Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಪ್ರಾಣಿಗಳೇಕೆ ಪಾತ್ರಗಳಾಗುತ್ತಿವೆ?

Friday, 16.03.2018, 3:04 AM       No Comments

‘ಮುಂಗಾರು ಮಳೆ’ ಚಿತ್ರದಲ್ಲಿ ನಂದಿನಿ (ಪೂಜಾ ಗಾಂಧಿ) ಹಾಗೂ ಪ್ರೀತಮ್ (ಗಣೇಶ್) ಪಾತ್ರಗಳಷ್ಟೇ ಜನ ಮೆಚ್ಚುಗೆ ಗಳಿಸಿದ್ದು ದೇವದಾಸ್ (ಮೊಲ) ಪಾತ್ರ. ‘ಮುಂಗಾರು ಮಳೆ’ ಮಾತ್ರವಲ್ಲ, ಕನ್ನಡದ ಬಹುತೇಕ ಚಿತ್ರಗಳಲ್ಲಿ ಪ್ರಾಣಿಗಳೂ ಪ್ರಮುಖ ಪಾತ್ರವಾಗಿರುವುದು ಹೊಸತೇನಲ್ಲ. ಡಾ. ರಾಜ್​ಕುಮಾರ್ ಅಭಿನಯದ ‘ಬಂಗಾರದ ಪಂಜರ’ದಲ್ಲಿ ಟಗರು, ಡಾ. ವಿಷ್ಣುವರ್ಧನ್ ಅಭಿನಯದ ‘ಜಯಸಿಂಹ’ ಚಿತ್ರದಲ್ಲಿ ಆನೆ ಪಾತ್ರಗಳಾಗಿದ್ದಂತೆ ಹಲವು ಚಿತ್ರಗಳಲ್ಲಿ ಪ್ರಾಣಿ ಪ್ರಮುಖ ಪಾತ್ರ ವಹಿಸಿದ್ದುಂಟು. ಇತ್ತೀಚೆಗೆ ಅಂಥ ಪಾತ್ರಗಳ ಸೃಷ್ಟಿ ಹೆಚ್ಚಾಗಿದೆ. ಆದಾಗ್ಯೂ ಹೀಗೆ ಪ್ರಾಣಿಗಳನ್ನೇ ಪ್ರಮುಖ ಪಾತ್ರಗಳನ್ನಾಗಿಸುವುದೇಕೆ, ಅದರಿಂದಾಗುವ ಪ್ರಯೋಜನಗಳೇನು, ಸವಾಲುಗಳೇನು ಎಂಬಿತ್ಯಾದಿ ಅಂಶಗಳ ಬಗ್ಗೆ ಒಂದು ಕಿರುನೋಟ ಇಲ್ಲಿದೆ.

