಗಳ ಪುಸ್ತಕವನ್ನು ಹೊರತರಲಾಗಿದೆ. ಅದು ಎಲ್ಲ ವಿಷಯಗಳನ್ನು ಒಳಗೊಂಡಿದೆ. ಅಲ್ಲದೇ ಪಂಚಾಯತ್​ರಾಜ್​ಗೆ ಸಂಬಂಧಿಸಿದ ವಿಷಯಗಳನ್ನು ಓದಿಕೊಳ್ಳಬೇಕು.

# ನನ್ನ ಮಗಳು ಪದವಿಯಲ್ಲಿ ಪ್ರಥಮ ವರ್ಷ ಓದುತ್ತಿದ್ದು, ಐಎಎಸ್ ಮಾಡಿಸಬೇಕು ಎಂಬ ಆಸೆ ಇದೆ. ಈಗಿನಿಂದಲೇ ಸಿದ್ಧತೆ ಸಾಧ್ಯವೇ?

| ಸುನಂದಾ ದಾವಣಗೆರೆ

ಡಿಗ್ರಿ ಕೊನೆಯ ವರ್ಷದ ಪರೀಕ್ಷೆಗಳಿಗೆ ಹಾಜರಾಗಿ ಫಲಿತಾಂಶವನ್ನು ನಿರೀಕ್ಷಿಸುತ್ತಿರುವವರು ಐಎಎಸ್​ಪರೀಕ್ಷೆ ಎದುರಿಸಬಹುದು. ಅದರೆ ಸಿದ್ಧತೆ ಎಷ್ಟು ಬೇಗ ಆರಂಭಿಸುತ್ತಾರೋ ಅಷ್ಟು ಒಳ್ಳೆಯದು. ಡಿಗ್ರಿ ಪ್ರಥಮ ವರ್ಷದಿಂದಲೇ ಆರಂಭಿಸಿದರೂ ಒಳ್ಳೆಯದು. ಅದಕ್ಕಾಗಿ ಸ್ಪರ್ಧಾ ಸ್ಪೂರ್ತಿ ಮ್ಯಾಗಜಿನ್ ಲಭ್ಯವಿದ್ದು, ಅದನ್ನು ಓದುವುದರ ಜತೆಗೆ ವಿಜಯವಾಣಿ, ವಿದ್ಯಾರ್ಥಿ ಮಿತ್ರಗಳ ಮೂಲಕ ಪ್ರಸ್ತುತ ವಿದ್ಯಮಾನಗಳನ್ನು ತಿಳಿದುಕೊಳ್ಳಬಹುದು.

# ಐಎಎಸ್, ಕೆಎಎಸ್ ಆಯ್ಕೆ ಪ್ರಕ್ರಿಯೆ ಹೇಗೆ?

|ತೇಜಸ್ವಿನಿ ಹೊಸಪೇಟೆ

ಐಎಎಸ್ ಪ್ರಿಲಿಮ್ಸ್​ನಲ್ಲಿ ಒಂದು ಹುದ್ದೆಗೆ 1:12 ಅನುಪಾತದಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕೊನೆಗೆ ಸಂದರ್ಶನಕ್ಕೆ ಬರುವ ವೇಳೆಗೆ ಒಂದು ಹುದ್ದೆಗೆ ಇಬ್ಬರನ್ನು ಆಹ್ವಾನಿಸಿರುತ್ತಾರೆ. ಕೆಎಎಸ್ ಬರೆಯಲು ಸಾಮಾನ್ಯ ವರ್ಗದವರಿಗೆ ಐದು ಪ್ರಯತ್ನ, ಒಬಿಸಿ ಅವರಿಗೆ 9 ಬಾರಿಗೆ ಪ್ರಯತ್ನಕ್ಕೆ ಅವಕಾಶವಿರುತ್ತದೆ. ಎಸ್​ಸಿ.ಎಸ್​ಟಿ ಅಭ್ಯರ್ಥಿಗಳು ಬೇಕಾದಷ್ಟು ಬಾರಿ ಪ್ರಯತ್ನಿಸಬಹುದು ಆದರೆ ವಯಸ್ಸಿನ ಮಿತಿ ಇರುತ್ತದೆ.

# ಭಾರತೀಯ ಅರಣ್ಯ ಸೇವೆ(ಐಎಫ್​ಎಸ್) ಮಾಡಬೇಕು ಎಂದಿದೆ. ಈಗ ದ್ವಿತೀಯ ಪಿಯುಸಿ ಪೂರ್ಣಗೊಂಡಿದ್ದು, ಪದವಿಗೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು.?

| ಸುಷ್ಮಾ ಚಿತ್ರದುರ್ಗ

ಐಎಫ್​ಎಸ್ ಮಾಡಲು ಬಿಎಸ್​ಸಿ ಫಾರೆಸ್ಟ್ರಿ ಮಾಡಬಹುದು. ಅದಕ್ಕೆ ಸೀಟು ದೊರೆಯದಿದ್ದರೆ ಬಿಎಸ್​ಸಿ ಕೃಷಿ ಮಾಡಬಹದು. ನಂತರ ಡಿಗ್ರಿ ಪೂರ್ಣಗೊಳಿಸಿ ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬಹುದು.

