Tuesday, 13th November 2018  

Vijayavani

ಲೋಕ ಎಲೆಕ್ಷನ್​​ ಗೆಲುವಿಗೆ ಮೈತ್ರಿಕೂಟ ಪ್ಲ್ಯಾನ್-ಮುಂದಿನ ವರ್ಷ ಟಿಪ್ಪು ಜಯಂತಿಗೆ ಬ್ರೇಕ್​        ಪಂಚಭೂತಗಳಲ್ಲಿ ಅನಂತ ಲೀನ-ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ        ಮೊಳಗಿದ ಅನಂತ್ ಅಮರ್​ ರಹೇ ಉದ್ಘೋಷ- ಅಗಲಿದ ಕಮಲಾಧಿಪತಿಗೆ ಅಡ್ವಾಣಿ, ಶಾ ಅಂತಿಮ ನಮನ        ರೆಡ್ಡಿ ಕೇಸ್​ನಲ್ಲಿ ಸಿಸಿಬಿಗೆ ಕೋರ್ಟ್​ ತರಾಟೆ- ರೆಡ್ಡಿಯನ್ನ ಬಂಧಿಸಿದ್ದೇಕೆ ಎಂದು ಪ್ರಶ್ನೆ-ಆದೇಶ ನಾಳೆಗೆ ಕಾಯ್ದಿಟ್ಟ ನ್ಯಾಯಾಲಯ        ರಫೇಲ್ ಡೀಲ್​​ನಲ್ಲಿ ರಿಲಯನ್ಸ್ ಆಯ್ಕೆ ನಮ್ಮದು- ಡಸಾಲ್ಟ್ ಸಿಇಓ ಸ್ಪಷ್ಟನೆ- ಎರಿಕ್ ಮಾತು ಸುಳ್ಳೆಂದ ಕಾಂಗ್ರೆಸ್ ಮತ್ತೆ ಹಳೇರಾಗ.!        ಮಹಾಘಟಬಂಧನ್​ ವಿರುದ್ಧ ತಲೈವಾ ಘರ್ಜನೆ- ಮೋದಿ ಪರ ಡೈಲಾಗ್​​ಗೆ ರಜನಿ ಸಮರ್ಥನೆ-ಬಿಜೆಪಿ ಕಡೆ ವಾಲುತ್ತಾರಾ ತಲೈವಾ?       
Breaking News

ತೈಲ ಬೆಲೆ ಕಣ್ಣಾಮುಚ್ಚಾಲೆ

Monday, 11.06.2018, 3:02 AM       No Comments

ಕಳೆದ ಕೆಲವು ದಿನಗಳಿಂದ ಅಲ್ಪ ಪ್ರಮಾಣದಲ್ಲಿ ಇಳಿಯುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹಿಂದಿನ ವಾರ ಗರಿಷ್ಠ ಬೆಲೆ ದಾಖಲಿಸಿದ್ದವು. ಅಷ್ಟೇ ಅಲ್ಲ, 2013ರ ದಾಖಲೆಯನ್ನೂ ಮುರಿದು ಏರುಮುಖವಾಗಿಯೇ ಸಾಗಿದ್ದವು. ಇವುಗಳ ಬೆಲೆಗಳನ್ನು ನಿರ್ಧರಿಸುವ ಹಕ್ಕು ಕಂಪನಿಗಳ ಕೈಯಲ್ಲಿದೆ. ಕಳೆದ ವರ್ಷ ಜೂನ್ ಮಧ್ಯಭಾಗದಿಂದ ದಿನನಿತ್ಯ ಬೆಲೆ ಏರಿಸುವ ಮತ್ತು ಇಳಿಸುವ ಜವಾಬ್ದಾರಿಯನ್ನು ಚಿಲ್ಲರೆ ತೈಲ ಮಾರಾಟ ಮಾಡುವ ಕಂಪನಿಗಳು ಹೊಂದಿವೆ. ಹಾಗಿದ್ದರೆ ಕಣ್ಣಾಮುಚ್ಚಾಲೆ ಆಡುತ್ತಿರುವ ತೈಲ ಬೆಲೆಗೆ ಕಾರಣವೇನು?