| ರವಿಕಾಂತ ಕುಂದಾಪುರ ಬೆಂಗಳೂರು

ಪೌರಾಣಿಕ-ಐತಿಹಾಸಿಕ ಕಥೆಗಳಿರುವ ಚಿತ್ರಗಳಲ್ಲಿ ಕಥೆಗೆ ಸಂಬಂಧಿಸಿದಂತೆ ಪ್ರಾಣಿಗಳ ಬಳಕೆ ಅನಿವಾರ್ಯ. ಏಕೆಂದರೆ ಅಲ್ಲಿ ಒಂದು ರಾಜ್ಯದ ಅಥವಾ ಪೌರಾಣಿಕ ಕಥೆ ಇರುತ್ತದೆ, ಅದರಲ್ಲಿ ಸೈನ್ಯ, ಯುದ್ಧ, ಗಜಪಡೆ, ಅಶ್ವಪಡೆ.. ಇತ್ಯಾದಿ ಇರುವುದರಿಂದ ಪ್ರಾಣಿಗಳನ್ನು ಚಿತ್ರದಲ್ಲಿ ತೋರಿಸುವುದು ಅನಿವಾರ್ಯ. ಆದರೆ ಈಗ ಪೌರಾಣಿಕ-ಐತಿಹಾಸಿಕವಲ್ಲದ ಚಿತ್ರಗಳಲ್ಲೂ ಪ್ರಾಣಿ ಪ್ರಮುಖ ಪಾತ್ರವಾಗಿರುವುದು ಅಧಿಕವಾಗಿದೆ. ಅದಕ್ಕೆ ತಾಜಾ ಉದಾಹರಣೆಗಳೆಂದರೆ ಕಿರಣ್​ರಾಜ್ ನಿರ್ದೇಶನದ ‘777 ಚಾರ್ಲಿ’, ಸುನಿ ನಿರ್ದೇಶನದ ‘ಬಜಾರ್’, ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ ‘ನಾನು ಮತ್ತು ಗುಂಡ’, ಮಹೇಶ್ ನಿರ್ದೇಶನದ ‘ಅಯೋಗ್ಯ’ ಸಿನಿಮಾ. ಈ ಚಿತ್ರಗಳಲ್ಲಿ ನಾಯಿ, ಪಾರಿವಾಳ, ಕುರಿಮರಿ ಪ್ರಮುಖ ಪಾತ್ರಗಳಾಗಿವೆ. ಹಾಗೆ ಪ್ರಾಣಿಗಳನ್ನೇ ಪಾತ್ರಧಾರಿಗಳನ್ನಾಗಿಸುವುದೇನೋ ಸುಲಭ. ಆದರೆ ಅವುಗಳಿಂದ ನಟನೆ ತೆಗೆಸುವುದು ಅಷ್ಟು ಸುಲಭವಲ್ಲ. ಇಂದಿನ ಡಿಜಿಟಲ್ ಕ್ರಾಂತಿಯಲ್ಲಿ ಯಾವುದೇ ಪ್ರಾಣಿಯನ್ನು ಅನಿಮೇಷನ್ ಮೂಲಕ ಸೃಷ್ಟಿಸಿಬೇಕಾದ ಅಭಿನಯ ಪಡೆಯಬಹುದು. ಹಾಗಿದ್ದರೂ ಕೆಲವು ಚಿತ್ರಗಳಿಗಾಗಿ ಪ್ರಾಣಿಗಳೇ ಅಗತ್ಯವಿರುವಂತೆ ಏಕೆ ಪಾತ್ರಗಳನ್ನು ‘ಅನಿಮಲೈಸೇಷನ್’ ಮಾಡಲಾಗುತ್ತಿದೆ ಎಂಬ ಕುತೂಹಲ ಸಹಜ.

ಪ್ರೇಕ್ಷಕರಿಗೆ ಆಕರ್ಷಣೆ

ಪ್ರಾಣಿಗಳಿದ್ದರೆ ಪ್ರೇಕ್ಷಕರಿಗೆ ವಿಶೇಷ ಆಕರ್ಷಣೆ ಇರುತ್ತದೆ. ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ. ಮಕ್ಕಳಿಗಾಗಿ ಒಂದಿಡೀ ಕುಟುಂಬ ಸಿನಿಮಾಗೆ ಬರುವಂತಾಗುತ್ತದೆ. ‘ನಾಯಿ ಇರುವ ಚಾರ್ಲಿಯ ಫಸ್ಟ್ ಲುಕ್ ಬಿಟ್ಟಾಗ ಅತ್ಯುತ್ತಮ ಸ್ಪಂದನೆ ಬಂದಿತ್ತು. ಅವರಲ್ಲಿ ಪ್ರಾಣಿಪ್ರಿಯರೇ ಹೆಚ್ಚಾಗಿದ್ದರು’ ಎಂಬುದು ಕಿರಣ್ ಅವರ ಲೆಕ್ಕಾಚಾರ. ಪ್ರಾಣಿಗಳ ಕುರಿತ ಕೌತುಕ, ಪ್ರೀತಿ ಕೂಡ ಪ್ರೇಕ್ಷಕರನ್ನು ಸೆಳೆಯುತ್ತದೆ. ಪ್ರಾಣಿಗಳಿರುವ ದೃಶ್ಯಗಳು ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ರಿಲೇಟ್ ಆಗುತ್ತದೆ. ಹಾಗಾಗಿ ಸ್ಟಾರ್ ಕಲಾವಿದರಿಲ್ಲದೆಯೂ ಪ್ರಾಣಿಗಳು ಜನರನ್ನು ಸೆಳೆಯಬಲ್ಲವು ಎನ್ನುತ್ತಾರೆ ಶ್ರೀನಿವಾಸ್ ಹಾಗೂ ಸುನಿ.

