
ಗುಂಡ್ಲುಪೇಟೆ: ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರು ತಮ್ಮ ವಿಚಾರಧಾರೆಗಳ ಮೂಲಕ ಜಗತ್ತಿಗೆ ಶಾಂತಿ ಸಂದೇಶ ನೀಡಿದ್ದರು ಎಂದು ಚಾಮರಾಜನಗರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಪಿ.ದೇವರಾಜು ಹೇಳಿದರು.
ತಾಲೂಕಿನ ಬೇಗೂರು ಗ್ರಾಮದ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಬುದ್ಧ-ಬಸವ-ಅಂಬೇಡ್ಕರ್‌ರ ವಿಚಾರಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ತಾಂಡವವಾಡುತ್ತಿದ್ದ ಅಸಮಾನತೆ ನಿವಾರಣೆಗೆ ಮುಂದಾಗಿದ್ದರು. ಕಾಯಕವೇ ಕೈಲಾಸ ಎಂಬ ಮೂಲಮಂತ್ರದೊಂದಿಗೆ ಪ್ರತಿಯೊಬ್ಬರೂ ಮಾಡಬೇಕಾದ ಕೆಲಸಗಳನ್ನು ಒತ್ತಿ ಹೇಳಿದ್ದರು ಎಂದು ಸ್ಮರಿಸಿದರು.
ಅಂಬೇಡ್ಕರ್ ಅವರು ಹೋರಾಟ ನಡೆಸುವ ಮೂಲಕ ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಅಸಮಾನತೆ ಹಾಗೂ ಅಸ್ಪೃಶ್ಯತೆ ನಿವಾರಣೆಗಾಗಿ ಶ್ರಮಿಸಿದ್ದರು. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು ನೀಡುವ ಮೂಲಕ ಸಮಾಜದಲ್ಲಿ ಸಮಾನತೆ ನೆಲೆಸುವಂತೆ ಮಾಡಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆ ಪ್ರಾಂಶುಪಾಲೆ ಎಂ.ಆರ್.ಲಲಿತಾ, ತರಬೇತಿ ಅಧಿಕಾರಿ ಎಚ್.ಎಸ್.ಪ್ರಸಾದ್, ಆಡಳಿತಾಧಿಕಾರಿ ಶ್ರೀನಿವಾಸ್, ಅಧೀಕ್ಷಕಿ ಅನ್ನಪೂರ್ಣಾ ಸೇರಿದಂತೆ ಹಲವರು ಇದ್ದರು.