ಔಷಧ ಅಂಗಡಿಯ ಕೆಮಿಸ್ಟ್ಸ್​ ಮತ್ತು ಡ್ರಗ್ಗಿಸ್ಟ್ ಎಂಬ ಹೆಸರಿನ ಬದಲಿಗೆ ಫಾರ್ಮಸಿ ಪದ ಬಳಕೆಗೆ ನಿರ್ಧಾರ

ನವದೆಹಲಿ: ಮೆಡಿಕಲ್​ ಶಾಪ್​ಗಳ ಹೆಸರಿನೊಂದಿಗೆ ಅಂಗಡಿಯವರು ಹಾಕಿಕೊಳ್ಳುವ ಸಂಕೇತಗಳಾದ ಕೆಮಿಸ್ಟ್ಸ್​ ಮತ್ತು ಡ್ರಗ್ಗಿಸ್ಟ್ ಎಂಬ ಪದಗಳ ಬದಲಿಗೆ ಇನ್ನು ಮುಂದೆ ‘ಫಾರ್ಮಸಿ’ ಎಂಬ ಪದವನ್ನು ಸರ್ಕಾರದ ಔಷಧ ಉತ್ಪನ್ನಗಳ ಉನ್ನತ ಮಂಡಳಿಯ ಆದೇಶದ ಮೇರೆಗೆ ಬದಲಿಸಬೇಕಿದೆ.

ಭಾರತ ಔಷಧ ನಿಯಂತ್ರಣದ ಜನರಲ್​ ಡಾ. ಎಸ್​. ಈಶ್ವರ್ ರೆಡ್ಡಿ ಈ ಕುರಿತು ಮಾಹಿತಿ ನೀಡಿದ್ದು, ಔಷಧ ಅಂಗಡಿಗಳು ವಿವಿಧ ರೀತಿಯ ಹೆಸರಗಳನ್ನು ಬಳಸುತ್ತಿದ್ದು, ಇದಕ್ಕೆ ಏಕರೂಪತೆಯನ್ನು ತರುವ ಅಗತ್ಯವಿತ್ತು. ಹೀಗಾಗಿ ವಿಶ್ವದಾದ್ಯಂತ ಹೆಚ್ಚಾಗಿ ಬಳಸುತ್ತಿರುವ ಫಾರ್ಮಸಿ ಪದವನ್ನು ನಾವು ಸಹ ಬಳಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಡ್ರಗ್​ ಮತ್ತು ತಾಂತ್ರಿಕ ಸಲಹಾ ಮಂಡಳಿ (ಡಿಟಿಎಬಿ) ಔಷಧಗಳ ಅಂಗಡಿ ಮೇಲಿನ ಹೆಸರನ್ನು ಬದಲಿಸಲು ಅನುಮೋದನೆ ನೀಡಿದೆ. ಈ ಕುರಿತು ಮೊದಲು ಚರ್ಚಿಸಲಾಗಿದ್ದು ಕೆಮಿಸ್ಟ್ಸ್​ ಮತ್ತು ಡ್ರಗ್ಗಿಸ್ಟ್​ಗಳು ಎಂಬ ಪದ 1945ರಲ್ಲಿ ಬಳಸಿದ್ದು ತುಂಬಾ ಹಳೆಯದಾಗಿದೆ. ಮತ್ತು ಇದು ವೃತ್ತಿಪರ ಔಷಧಕಾರರನ್ನು ಈ ಹೆಸರಿನಿಂದ ಉಲ್ಲೇಖಿಸುವುದು ಸೂಕ್ತವಲ್ಲದ ಕಾರಣದಿಂದ ಬದಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಜನವರಿಯಲ್ಲಿ ನಡೆದ 55ನೇ ಡ್ರಗ್ಸ್ ಕನ್ಸಲ್ಟೇಟಿವ್ ಕಮಿಟಿಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದ್ದು ಕಮಿಟಿಯು ಮರುನಾಮಕರಣ ಮಾಡುವ ಶಿಫಾರಸನ್ನು ಮಾಡಿದೆ. ಈ ಪ್ರಸ್ತಾವನೆಯನ್ನು ಏಪ್ರಿಲ್ 2ರಂದು ನಡೆದ 82ನೇ ಡಿಟಿಎಬಿ ಸಭೆಯ ಮುಂದೆ ಇರಿಸಲಾಗಿತ್ತು. ಈ ಕುರಿತು ಮಂಡಳಿಯು ನಿಯಮಗಳನ್ನು ತಿದ್ದುಪಡಿ ಮಾಡಲು ಒಪ್ಪಿಕೊಂಡಿದೆ.

ನಮ್ಮ ಡೇಟಾಬೇಸ್ ಅನ್ನು ನಾವು ನವೀಕರಿಸಬೇಕು ಹಾಗೂ ನೋಂದಾಯಿತವಾಗಿರುವ ಮಳಿಗೆಗಳು ಬದಲಾವಣೆ ಮಾಡಿದ ಹೆಸರುಗಳನ್ನು ಬದಲಿಸಬೇಕು. ಅಂತಿಮ ಅಧಿಸೂಚನೆಯ ನಂತರ ಹೆಸರು ಬದಲಾವಣೆಗೆ ಅವಕಾಶ ನೀಡುವುದಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಡಾ. ರೆಡ್ಡಿ ಅವರು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರದ ಸಚಿವಾಲಯವು ತಿದ್ದುಪಡಿಗೆ ಸೂಚಿಸಿದ ನಂತರ, ಅಗತ್ಯ ಬದಲಾವಣೆಗಳನ್ನು ಮಾಡಲು ಕೆಮಿಸ್ಟ್ಸ್​ಗಳಿಗೆ ಸಮಯವನ್ನು ನೀಡಲಾಗುತ್ತದೆ.