ಸಂಬಂಧದ ಮಹತ್ವ

‘777 ಚಾರ್ಲಿ’ ಚಿತ್ರದಲ್ಲಿ ನಾಯಿಯದ್ದೂ ಪ್ರಮುಖ ಪಾತ್ರ. ಸಾಕುಪ್ರಾಣಿಗಳೊಂದಿಗೆ ಅನೇಕರು ತುಂಬ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಅವು ಅನೇಕರ ಜೀವನದಲ್ಲಿ ಮಹತ್ವದ ಬದಲಾವಣೆ ತಂದಿವೆ. ಮನೆಯಲ್ಲಿ ನನ್ನ ಅಮ್ಮ ನಾಯಿ-ಹಸುಗಳನ್ನೂ ಮನುಷ್ಯರೆಂಬಂತೆ ಮಾತನಾಡಿಸುತ್ತಾರೆ. ಸಾಕುಪ್ರಾಣಿಗಳಿಂದಾಗಿಯೇ ಮನುಷ್ಯ ಖಿನ್ನತೆಯಿಂದ ಹೊರಬಂದ ಪ್ರಕರಣಗಳನ್ನು ಕೇಳಿದ್ದೇನೆ. ನಾಯಿ ಎಂದರೆ ಆಗದ ಖಿನ್ನ ವ್ಯಕ್ತಿಯೊಬ್ಬ ಬೀದಿನಾಯಿಯ ಒಡನಾಟದಿಂದಾಗಿ ಜೀವನ್ಮುಖಿಯಾದ ನೈಜ ಘಟನೆಯೊಂದರಿಂದ ಪ್ರೇರಿತವಾಗಿ ಹೆಣೆದ ಕಥೆಯೇ ‘777 ಚಾರ್ಲಿ’ ಎನ್ನುತ್ತಾರೆ ನಿರ್ದೇಶಕ ಕಿರಣ್ ರಾಜ್.

ಇತ್ತೀಚೆಗೆ ಸಾಕುಪ್ರಾಣಿಗಳ ಬ್ರೀಡಿಂಗ್, ಅವುಗಳಿಗೆ ಸಂಬಂಧಿಸಿದ ವಹಿವಾಟುಗಳು ವಿಸ್ತಾರವಾಗಿವೆ. ಏಕೆ ಹೀಗೆ ಎಂದು ಯೋಚಿಸಿದಾಗ ಈಗೀಗ ಮನುಷ್ಯರ ನಡುವೆ ಭಾವನಾತ್ಮಕ ಸಂಬಂಧ ಕ್ಷೀಣವಾಗಿರುವುದು ಗಮನಕ್ಕೆ ಬಂತು. ಮನುಷ್ಯರ ಮಧ್ಯೆ ಪರಸ್ಪರ ನಂಬಿಕೆ, ಭಾವುಕ ಸ್ಪಂದನೆಯ ಕೊರತೆ ಕಂಡುಬಂತು. ಇದಕ್ಕೆಲ್ಲ ಸಂಬಂಧದಲ್ಲಿನ ನಿರೀಕ್ಷೆಯೂ ಕಾರಣ. ಮತ್ತೊಂದೆಡೆ ಪ್ರಾಣಿಗಳು ಏನೂ ನಿರೀಕ್ಷಿಸುವುದಿಲ್ಲ. ಅವುಗಳಿಂದ ಅನೇಕರಿಗೆ ಅನ್​ಕಂಡಿಷನಲ್ ಲವ್ ಸಿಗುತ್ತದೆ. ಇನ್ನು ಪ್ರಾಣಿಗಳ ಮೇಲಿನ ಪ್ರೀತಿ ಮನುಷ್ಯನಲ್ಲಿ ಭಾರಿ ಬದಲಾವಣೆ ತರುತ್ತದೆ, ಸಂಬಂಧದ ಮಹತ್ವ ತಿಳಿಯಪಡಿಸುತ್ತದೆ ಎಂಬ ಅರಿವಿನ ಮೇಲೆ ರಚಿಸಿದ ಕಥೆಯೇ ‘ನಾನು ಮತ್ತು ಗುಂಡ’ ಎನ್ನುತ್ತಾರೆ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ.

