More

  ಬ್ರಾಂಡೆಡ್ ಎಣ್ಣೆಯೂ ಕಲಬೆರಕೆಯೇ?

  ಚಿಕ್ಕಮಗಳೂರು: ಅಡುಗೆಗೆ ಬಳಸುವ ಶುದ್ಧ ಎಣ್ಣೆ ಉತ್ಪಾದಿಸಿ ಗ್ರಾಹಕರಿಗೆ ನೇರವಾಗಿ ವಿತರಿಸುವ ವಿನೂತನ ಯೋಜನೆಗೆ ರೈತರೇ ಸಹಕಾರ ತತ್ವದಡಿ ಮುಂದಾಗಿದ್ದಾರೆ.

  ಬ್ರಾಂಡೆಡ್ ಕಂಪನಿಗಳು ಆರೋಗ್ಯಕ್ಕೆ ಧಕ್ಕೆ ಉಂಟು ಮಾಡುವ ಕಲಬೆರಕೆ ಎಣ್ಣೆ ಉತ್ಪಾದಿಸಿ ಮಾರಾಟ ಮಾಡುತ್ತಿರುವುದರಿಂದ ಶುದ್ಧ ಎಣ್ಣೆ ಗ್ರಾಹಕರಿಗೆ ನೀಡಲು ರೈತ ಸಮುದಾಯ ಮುಂದಾಗಿದೆ ಎಂದು ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಬಿ.ಸಿ.ಜಯಪ್ರಸಾದ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

  ಹಲವು ಕಂಪನಿಗಳು ಲಾಭದಾಸೆಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಅಡುಗೆಗೆ ಬಳಸುವ ಎಣ್ಣೆಯಲ್ಲಿ ಕಲಬೆರಕೆ ಮಾಡುತ್ತಿವೆ ಎಂಬುದರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಅಡುಗೆ ಎಣ್ಣೆಗೆ ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಉಳಿದ ಅನುಪಯುಕ್ತ ಬಿಳಿ ಎಣ್ಣೆ ಕಲಬೆರಕೆ ಮಾಡುತ್ತಾರೆ. ಇದರಿಂದ ಜನರು ಹೃದಯ ಸಮಸ್ಯೆ, ಕ್ಯಾನ್ಸರ್ ಮತ್ತಿತರ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಹೇಳಿದರು.

  ಒಂದು ಲೀ. ಅಡುಗೆ ಎಣ್ಣೆ ತಯಾರಿಸಲು ಕನಿಷ್ಠ ಮೂರು ಕೆ.ಜಿ. ಶೇಂಗಾ ಬೀಜ ಬೇಕಾಗುತ್ತದೆ. ಇದಕ್ಕೆ ಕನಿಷ್ಠ 240 ರೂ. ವೆಚ್ಚವಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಕಂಪನಿಗಳು ಒಂದು ಲೀ. ಶೇಂಗಾ ಎಣ್ಣೆಯನ್ನು 90-100 ರೂ.ಗೆ ಮಾರಾಟ ಮಾಡುತ್ತಿವೆ. ಕಲಬೆರಕೆ ಮಾಡಿ ಜನರ ಆರೋಗ್ಯ ಹಾಳು ಮಾಡುತ್ತಿರುವ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದರು.

  ತಾಲೂಕಿನ ಲಕ್ಯಾ ಹೋಬಳಿ ಬೆಳವಾಡಿಯ ಶ್ರೀ ಉದ್ಭವ ಗಣಪತಿ ಸುಸ್ಥಿರ ಕೃಷಿಕರ ಸಂಘವು, ಸಮೀಪದ ಕೆ.ಬಿ.ಹಾಳ್ ಹ್ಯಾಂಡ್​ಪೋಸ್ಟ್​ನಲ್ಲಿ ಆಧುನಿಕ ಮಾದರಿಯ ಎಣ್ಣೆ ಗಾಣ ಸ್ಥಾಪಿಸಿದೆ. ಇದರ ಉದ್ದೇಶ ರೈತರು ಬೆಳೆಯುವ ಎಣ್ಣೆ ಬೀಜಗಳಿಗೆ ಉತ್ತಮ ಧಾರಣೆ ನೀಡುವುದು ಹಾಗೂ ಗ್ರಾಹಕರಿಗೆ ಶುದ್ಧ ಎಣ್ಣೆ ಮಾರಾಟ ಮಾಡುವುದಾಗಿದೆ. ಜತೆಗೆ ಸ್ಥಳೀಯ ರೈತರ ಮಕ್ಕಳಿಗೆ ಉದ್ಯೋಗ ಸಹ ದೊರೆಯಲಿದೆ ಎಂದರು.

