ಕೃಷಿ ಲಕ್ಷ್ಮೀಗೆ ಫಿಲಿಪ್ಪೀನ್ಸ್ ಭೇಟಿ ಭಾಗ್ಯ

ರಾಯಚೂರು/ ಕೊಪ್ಪಳ: ಫಿಲಿಪ್ಪೀನ್ಸ್​ನಲ್ಲಿರುವ ಅಂತಾರಾಷ್ಟ್ರೀಯ ಭತ್ತ ಸಂಶೋಧನೆ ಕೇಂದ್ರದಲ್ಲಿ ಆಯೋಜನೆಗೊಂಡಿರುವ ನೀಡಲಾಗುವ ಭತ್ತ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ತರಬೇತಿಗೆ ಸಿಂಧನೂರು ತಾಲೂಕಿನ ಎಲೆಕೂಡ್ಲಿಗಿ ಗ್ರಾಮದ ಮಹಿಳೆ ಲಕ್ಷ್ಮಿ ಮರೇಗೌಡ, ಗಂಗಾವತಿ ತಾಲೂಕಿನ ಹಿರೇಜಂತಗಲ್ ಗ್ರಾಮದ ಭಾಗ್ಯ ಚನ್ನಬಸವಸ್ವಾಮಿ ಆಯ್ಕೆಯಾಗಿದ್ದಾರೆ.

ಆ.6ರಿಂದ 10ವರೆಗೆ ಅತ್ಯಾಧುನಿಕ ಕೃಷಿ ಪದ್ಧತಿಗಳು ಮತ್ತು ತಂತ್ರಜ್ಞಾನ ತರಬೇತಿ ನಡೆಯಲಿದೆ.

ಸಿಂಧನೂರು ಲಕ್ಷ್ಮೀ: 7-8 ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿರುವ ಲಕ್ಷ್ಮಿ ಮರೇಗೌಡ ಅವರು ಜೋಳ, ಸಜ್ಜೆ, ಕಡಲೆ ಬೆಳೆಗಳನ್ನು ಸಾವಯವ ಕೃಷಿಯಲ್ಲಿ ಬೆಳೆಯುತ್ತಿದ್ದು, ಒಂದು ಎಕರೆ ಪ್ರದೇಶದಲ್ಲಿ ಭತ್ತ ಬೆಳೆದು ಆಹಾರಕ್ಕೆ ಬಳಸುತ್ತಿದ್ದಾರೆ. ಕಡಿಮೆ ಖರ್ಚಿನಲ್ಲಿ ಸಮೃದ್ಧಿ ಬೆಳೆ ತೆಗೆದು ಆರ್ಥಿಕ ಅಭಿವೃದ್ಧಿ ಸಾಧಿಸಿದ್ದಾರೆ. ಏಳು ವರ್ಷಗಳಿಂದ ಸ್ವಂತವಾಗಿ ಎರೆಹುಳು ಸಾಕಣೆ ಮಾಡಿ ಗೊಬ್ಬರ ಕೂಡ ಮಾರಾಟ ಮಾಡುತ್ತಿದ್ದಾರೆ. ಅದೇ ಗೊಬ್ಬರವನ್ನು ಕೃಷಿ ಚಟುವಟಿಕೆಗೂ ಬಳಕೆ ಮಾಡಿಕೊಳ್ಳುತ್ತಾರೆ. ರೋಗಮುಕ್ತ ಬೆಳೆ ಬೆಳೆದುಕೊಳ್ಳುವಲ್ಲಿ ಯಶಸ್ಸು ಪಡೆದಿರುವ ಲಕ್ಷ್ಮೀ, ಕೃಷಿ ಜತೆಗೆ ಹೈನುಗಾರಿಕೆ ನಡೆಸುತ್ತಿದ್ದಾರೆ. ಜೂ.26ರಿಂದ ಜು.2ವರೆಗೆ ಓರಿಸ್ಸಾದ ಭುವನೇಶ್ವರಿಯಲ್ಲಿ ನಡೆದ ಆಧುನಿಕ ಕೃಷಿ ಪದ್ಧತಿ ತರಬೇತಿಯಲ್ಲಿ ಭಾಗವಹಿಸಿದ್ದರು.

ಕೊಪ್ಪಳದ ಭಾಗ್ಯ: ಭಾಗ್ಯ ಚನ್ನಬಸವಸ್ವಾಮಿ ಪ್ರಗತಿಪರ ಕೃಷಿಕರಾಗಿದ್ದು, ಸಾವಯವ ಪದ್ಧತಿಯಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಪತಿ ವೈದ್ಯ ವೃತ್ತಿಯಲ್ಲಿದ್ದು, ಪತ್ನಿಗೆ ಸಹಕಾರ ನೀಡುತ್ತಿದ್ದಾರೆ. ಒಟ್ಟು 25 ಎಕರೆ ಜಮೀನನಲ್ಲಿ 9 ಎಕರೆ ಭತ್ತ ಬೆಳೆದಿದ್ದು, ಉಳಿದ ಜಮೀನಿನಲ್ಲಿ ಪೇರಲ, ಮೋಸಂಬಿ, ಮಾವು, ಹಲಸು ಸೇರಿ ಮಿಶ್ರ ಬೆಳೆ ಬೆಳೆಯುತ್ತಿದ್ದಾರೆ. ರಸಗೊಬ್ಬರಗಳಿಗಿಂತ ಕೊಟ್ಟಿಗೆ

ಗೊಬ್ಬರ ಬಳಸಿ ಭತ್ತ ಬೆಳೆಯುತ್ತಿದ್ದು, ಎಕರೆಗೆ 45ಚೀಲ ಇಳುವರಿ ಪಡೆದಿದ್ದಾರೆ. ತಾವೇ ಮಾರುಕಟ್ಟೆ ಕಂಡುಕೊಂಡಿದ್ದು, ಚೀಲವೊಂದಕ್ಕೆ 1,250-1,750 ರೂ. ಪಡೆಯುತ್ತಿದ್ದಾರೆ. ಸದ್ಯ ಒಂದು ಎಕರೆಯಲ್ಲಿ ಕೂರಿಗೆ ಪದ್ಧತಿ ಭತ್ತ ಬಿತ್ತಿದ್ದು, ಉಳಿದಂತೆ ಸಾವಯವ ಪದ್ಧತಿಯಲ್ಲಿ ನಾಟಿ ಮಾಡಿ ಪ್ರಗತಿಪರ ಕೃಷಿ ಮಹಿಳೆಯಾಗಿದ್ದಾರೆ.