‘ನನಗೆ ಚಿಕ್ಕಂದಿನಿಂದಲೂ ಪ್ರಾಣಿಗಳ ಬಗ್ಗೆ ಬಹಳ ಪ್ರೀತಿ. ಅವುಗಳ ಬಗ್ಗೆ ಕುತೂಹಲ ಹೆಚ್ಚು. ಹೀಗಿರುವಾಗ ಎಂ.ಎಲ್. ಪ್ರಸನ್ನ ಅವರ ಕಥೆ ಓದುತ್ತಿದ್ದಂತೆ ಅದರಲ್ಲಿನ ಪಾರಿವಾಳ ಕುರಿತ ಮಾಹಿತಿ ನನ್ನ ಕೌತುಕ ಹೆಚ್ಚಿಸಿತು. ಜಿಪಿಎಸ್, ಮ್ಯಾಪಿಂಗ್ ಕುರಿತ ಅನ್ವೇಷಣೆಗೆ ಪಾರಿವಾಳವೇ ಪ್ರೇರಣೆಯಂತೆ. ಅವು ಸ್ಥಳಗಳನ್ನು ಚೆನ್ನಾಗಿ ನೆನಪಿಟ್ಟುಕೊಂಡಿರುತ್ತವೆ, ಎಷ್ಟೇ ದೂರ ಸಾಗಿದರೂ ಮರಳಿ ಅಲ್ಲಿಗೇ ಬರುತ್ತವೆ ಎಂಬ ಕಾರಣಕ್ಕೆ ಪ್ರಾಣಿಪ್ರಿಯ ನನ್ನಲ್ಲಿನ ಕೌತುಕವನ್ನು ಪಾರಿವಾಳ ಹೆಚ್ಚಿಸಿತು. ಅದೇ ಹಿನ್ನೆಲೆಯಲ್ಲಿ ಪಾರಿವಾಳ ಹಾರಾಟ ಸ್ಪರ್ಧೆ ಕುರಿತು ‘ಬಜಾರ್’ ಸಿದ್ಧಗೊಳ್ಳುತ್ತಿದೆ’ ಎನ್ನುತ್ತಾರೆ ನಿರ್ದೇಶಕ ‘ಸಿಂಪಲ್’ ಸುನಿ. ಒಟ್ಟಿನಲ್ಲಿ ಮನುಷ್ಯ-ಪ್ರಾಣಿಯ ಬಾಂಧವ್ಯ, ಪ್ರಾಣಿಗಳ ಕುರಿತ ಮನುಷ್ಯನ ಕುತೂಹಲ, ಹೆಚ್ಚುತ್ತಿರುವ ಸಾಕುಪ್ರಾಣಿಗಳ ಕುರಿತ ವಹಿವಾಟು ಮುಂತಾದವೇ ಚಿತ್ರಗಳಲ್ಲಿ ಪ್ರಾಣಿಗಳು ಪ್ರಮುಖ ಪಾತ್ರಗಳಾಗಲು ಕಾರಣ ಎಂಬುದು ನಿರ್ದೇಶಕರ ಅಭಿಪ್ರಾಯ.

ಸಹನೆಯೇ ದೊಡ್ಡ ಸವಾಲು

ಪ್ರಾಣಿಗಳನ್ನೇ ಪಾತ್ರಗಳನ್ನಾಗಿಸುವಲ್ಲಿ ದೊಡ್ಡ ಸವಾಲು ಎಂದರೆ ಸಮಯ ಹಾಗೂ ತಾಳ್ಮೆ. ಚಿತ್ರದ ನಿರ್ದೇಶಕ, ಪ್ರಾಣಿಯೊಂದಿಗೆ ಒಡನಾಡುವ ಕಲಾವಿದ ಹಾಗೂ ಪ್ರಾಣಿಯ ತರಬೇತುದಾರರಲ್ಲಿ ಅಪಾರ ಸಹನೆ ಅಗತ್ಯ. ಕಲಾವಿದರಿಗೆ ಹೇಳಿದಂತೆ ನಾವು ಪ್ರಾಣಿಗಳಿಗೆ ಹೇಳಿ ಸುಲಭದಲ್ಲಿ ನಟನೆ ಪಡೆಯಲು ಸಾಧ್ಯವಿಲ್ಲ. ನಮಗೇನು ಬೇಕು ಎಂಬುದನ್ನು ತರಬೇತುದಾರರಿಗೆ ಹೇಳಬೇಕು. ಅದನ್ನು ಅವರು ಗ್ರಹಿಸಿ, ಪ್ರಾಣಿಗೆ ತಿಳಿಸಿ ಅಂಥ ಚಲನೆ-ಭಂಗಿ ಬರುವಂತೆ ಮಾಡಬೇಕು. ಅಷ್ಟಾಗಿಯೂ ನಮಗೆ ಬೇಕಾದ ನಟನೆ ಸಿಗುವವರೆಗೆ ಕಾಯಬೇಕು, ಅಗತ್ಯಕ್ಕಿಂತ ಹೆಚ್ಚು ಸಮಯ ಕಳೆಯಲು ಸಿದ್ಧರಿರಬೇಕು ಎಂಬುದು ಮೂವರೂ ನಿರ್ದೇಶಕರ ಅಭಿಪ್ರಾಯ.