  ಲಕ್ಯಾ ಹೋಬಳಿ ಬೆಳವಾಡಿ ಸುತ್ತಮುತ್ತ ಪ್ರದೇಶದಲ್ಲಿ ಮಳೆ ಕೊರತೆಯಿಂದ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಎಣ್ಣೆಗಾಣ ಸ್ಥಾಪನೆ ಮಾಡಿದ್ದರಿಂದ ಸೂರ್ಯಕಾಂತಿ, ಶೇಂಗಾ ಬೆಳೆಯಲು ಪ್ರೋತ್ಸಾಹ ನೀಡಲಾಗುವುದು. ಮಾರುಕಟ್ಟೆಗಿಂತ ಉತ್ತಮ ಧಾರಣೆ ರೈತರಿಗೆ ಇಲ್ಲಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

  ಕಲಬೆರಕೆ ಬ್ರಾಂಡೆಡ್ ಎಣ್ಣೆಗಿಂತ ಗಾಣದ ಎಣ್ಣೆ ಸ್ವಲ್ಪ ದರ ತುಟ್ಟಿಯಾಗಬಹುದು. ಆದರೆ ಆರೋಗ್ಯಕ್ಕೆ ಮಾರಕವಾದದ್ದನ್ನು ಉಚಿತವಾಗಿ ಕೊಟ್ಟರೂ ಬಳಸಬಾರದು. ಇಲ್ಲಿ ರೈತರೇ ತಾವು ಬೆಳೆದ ಎಣ್ಣೆ ಬೀಜ ತಂದು ಎಣ್ಣೆ ಮಾಡಿಸಿಕೊಂಡು ಹೋಗಬಹುದು. ಗ್ರಾಹಕರಿಗೂ ನೇರವಾಗಿ ಸಂಘದಿಂದ ಸ್ಥಳೀಯವಾಗಿ ಹಾಗೂ ಸಮೀಪದ ಚಿಕ್ಕಮಗಳೂರು, ಕಡೂರು ಪಟ್ಟಣದಲ್ಲಿ ಮಾರಾಟ ಮಳಿಗೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

  ಶ್ರೀ ಉದ್ಭವ ಗಣಪತಿ ಸುಸ್ಥಿರ ಕೃಷಿಕರ ಸಂಘದ ಅಧ್ಯಕ್ಷ ಎನ್.ಎಸ್. ಸಿದ್ದಲಿಂಗೇಗೌಡ ಮಾತನಾಡಿ, ನಮ್ಮ ಸಂಘದಲ್ಲಿ 2100 ರೈತ ಸದಸ್ಯರಿದ್ದಾರೆ. ಸಂಘವೇ ಕಂಪನಿಗಳಿಂದ ಗುಣಮಟ್ಟದ ಬೀಜವನ್ನು ರೈತರಿಗೆ ನೇರವಾಗಿ ಕಡಿಮೆ ದರದಲ್ಲಿ ಪ್ರತಿ ವರ್ಷ ಮಾರಾಟ ಮಾಡುತ್ತಿದೆ ಎಂದರು.

  ಜ.4ರಂದು ಗಾಣಕ್ಕೆ ಚಾಲನೆ: ಎಣ್ಣೆ ಗಾಣ ಹಾಗೂ ನೂತನ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಜ.4ರಂದು ಮಧ್ಯಾಹ್ನ 3ಕ್ಕೆ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ಎನ್.ಎಸ್.ಸಿದ್ದಲಿಂಗೇಗೌಡ ಅಧ್ಯಕ್ಷತೆ ವಹಿಸುವರು. ಉಪ ಸಭಾಪತಿ ಎಸ್.ಎಲ್.ಧಮೇಗೌಡ, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಪಂ ಸದಸ್ಯ ರವೀಂದ್ರ ಬೆಳವಾಡಿ ಭಾಗವಹಿಸುವರು. ಸುಸ್ಥಿರ ಕೃಷಿಕರ ಸಂಘದ ವ್ಯವಸ್ಥಾಪಕ ನಾರಾಯಣ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts