More

    ಪಿಎಫ್​ಐ, ಎಸ್​ಡಿಪಿಐ ನಿಷೇಧ?: ಹಿಂದು ಮುಖಂಡರ ಹತ್ಯೆ ಯತ್ನ ಬಹಿರಂಗ, ಕೇಂದ್ರಕ್ಕೆ ಶಿಫಾರಸಿಗೆ ಮುಂದಾದ ರಾಜ್ಯ ಸರ್ಕಾರ

    ರಾಜ್ಯ ಸರ್ಕಾರ ಪೌರತ್ವ ವಿರೋಧಿ ಹೋರಾಟವನ್ನು ಗುರಾಣಿಯಾಗಿಸಿಕೊಂಡು ಹಿಂದು ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಎಸ್​ಡಿಪಿಐನ ಆರು ಸದಸ್ಯರು ರಾಜಧಾನಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಐಸಿಸ್ ಜತೆ ನಂಟು ಹೊಂದಿದ್ದ ಹಲವು ಶಂಕಿತ ಉಗ್ರರು ಸೆರೆಸಿಕ್ಕ ಬೆನ್ನಲ್ಲೇ ಬೆಳಕಿಗೆ ಬಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಪಿಎಫ್​ಐ, ಎಸ್​ಡಿಪಿಐ ಸೇರಿ ಮತ್ತಿತರ ಹೆಸರಿನಲ್ಲಿ ಸಕ್ರಿಯವಾಗಿರುವ ಮೂಲಭೂತವಾದಿ ಸಂಘಟನೆಗಳನ್ನು ನಿಷೇಧಿಸುವತ್ತ ಹೆಜ್ಜೆ ಇಟ್ಟಿದೆ.

    ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಹಿಂದು ಮುಖಂಡರ ಕೊಲೆ, ಕೊಲೆ ಯತ್ನ ಮತ್ತು ಉಗ್ರರ ಸಂಚುಗಳನ್ನು ನಿಗ್ರಹಿಸಲು ಪಿಎಫ್​ಐ, ಎಸ್​ಡಿಪಿಐ ಸೇರಿ ಮತ್ತಿತರ ಹೆಸರಿನಲ್ಲಿ ಸಕ್ರಿಯವಾಗಿರುವ ಸಂಘಟನೆಗಳನ್ನು ನಿಷೇಧಿಸುವ ಕುರಿತು ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

    ಶಾಸಕ ತನ್ವೀರ್ ಸೇಠ್ ಕೊಲೆ ಯತ್ನ, ಸಂಸದ ತೇಜಸ್ವಿ ಸೂರ್ಯ ಹಾಗೂ ಹಿಂದುಪರ ಚಿಂತಕ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಸ್ಕೆಚ್ ಹಾಕಿರುವ ಮಾಹಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಉಗ್ರ ಕೃತ್ಯ ಎಸಗುವ ಸಂಘಟನೆಗಳ ಸಮಗ್ರ ಮಾಹಿತಿ ತರಿಸಿಕೊಂಡು ಅಂತಹ ಸಂಘಟನೆಗಳನ್ನು ನಿಷೇಧಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ.

    ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ ಹಲವಾರು ಕೊಲೆ, ಕೊಲೆ ಯತ್ನ, ಸಂಚುಗಳು ಸುಮಾರು ಏಳೆಂಟು ವರ್ಷಗಳಿಂದ ವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಿವೆ. ಹಿಂದಿನ ಸರ್ಕಾರ ಪಿಎಫ್​ಐ ಮತ್ತಿತರ ಸಂಘಟನೆಗಳ ಮೇಲಿನ ಮೊಕದ್ದಮೆಗಳನ್ನು ಹಿಂಪಡೆದಿತ್ತು. ಇದರಿಂದ ಉಗ್ರರಿಗೆ ಮತ್ತಷ್ಟು ಕುಮ್ಮಕ್ಕು ಸಿಕ್ಕಂತಾಗಿತ್ತು. ಇದಾದ ತರುವಾಯ ಹಲವಾರು ಘೋರ ಕೃತ್ಯಗಳು ನಡೆದಿವೆ. ಶಾಸಕ ತನ್ವೀರ್ ಸೇಠ್ ಮೇಲೆ ಕೊಲೆ ಯತ್ನ ನಡೆದಿದೆ.

    ಸಿಎಎ ಪರವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವರುಣ್ ಕೊಲೆ ಯತ್ನ ಪ್ರಕರಣದ ತನಿಖೆ ನಡೆಸಿದಾಗ ಸಂಸದ ತೇಜಸ್ವಿ ಸೂರ್ಯ ಕೊಲೆ ಯತ್ನ ಸಂಗತಿ ಬೆಳಕಿಗೆ ಬಂದಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಿದ್ದೇವೆ. ಅಲ್ಲದೆ, ಇನ್ನೂ ಹಲವೆಡೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೊಲೆ, ಹಲ್ಲೆ ನಡೆದಿವೆ. ಗಲಭೆ, ಹಿಂಸಾಚಾರ ಪ್ರಯತ್ನಗಳಾಗಿವೆ. ಇಂತಹ ಘಟನೆಗಳಲ್ಲಿ ಬೇರೆ ಬೇರೆ ರಾಜ್ಯ, ದೇಶಗಳ ಉಗ್ರಗಾಮಿ ಸಂಘಟನೆಗಳ ಸಂಪರ್ಕವಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ದುಷ್ಕೃತ್ಯ ಎಸಗುವ ಸಂಘಟನೆಗಳನ್ನು ನಿಗ್ರಹಿಸಲು ಹಾಗೂ ನಿಷೇಧಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.

    ಉತ್ತರ ಪ್ರದೇಶ ಸರ್ಕಾರ ಇಂತಹ ಸಂಘಟನೆಗಳ ವಿರುದ್ಧ ಕ್ರಮ ಜರುಗಿಸಲು ಈಗಾಗಲೇ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಆದಷ್ಟು ಶೀಘ್ರ ಮಾಹಿತಿ ತರಿಸಿಕೊಳ್ಳಲಾಗುತ್ತಿದೆ. ವಿವರ ಬಂದ ಮೇಲೆ ಕ್ರೋಡೀಕರಿಸಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ರವಾನಿಸುತ್ತೇವೆ ಎಂದು ತಿಳಿಸಿದರು.

    ತಮಿಳುನಾಡಿನಲ್ಲಿ ನಡೆದ ಎರಡು ಕೊಲೆ ಪ್ರಕರಣಗಳ ಕುರಿತು ಕೇಂದ್ರ ತನಿಖಾ ಸಂಸ್ಥೆ, ತಮಿಳುನಾಡು, ಕರ್ನಾಟಕ, ದೆಹಲಿ ತನಿಖಾ ತಂಡಗಳು ನಡೆಸಿದ ವಿಚಾರಣೆಯಲ್ಲಿ ಹಲವು ಮಹತ್ವದ ಮಾಹಿತಿ ದೊರೆತಿವೆ. ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ಸಮಾಜದಲ್ಲಿ ಶಾಂತಿ ಕದಡುವ ಸಂಘಟನೆಗಳನ್ನು ಮೂಲೋತ್ಪಾಟನೆ ಮಾಡಲು ಸರ್ಕಾರ ಮುಂದಾಗಿದೆ ಎಂದರು.

    ರಾಜ್ಯದಲ್ಲಿ ಉಗ್ರ ಕೃತ್ಯ ಎಸಗುವಲ್ಲಿ ಸಕ್ರಿಯವಾಗಿರುವ ಸಂಘಟನೆಗಳಿಗೆ ಬೇರೆ ಬೇರೆ ರಾಜ್ಯ, ದೇಶಗಳ ಉಗ್ರ ಸಂಘಟನೆಗಳ ನಂಟಿದೆ. ಸಿಮಿ ಎಂಬ ಸಂಘಟನೆ ಇತ್ತು, ಆದನ್ನು ನಿಷೇಧಿಸಿದ ಮೇಲೆ ಈಗ ಎಸ್​ಡಿಪಿಐ, ಪಿಎಫ್​ಐ ಎಂದು ಹೆಸರು ಬದಲಾಯಿಸಿಕೊಂಡಿವೆ. ಈ ಸಂಘಟನೆಗಳನ್ನು ನಿಷೇಧ ಮಾಡುವ ಬಗ್ಗೆ ತಯಾರಿ ನಡೆಸುತ್ತಿದ್ದೇವೆ.

    | ಬಸವರಾಜ ಬೊಮ್ಮಾಯಿ ಗೃಹ ಸಚಿವ

    ಮಾಹಿತಿ ಯಾಚನೆ

    ಉಗ್ರ ಸಂಘಟನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕಳುಹಿಸುವಂತೆ ಈಗಾಗಲೇ ಪೊಲಿಸರಿಗೆ ಸೂಚಿಸಿದ್ದು, ಶೀಘ್ರದಲ್ಲೇ ಮಾಹಿತಿ ತರಿಸಿಕೊಂಡು ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಎಂದು ಬೊಮ್ಮಾಯಿ ವಿವರಿಸಿದರು. ಕಾನೂನು ಸಚಿವ ಮಾಧುಸ್ವಾಮಿ ಉಪಸ್ಥಿತರಿದ್ದರು.

    ದಾಳಿ ಸಂಚಿನ ಕ್ಷಣಕ್ಷಣ…

    • ಡಿ.22ರ ಬೆಳವಿನ ಜಾವ ಕೃತ್ಯಕ್ಕಾಗಿ ನೀಲಿನಕ್ಷೆ ತಯಾರಿ
    • ಬೆಳಗ್ಗೆ 8.30ಕ್ಕೆ ಮಾರಕಾಸ್ತ್ರಗಳೊಂದಿಗೆ ಸ್ಕೂಟರ್​ನಲ್ಲಿ ತೆರಳಿ ಪುರಭವನ ಬಳಿ ಸುತ್ತಾಟ
    • ರ್ಯಾಲಿಯಲ್ಲಿ ಪಾಲ್ಗೊಂಡವರ ಮೇಲೆ 7 ಬಾರಿ ಕಲ್ಲೆಸೆತ
    • ಪ್ಲಾನ್ ವಿಫಲವಾದ ಬಳಿಕ ಕುಂಬಾರ ಗುಡಿ ರಸ್ತೆಯಲ್ಲಿ ವರುಣ್ ಮೇಲೆ ದಾಳಿ
    • ದುಷ್ಕೃತ್ಯದ ಬಳಿಕ ಸ್ಕೂಟರ್​ನಲ್ಲೇ ಬಿಡದಿಗೆ ಪ್ರಯಾಣ, ರಕ್ತಸಿಕ್ತ ಬಟ್ಟೆಗಳಿಗೆ ಬೆಂಕಿ ಹಚ್ಚಿದ ಬಳಿಕ ನೈಸ್ ರಸ್ತೆಯ ಕೆರೆಯಲ್ಲಿ ಮಾರಕಾಸ್ತ್ರ ಎಸೆದಿದ್ದರು

    ಹಿಂದು ಮುಖಂಡರಿಗೆ ಸ್ಕೆಚ್

    ಬೆಂಗಳೂರು: ರಾಜ್ಯಾದ್ಯಂತ ಉಗ್ರರ ಬೇಟೆ ಮುಂದುವರಿದಿರುವಂತೆಯೇ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿ ಪರವಾಗಿ ನಿಂತಿದ್ದ ಹಿಂದು ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್​ಡಿಪಿಐ) 6 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಸಿಎಎ ಜಾರಿ ಪರವಾಗಿ ಡಿ.22ರಂದು ಟೌನ್​ಹಾಲ್​ನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಭಾಗವಹಿಸಿದ್ದ ಆರ್​ಎಸ್​ಎಸ್ ಕಾರ್ಯಕರ್ತ ವರುಣ್ ಕೊಲೆ ಯತ್ನ ಪ್ರಕರಣದ ತನಿಖೆ ವೇಳೆ ಈ ಗ್ಯಾಂಗ್ ಸೆರೆಸಿಕ್ಕಿದೆ. ಹಿಂದುಪರ ಚಿಂತಕ ಚಕ್ರವರ್ತಿ ಸೂಲಿಬೆಲೆ, ಸಂಸದ ತೇಜಸ್ವಿ ಸೂರ್ಯ ಅವರನ್ನು ಗುರಿಯಾಗಿಸಿಕೊಂಡಿದ್ದ ಆರ್.ಟಿ.ನಗರದ ಮೊಹಮ್ಮದ್ ಇರ್ಫಾನ್(33), ಸೈಯದ್ ಅಕ್ಬರ್(46), ಲಿಂಗರಾಜಪುರದ ಸೈಯದ್ ಸಿದ್ಧಿಕ್ ಅಕ್ಬರ್ (30), ಕೆ.ಜಿ.ಹಳ್ಳಿಯ ಅಕ್ಬರ್ ಬಾಷಾ (27), ಆರ್.ಟಿ. ನಗರದ ಸನಾವುಲ್ಲಾ ಷರೀಷ್(28) ಮತ್ತು ಶಿವಾಜಿನಗರದ ಸಾಧಿಕ್ ಉಲ್ ಅಮೀನ್(39)ನನ್ನು ಬಂಧಿಸಲಾಗಿದೆ.

