ದಾವಣಗೆರೆ- ಬೀರೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಚಾಲಕ ಸಾವು

ಬೀರೂರು: ದೋಗೆಹಳ್ಳಿ ಗ್ರಾಮದ ಬಳಿ ಶನಿವಾರ ಬೆಳಗ್ಗೆ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಾಸನ ಜಿಲ್ಲೆ ದಿಡಗ ಮೇಲ್ಲಹಳ್ಳಿ ಗ್ರಾಮದ ನಿಂಗರಾಜು (24) ಮೃತ ದುರ್ದೈವಿ. ದಾವಣಗೆರೆ- ಬೀರೂರು ರಾಜ್ಯ ಹೆದ್ದಾರಿಯಲ್ಲಿ ಅಜ್ಜಂಪುರ ಕಡೆಯಿಂದ ಬರುತ್ತಿದ್ದ ಹಾಸನದ ಕಿರಣ್ ಎಂಬುವರಿಗೆ ಸೇರಿದ ಪೆಟ್ರೋಲ್ ಟ್ಯಾಂಕರ್ ದೋಗೆಹಳ್ಳಿ ಗ್ರಾಮದ ಬಳಿ ಹೊಸದಾಗಿ ನಿರ್ಮಾಣ ಮಾಡಿರುವ ಸೇತುವೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಚಾಲಕ ಲಾರಿಯಡಿ ಸಿಲುಕಿ ಮೃತಪಟ್ಟಿದ್ದಾನೆ. ಟ್ಯಾಂಕರ್ ಖಾಲಿ ಆಗಿದ್ದ ಕಾರಣ ಭಾರೀ ಅನಾಹುತ ತಪ್ಪಿದೆ.

ಸೂಚನಾ ಫಲಕ ಅಳವಡಿಸಿ: ದಾವಣಗೆರೆ- ಬೀರೂರು ರಾಜ್ಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡು ಉತ್ತಮ ರಸ್ತೆಯಾಗಿದೆ. ರಸ್ತೆ ಉತ್ತಮವಾದ ಕಾರಣ ವಾಹನಗಳ ಸಂಚಾರ ಹೆಚ್ಚಿದ್ದು ಅತಿ ವೇಗದಲ್ಲಿ ಸಂಚರಿಸುತ್ತವೆ. ಚನ್ನಾಪುರ, ದೋಗೆಹಳ್ಳಿ, ಯರೇಹಳ್ಳಿ, ವೀರಾಪುರ ಸೋಮೇನಹಳ್ಳಿ ಮತ್ತಿತರ ಭಾಗಗಳ ಸುತ್ತಮುತ್ತ ಜನರು ಪ್ರತಿನಿತ್ಯ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ಇದೆ. ಲೋಕೋಪಯೋಗಿ ಇಲಾಖೆಯವರು ಇಲ್ಲಿ ಯಾವುದೆ ಸೂಚನಾ ಫಲಕ, ರಿಫ್ಲೆಕ್ಟರ್​ಗಳನ್ನು ಅಳವಡಿಸದ ಕಾರಣ ಪ್ರತಿನಿತ್ಯ ಇಲ್ಲಿ ಅಪಘಾತಗಳು ನಡೆಯುತ್ತಿರುತ್ತವೆ ಎನ್ನುತ್ತಾರೆ ಗ್ರಾಮದ ಶಂಕ್ರಪ್ಪ.