ಇನ್ನು, ಯಾವುದೇ ಪ್ರಾಣಿಯನ್ನು ಸಿನಿಮಾಗೆ ಬಳಸಿಕೊಳ್ಳುವ ಮೊದಲು ಸಂಬಂಧಿತ ಇಲಾಖೆಯಿಂದ ಅನುಮತಿ ಪಡೆಯಬೇಕು. ಪ್ರಾಣಿಯನ್ನು ಬಳಸಿಕೊಳ್ಳಬೇಕಾದ ಅಗತ್ಯ, ಚಿತ್ರದ ಕಥೆ ಹೇಳುವ ಜತೆಗೆ ಪ್ರಾಣಿಗೆ ಹಿಂಸೆ ಮಾಡುವುದಿಲ್ಲ ಎಂಬುದನ್ನು ಅವರಿಗೆ ಖಚಿತಪಡಿಸಬೇಕು. ಅಲ್ಲದೆ ಅಲ್ಲಿಂದ ಪ್ರತಿನಿಧಿಯೊಬ್ಬರು ಚಿತ್ರೀಕರಣ ಸ್ಥಳದಲ್ಲಿ ಹಾಜರಿರುತ್ತಾರೆ, ಮಾತ್ರವಲ್ಲ ಪ್ರಾಣಿಗಳ ಅಭಿನಯದ ದೃಶ್ಯಗಳ ಚಿತ್ರೀಕರಣದ ಭಾಗವನ್ನು ಪ್ರತ್ಯೇಕವಾಗಿ ಚಿತ್ರೀಕರಿಸಿಟ್ಟುಕೊಳ್ಳಬೇಕು. ಏಕೆಂದರೆ ಪ್ರೇಕ್ಷಕರಲ್ಲಿ ಯಾರಾದರೂ ಆಕ್ಷೇಪಿಸಿದರೆ ಆ ವಿಡಿಯೋ ಮೂಲಕ ಮನವರಿಕೆ ಮಾಡಬೇಕಾಗುತ್ತದೆ ಎನ್ನುತ್ತಾರೆ ಅವರು.

‘ನಾಯಿಯನ್ನು ಬಳಸಿಕೊಳ್ಳುವಾಗ ಪ್ರತಿ ಅರ್ಧಗಂಟೆಗೊಮ್ಮೆ ಮುಕ್ಕಾಲು ಗಂಟೆ ವಿರಾಮ ನೀಡಬೇಕಾಗುತ್ತದೆ. ಇನ್ನು ಆಹಾರಕ್ಕೆ ಹಪಾಹಪಿ ಇರುವ ನಾಯಿಯನ್ನು ಮಾತ್ರ ಉತ್ತಮ ರೀತಿಯಲ್ಲಿ ತರಬೇತುಗೊಳಿಸಲು ಸಾಧ್ಯ. ಅಂಥ ನಾಯಿಯನ್ನು ಆಯ್ಕೆ ಮಾಡಿಕೊಳ್ಳುವುದೂ ಸವಾಲಿನ ಕೆಲಸ’ಎನ್ನುತ್ತಾರೆ ಕಿರಣ್​ರಾಜ್. ‘ವಾತಾವರಣ ಅನುಕೂಲಕರವಾಗಿರಬೇಕಾದ್ದು ಅನಿವಾರ್ಯ. ಚಿತ್ರೀಕರಣ ವೇಳೆ ಲೈಟ್ ಬಳಸಿದರೆ ನಾಯಿ ಸಹಕರಿಸುವುದಿಲ್ಲ. ಹೊರಾಂಗಣದಲ್ಲಿ ತುಂಬ ಜನಜಂಗುಳಿ, ಬೇರೆ ನಾಯಿಗಳ ಬೊಗಳುವಿಕೆ ಇದ್ದರೂ ಕಷ್ಟ’ ಎನ್ನುತ್ತಾರೆ ಅವರು.

‘ಪಾರಿವಾಳ ಬಳಸುವಾಗಲೂ ಅಷ್ಟೇ. ತುಂಬ ಬಿಸಿಲಿನ ವಾತಾವರಣದಲ್ಲಿ ಅದನ್ನು ಶೂಟಿಂಗ್​ಗೆ ಬಳಸಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಸಾಧ್ಯವಾದಷ್ಟು ಬೆಳಗ್ಗೆ ಹಾಗೂ ಸಂಜೆಯ ಹೊತ್ತೇ ಶೂಟಿಂಗ್ ಮಾಡಬೇಕು‘ ಎಂಬುದು ಸುನಿ ಅಭಿಪ್ರಾಯ.

Leave a Reply

Your email address will not be published. Required fields are marked *

Back To Top