ಅಥಣಿ ಬಳಿ ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ

ಕೊಕಟನೂರ: ಮುಂಬೈಯಿಂದ ಬೆಂಗಳೂರಿಗೆ ಹೊರಟಿದ್ದ ಎಸ್.ಆರ್. ಲಾರಿ ಸರ್ವಿಸ್ ಏಜೆನ್ಸಿ ಕಂಪನಿಗೆ ಸೇರಿದ ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್‌ವೊಂದು ಸೋಮವಾರ ಮಧ್ಯರಾತ್ರಿ ಅಥಣಿ ತಾಲೂಕಿನ ಹಲ್ಯಾಳದ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಪಲ್ಟಿಯಾಗಿ ಒಂಭತ್ತು ಗಂಟೆ ಸಂಚಾರ ಅಸ್ತವ್ಯಸ್ತಗೊಂಡಿದೆ.

29 ಸಾವಿರ ಲೀಟರ್ ಪೆಟ್ರೋಲ್ ಸಾಮರ್ಥ್ಯದ ಟ್ಯಾಂಕರ್ ಪಲ್ಟಿಯಾಗಿ ಪೆಟ್ರೋಲ್ ಸೋರತೊಡಗಿದ್ದರಿಂದ ಮಂಗಳವಾರ ಬೆಳಗ್ಗೆವರೆಗೆ ಸಾರ್ವಜನಿಕರು ಕ್ಯಾನ್, ಬಕೆಟ್‌ನಲ್ಲಿ ಪೆಟ್ರೋಲ್ ತುಂಬಿಕೊಂಡು ಹೋಗುತ್ತಿದ್ದರು. ಕೆಲವರು ತಮ್ಮ ಬೈಕ್ ಟ್ಯಾಂಕ್ ತುಂಬಿಕೊಳ್ಳುತ್ತಿದ್ದರು. ಭಜಂತ್ರಿ ಬಡಾವಣೆಯ ಜನ ವಸತಿ ಪಕ್ಕದಲ್ಲಿಯೇ ಟ್ಯಾಂಕರ್ ಲಾರಿ ಪಲ್ಟಿ ಹೊಡೆದ ಪರಿಣಾಮ ಪೆಟ್ರೋಲ್ ಕೆಲ ಮನೆಗಳಿಗೆ ನುಗ್ಗಿದ ಪ್ರಸಂಗವೂ ನಡೆದಿದೆ. ಪೆಟ್ರೋಲ್ ಸೋರಿಕೆಯಾಗಿದ್ದರಿಂದ ಗ್ರಾಮಸ್ಥರಲ್ಲಿ ಆತಂಕದ ಛಾಯೆ ಮೂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಮುಂಜಾಗ್ರತೆ ಕ್ರಮವಾಗಿ ಹೆಸ್ಕಾಂನವರು ವಿದ್ಯುತ್ ಕಡಿತಗೊಳಿಸಿದರು. 4ರಿಂದ 5 ಸಾವಿರ ಲೀಟರ್ ಪೆಟ್ರೋಲ್ ಸೋರಿರಬಹುದು ಎಂದು ಅಂದಾಜಿಸಲಾಗಿದೆ.

ಸಂಚಾರ ಸುಗಮ ವಹಿಸಲು ಪೊಲೀಸರು ಸಾಕಷ್ಟು ಪರದಾಡಬೇಕಾಯಿತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಅಥಣಿ, ಬೆಳಗಾಂವ, ಗೋಕಾಕ ಬನಹಟ್ಟಿಯಿಂದ ಅಗ್ನಿಶಾಮಕ ಸಿಬ್ಬಂದಿ, ಮೂರು ಕ್ರೇನ್ ಬಳಸಿ ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಟ್ಯಾಂಕರ್ ಮೇಲೆತ್ತಲಾಯಿತು. ಬಳಿಕ ಭಜಂತ್ರಿ ಜನ ವಸತಿ ಪ್ರದೇಶದಲ್ಲಿ ಪೆಟ್ರೋಲ್ ಸೋರಿಕೆಯಾದ ಸ್ಥಳಗಳಲ್ಲಿ ಮಣ್ಣು ಸುರಿಯಲಾಯಿತು. ಚಾಲಕ ಪರಾರಿಯಾಗಿದ್ದು, ಎಸ್.ಆರ್.ಲಾರಿ ಸರ್ವಿಸ್ ಕಂಪನಿಯ ಸ್ಥಳೀಯ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿಯ ಅಗ್ನಿಶಾಮಕ ಪ್ರಾದೇಶಿಕ ವಲಯ ಅಧಿಕಾರಿ ಶ್ರೀಕಾಂತ, ಬೆಳಗಾವಿಯ ಶಿವಕುಮಾರ ಸ್ವಾಮಿ, ಚಿಕ್ಕೋಡಿ ಎಸಿ ರವಿ ಕರಲಿಂಗನವರ, ಅಥಣಿ ಸಿಪಿಐ ಎಚ್.ಶೇಖರಪ್ಪ, ಅಥಣಿ ಪಿಎಸ್‌ಐ ಯು.ಎಸ್.ಅವಟಿ, ಅಥಣಿ ತಹಸೀಲ್ದಾರ್ ಎಂ.ಎನ್.ಬಳಿಗಾರ, ಉಪತಹಸೀಲ್ದಾರ್ ರಾಜು ಬುರ್ಲಿ, ತಾಪಂ ಇಒ ರವಿ ಬಂಗಾರಪ್ಪನವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.