# ಐಎಎಸ್ ಪರೀಕ್ಷೆಯನ್ನು ಎದುರಿಸಲು ಸಿದ್ಧತೆಗಳು ಹೇಗಿರಬೇಕು.

| ಕರಣ್​ಕುಮಾರ್ ಜೆಪಿನಗರ, ಬೆಂಗಳೂರು

ಜನರಲ್ ಸ್ಟಡೀಸ್​ಗೆ ಒತ್ತು ಕೊಡಬೇಕು. 6 ರಿಂದ 12ನೇ ತರಗತಿ ವರೆಗಿನ ಎನ್​ಸಿಇಆರ್​ಟಿ ಪುಸ್ತಕಗಳನ್ನು ಸಂಪೂರ್ಣ ಅಧ್ಯಯನ ಮಾಡಬೇಕು. ಪ್ರಸ್ತುತ ವಿದ್ಯಮಾನಗಳ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕು. ಕನಿಷ್ಠ ಪಕ್ಷ ಕಳೆದೊಂದು ವರ್ಷದ ಮಾಹಿತಿಯನ್ನು ತಿಳಿದಿರಬೇಕು. ತರಬೇತಿ ಮೂಲಕ ಮಾರ್ಗದರ್ಶನ ಪಡೆದು ನಂತರ ಪ್ರತಿ ವಾರ ಮಾದರಿ ಪರೀಕ್ಷೆಗಳಿಗೆ ಹಾಜರಾಗಬೇಕು.

# ಬ್ಯಾಂಕಿಂಗ್ ಪರೀಕ್ಷೆ ಕಷ್ಟವಾಗುತ್ತದೆ. ಅದನ್ನು ಸುಲಭ ಮಾಡಿಕೊಳ್ಳುವುದು ಹೇಗೆ?

| ಮಂಜುನಾಥ್ ಭಜಂತ್ರಿ ವಿಜಯಪುರ

ಬ್ಯಾಂಕಿಂಗ್ ಪರೀಕ್ಷೆಗೆ ಹಾಜರಾಗುವ ಮುನ್ನ ತರಬೇತಿ ಅಗತ್ಯ. ಅದರ ಜತೆಗೆ ಕನಿಷ್ಠ 10 ಸರಣಿ ಮಾದರಿ ಪರೀಕ್ಷೆಗಳನ್ನು ನೀವು ಎದುರಿಸಬೇಕು. ಅದರ ಫಲಿತಾಂಶದ ಆಧಾರದ ಮೇಲೆ ನಿಮ್ಮ ಸಿದ್ಧತೆ ಎಷ್ಟರಮಟ್ಟಿಗೆ ಇದೆ ಎಂಬುದು ತಿಳಿಯುತ್ತದೆ. ಬ್ಯಾಂಕಿಂಗ್​ನಲ್ಲಿ ಶೇ. 100 ಗಳಿಸಬೇಕೆಂದಿಲ್ಲ. ಕನಿಷ್ಠ ಶೇ.60 ಸಾಧಿಸಿದರೂ ಆಯ್ಕೆಯಾಗುವ ಅವಕಾಶಗಳಿರುತ್ತದೆ. ಅದಕ್ಕೆ ತಕ್ಕದಾದ ಅಧ್ಯಯನ ಅತ್ಯಗತ್ಯ.

# ಪಿಎಸ್​ಐ ಪರೀಕ್ಷೆಗೆ ಸಿದ್ಧತೆ ಹೇಗಿರಬೇಕು? ಯಾವ ವಿಷಯಗಳ ಅಧ್ಯಯನಕ್ಕೆ ಒತ್ತು ನೀಡಬೇಕು?

| ವೆಂಕಟೇಶ್ ಕೊಳ್ಳೆಗಾಲ

ಈ ಪರೀಕ್ಷೆಯಲ್ಲಿ ಕೇವಲ ಬಹು ಆಯ್ಕೆ ಪ್ರಶ್ನೆಗಳಗಿಂತಲೂ ಪ್ರಬಂಧ ಭಾಷಾಂತರ ಪ್ರಶ್ನೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಬೇಕು. ಪತ್ರಿಕೆ-1 ಮತ್ತು ಪತ್ರಿಕೆ -2ರಲ್ಲಿ ಚೆನ್ನಾಗಿ ಅಂಕಗಳನ್ನು ತೆಗೆದಾಗ ಆಯ್ಕೆ ಸುಲಭವಾಗಿರುತ್ತದೆ. ಜತೆಗೆ ದೈಹಿಕ ಪರೀಕ್ಷೆಯಲ್ಲಿ ಆಯ್ಕೆ ಆಗುವುದಕ್ಕೂ ಸಿದ್ಧತೆಗಳಿರಬೇಕು.