    ವರುಣ್ ಮೇಲೆ ದಾಳಿಗೆ ಬಳಸಿದ್ದ ಮಾರಕಾಸ್ತ್ರ, ಸ್ಕೂಟರ್, ರಕ್ತಸಿಕ್ತ ಬಟ್ಟೆ ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಬಂಧಿತರನ್ನು ಕಸ್ಟಡಿಗೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

    ಬಟ್ಟೆ ಮೇಲೆ ಬಟ್ಟೆ!: ಹಿಂದು ಮುಖಂಡರ ಹತ್ಯೆಗೆ ತಾಲೀಮು ನಡೆಸಿದ್ದ ಆರೋಪಿಗಳು ಪೊಲೀಸರಿಗೆ ಸುಳಿವು ಸಿಗದಂತೆ ಮೊಬೈಲ್​ಗಳನ್ನು ಮನೆಯಲ್ಲಿಯೇ ಆನ್ ಮಾಡಿ ಇಟ್ಟಿದ್ದರು. ಹೆಲ್ಮೆಟ್ ಧರಿಸಿ ಬೈಕ್​ಗಳಿಗೆ ನೋಂದಣಿ ಸಂಖ್ಯೆ ಗೊತ್ತಾಗದಂತೆ ಮಸಿ ಬಳಿದಿದ್ದರು. ಬಟ್ಟೆ ಮೇಲೆ ಬಟ್ಟೆ ಧರಿಸಿ ಬಂದಿದ್ದು, ಕೊಲೆ ಬಳಿಕ ಮೇಲೆ ಧರಿಸಿದ ಬಟ್ಟೆಯನ್ನು ಬಿಚ್ಚಿ ಹೋಗಲು ಯೋಜನೆ ರೂಪಿಸಿಕೊಂಡಿದ್ದರು.

    ಹೀಗಿತ್ತು ಸ್ಕೆಚ್!: ಸಿಎಎ ಪರ ಸಮಾವೇಶದ ಮೇಲೆ ಕಲ್ಲು ತೂರಿ ಜನರು ಚೆಲ್ಲಾಪಿಲ್ಲಿಯಾದಾಗ ಮುಖಂಡರು ಮಾತ್ರ ಉಳಿಯುತ್ತಾರೆ. ಈ ವೇಳೆ ಒಳನುಗ್ಗಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ ಸ್ಕೂಟರ್​ನಲ್ಲಿ ಪರಾರಿಯಾಗುವುದು.

    ಬೆಂಗಳೂರಿನಲ್ಲಿ ಶಾಂತಿ ಕದಡಲು ಯತ್ನಿಸುವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಸದಾ ಸಿದ್ಧರಾಗಿದ್ದಾರೆ.

    | ಭಾಸ್ಕರ್ ರಾವ್ ಬೆಂಗಳೂರು ನಗರ ಪೊಲೀಸ್ ಆಯುಕ್ತ

    ಇಂಥವರು ಎಷ್ಟೇ ಬೆದರಿಕೆ ಹಾಕಿದರೂ ಕೊನೇ ಉಸಿರು ಇರುವವರೆಗೂ ನನ್ನ ಹೋರಾಟ ಮುಂದುವರಿ ಯುತ್ತದೆ. ನಾನು ಹೇಗೆ ಸತ್ತರೂ ರಾಷ್ಟ್ರಕ್ಕಾಗಿಯೇ ಸಾಯುತ್ತೇನೆ.

    | ಚಕ್ರವರ್ತಿ ಸೂಲಿಬೆಲೆ

    -ಠಿ;10 ಸಾವಿರ ಸಂಬಳ

    ಬಂಧಿತ ಇರ್ಫಾನ್, ಸೈಯದ್, ಸಿದ್ದಿಕ್, ಅಕ್ಬರ್, ಸನಾವುಲ್ಲಾ ಮತ್ತು ಸಾದಿಕ್ ಎಸ್​ಡಿಪಿಐನ ಸಕ್ರಿಯ ಸದಸ್ಯರು. ಸಂಘಟನೆಗೆ ಹೊಸ ಸದಸ್ಯರ ನೇಮಕಾತಿ, ತರಬೇತಿ, ಗಲಭೆ ಮತ್ತು ಕೊಲೆ ಮಾಡಲು ತಿಂಗಳಿಗೆ 10 ಸಾವಿರ ರೂ. ಎಸ್​ಡಿಪಿಐನಿಂದ ವೇತನ ನೀಡಲಾಗುತ್ತಿತ್ತು. ಫಂಡ್ ಮಾಡುತ್ತಿದ್ದ ವ್ಯಕ್ತಿ, ಬ್ಯಾಂಕ್ ಖಾತೆ ಪತ್ತೆ ಹಚ್ಚಿ ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts