ಅಂಧ ವಿದ್ಯಾರ್ಥಿಗೆ ಪಿಎಚ್‌ಡಿ

ಮೈಸೂರು: ಅಂಧ ಸಂಶೋಧನಾ ವಿದ್ಯಾರ್ಥಿ ಪಿ.ವಿ.ನಾಗರಾಜ ಅವರು ಪಿಎಚ್‌ಡಿ ಪದವಿಗೆ ಭಾಜನರಾಗಿದ್ದಾರೆ.
ಕನ್ನಡ ವಿಷಯದಲ್ಲಿ ಇವರು ಸಾದರ ಪಡಿಸಿದ ‘ಕನ್ನಡ ಚಲನಚಿತ್ರಗೀತೆಗಳಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ’ ಎಂಬ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿಗಾಗಿ ಅಂಗೀಕರಿಸಿದೆ. ಇವರಿಗೆ ಡಾ.ಬಿ.ಪಿ.ಆಶಾಕುಮಾರಿ ಮಾರ್ಗದರ್ಶಕರಾಗಿದ್ದರು.

ಕನ್ನಡ ಭಾಷಾ ವಿಷಯದಲ್ಲಿ ಪಿಎಚ್‌ಡಿ ಮಾಡಿದ ಅಂಧರ ಪೈಕಿ ಇವರು ರಾಜ್ಯದಲ್ಲಿ ಮೂರನೆಯವರು ಮತ್ತು ಮೈಸೂರು ವಿಶ್ವವಿದ್ಯಾಲಯದ ಮಟ್ಟಿಗೆ ಮೊದಲಿಗರು. ಜತೆಗೆ, ಪಿಎಚ್‌ಡಿ ಮಾಡಿದ ದೃಷ್ಠಿಹೀನರಲ್ಲಿ ಇವರು ಅಂದಾಜು ಎಂಟನೆಯವರು ಆಗಿದ್ದಾರೆ.

ಪಡುವಾರಹಳ್ಳಿಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮೂಲತಃ ಬಳ್ಳಾರಿ ಜಿಲ್ಲೆ ಸಿರಗುಪ್ಪದವರು. ಇವರದ್ದು ಬಡಕುಟುಂಬ. 8 ವರ್ಷದಲ್ಲೇ ನರದೌರ್ಬಲ್ಯದಿಂದ ಕಣ್ಣು ಕಳೆದುಕೊಂಡಿದ್ದಾರೆ.

ಹುಬ್ಬಳ್ಳಿಯ ಸಿದ್ದಾರೂಢಮಠದ ಬಳಿ ಇರುವ ಅಂಧ ಮಕ್ಕಳ ಸರ್ಕಾರಿ ಪಾಠ ಶಾಲೆಯಲ್ಲಿ 1ರಿಂದ ಎಸ್ಸೆಸ್ಸೆಲ್ಸಿ ವರೆಗೆ ಓದಿದ್ದಾರೆ. ಅದೇ ಊರಿನ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪಿಯುಸಿ ಮುಗಿಸಿದ ಇವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪೂರೈಸಿದ್ದಾರೆ. ಮೈಸೂರು ವಿವಿಯ ಕುವೆಂಪು ಅಧ್ಯಯನ ಸಂಸ್ಥೆಗೆ ಸೇರಿದ ಇವರು ಎಂಎ ಸ್ನಾತಕೋತ್ತರ ಪರೀಕ್ಷೆಯಲ್ಲಿ 3ನೇ ರ‌್ಯಾಂಕ್ ಪಡೆದಿದ್ದಾರೆ. ಕಂಪ್ಯೂಟರ್‌ನಲ್ಲಿ ಎಂಎ ಪರೀಕ್ಷೆ ಬರೆದ ಇವರು ವಿವಿಗೆ ಮೊದಲಿಗರು.