ನೆರವಿನ ಹಸ್ತ

ನೂರಾರು ಸ್ಪಧಾರ್ತ್ಮಕ ಪರೀಕ್ಷೆ ಎದುರಿಸಿದರೂ ಯಶಸ್ಸು ಸಿಕ್ಕಿಲ್ಲ, ಕೃಷಿ ಮಾಡೋಣ ಎಂದರೆ ಮಳೆ ಇಲ್ಲ. ವಯಸ್ಸು 35 ಆಗಿದೆ ಮುಂದೇನು ಎಂಬ ಚಿಂತೆಯಿದೆ…! ಧಾರವಾಡ ಜಿಲ್ಲೆ ಕುಂದಗೋಳದ ಈಶ್ವರಪ್ಪ ಕುಂಬಾರ ಅವರ ಪ್ರಶ್ನೆಯಿದು. ಅವರೇ ಹೇಳುವಂತೆ 100ಕ್ಕೂ ಹೆಚ್ಚು ಪರೀಕ್ಷೆಗಳನ್ನು ಕಟ್ಟಿ ಅವರು ಸೋಲನ್ನು ಅನುಭವಿಸಿದ್ದು, ಮಾರ್ಗದರ್ಶನ ಮಾಡುವಂತೆ ಕೋರಿದರು. ಇದಕ್ಕೆ ಕ್ಲಾಸಿಕ್ ಸ್ಟಡಿ ಸರ್ಕಲ್​ನ ಮುಖ್ಯಸ್ಥ ಲಕ್ಷ್ಮಣ ಎಸ್. ಉಪ್ಪಾರ ನೆರವಿನ ಹಸ್ತ ಚಾಚಿದ್ದು, ಈಶ್ವರಪ್ಪ ಅವರಿಗೆ ಉಚಿತ ತರಬೇತಿ ಒದಗಿಸುವುದರೊಂದಿಗೆ ಯಶಸ್ವಿ ಬದುಕು ಕಟ್ಟಿಕೊಳ್ಳಲು ಅಗತ್ಯ ಮಾರ್ಗದರ್ಶನ ನೀಡುವ ಭರವಸೆ ನೀಡಿದರು.

ವಿಷಯಕ್ಕೆ ತಕ್ಕ ತರಬೇತಿ ಅಗತ್ಯ

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿ ಕೇವಲ ಓದುತ್ತ ಕುಳಿತರೆ ಸಾಲದು. ಓದು ಹೇಗಿರಬೇಕು, ಯಾವುದನ್ನು ಓದಬೇಕೆಂಬುದು ಅಷ್ಟೇ ಮುಖ್ಯವಾಗಿರುತ್ತದೆ. ಹೀಗಾಗಿ ಕೋಚಿಂಗ್ ಎಂಬುದು ವಿದ್ಯಾರ್ಥಿಗಳ ಪಾಲಿನ ರೂಟ್ ಮ್ಯಾಪ್ ಆಗಿರುತ್ತದೆ. ‘‘ವರ್ಷಪೂರ್ತಿ ಓದಿದೆ ಫಲ ಸಿಗಲಿಲ್ಲ, ನಾನು ಓದಿರುವುದು ಪರೀಕ್ಷೆಯಲ್ಲಿ ಬಂದೇ ಇಲ್ಲ’’ ಎಂಬ ಕೊರಗು ವಿದ್ಯಾರ್ಥಿಗಳನ್ನು ಕಾಡುವುದು ಸಹಜ. ನುರಿತ ತಜ್ಞರ ಮಾರ್ಗದರ್ಶನದಲ್ಲಿ ತರಬೇತಿ ಹೊಂದಿದರೆ ಸಮಯ ಉಳಿತಾಯದ ಜತೆಗೆ ಗುರಿ ಸ್ಪಷ್ಟತೆಯೂ ದೊರೆಯುತ್ತದೆ. ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೆಚ್ಚಿಸುವಂತೆ ಕ್ಲಾಸಿಕ್ ಸ್ಟಡಿ ಸೆಂಟರ್ ತರಬೇತಿ ನೀಡುತ್ತಿದೆ.

| ಐ.ಜಿ.ಚೌಗಲಾ ಹಿರಿಯ ಸಂಪಾದಕರು ಸ್ಪರ್ಧಾ ಸ್ಪೂರ್ತಿ

2 Replies to “IAS, KAS, PSI, BANKING ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ಪಷ್ಟತೆಯೇ ಕೀಲಿಕೈ”

Leave a Reply

Your email address will not be published. Required fields are marked *