| ಶಾ. ರಂಗನಾಥ್

ಕೆಲವು ದಿನಗಳ ಹಿಂದೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗರಿಷ್ಠ ಮಟ್ಟ ತಲುಪಿ ಜನಸಾಮಾನ್ಯರ ಅಸಮಾಧಾನಕ್ಕೆ ಕಾರಣವಾಯ್ತು. ಆದರೆ, ತೈಲ ಬೆಲೆ ಏರಿಕೆ ಅಥವಾ ಇಳಿಕೆ ಸರ್ಕಾರದ ಕೈಲಿಲ್ಲ. ದಿನನಿತ್ಯದ ಏರಿಳಿತದಲ್ಲಿ ಅದು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಈಗ ತೈಲ ಬೆಲೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿರುವ ಹಿಂದೆ ಅನೇಕ ಕಾರಣಗಳಿವೆ. ರಷ್ಯಾ ಮತ್ತು ಇತರ ತೈಲ ಉತ್ಪಾದಕ ದೇಶಗಳು (ಒಪೆಕ್) ತಮ್ಮ ತೈಲ ಉತ್ಪಾದನೆಯನ್ನು ಕಡಿತಗೊಳಿಸಿವೆ. ಕಚ್ಚಾ ತೈಲ ದರದ ಇಳಿಮುಖವನ್ನು ತಡೆಯಲೆಂದೇ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ತೀವ್ರ ಇಳಿಮುಖವಾಗುತ್ತಿರುವ ತೈಲ ದರ ಹೆಚ್ಚಾಗುತ್ತಾ ಬಂದಿದೆ.

ಭಾರತವು ತನ್ನ ದೇಶದ ತೈಲ ಅವಶ್ಯಕತೆಯ ಶೇ.80ರಷ್ಟು ತೈಲವನ್ನು ಒಪೆಕ್ ರಾಷ್ಟ್ರಗಳಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಈ ಆಮದಿನ ವೆಚ್ಚವನ್ನು ಅಮೆರಿಕನ್ ಡಾಲರ್ ಮೂಲಕವೇ ಪಾವತಿ ಮಾಡಬೇಕಿರುತ್ತದೆ. ಅಲ್ಲದೆ, ಈಗ ರೂಪಾಯಿಯ ಮೌಲ್ಯ ಅಮೆರಿಕನ್ ಡಾಲರ್​ಗೆ ಹೋಲಿಸಿದಾಗ ಸ್ವಲ್ಪ ಮಟ್ಟಿನ ಕುಸಿತ ಕಂಡುಬಂದಿದೆ. ಹಾಗಾಗಿ, ನಮ್ಮ ತೈಲದ ಆಮದು ಅಷ್ಟೇ ಇದ್ದರೂ ಖರೀದಿಸಲು ಕೊಡಬೇಕಾಗಿ ಬಂದಿದೆ. ಇದೂ ಸಹ ತೈಲ ಬೆಲೆ ಹೆಚ್ಚಳಕ್ಕೆ ಒಂದು ಕಾರಣ.

ಬೆಲೆ ನಿರ್ಧಾರ ಹೇಗೆ? : ಒಂದು ಬ್ಯಾರೆಲ್ ಕಚ್ಚಾತೈಲ 160 ಲೀಟರ್. ಈ ಮೊದಲು 160 ಲೀಟರ್ ಕಚ್ಚಾತೈಲದ ದರವನ್ನು ಡಾಲರ್​ಗೆ ಲೆಕ್ಕಹಾಕಲಾಗುವುದು. ಆನಂತರ ಈ ಡಾಲರ್ ಮೊತ್ತವನ್ನು ರೂಪಾಯಿಗೆ ಪರಿವರ್ತನೆ ಮಾಡಲಾಗುತ್ತದೆ. ಈ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ. ಕಚ್ಚಾತೈಲವು ಪೆಟ್ರೋಲ್, ಡೀಸೆಲ್ ಮುಂತಾದ ಉಪವಸ್ತುಗಳಾಗಿ ಪರಿವರ್ತನೆ ಆಗುವುದಕ್ಕೆ ಮುಂಚೆ ಸಾಗಾಣಿಕೆ ವೆಚ್ಚ, ತೈಲ ಶುದ್ಧೀಕರಣದ ವೆಚ್ಚ, ಶುದ್ಧೀಕರಣ ಘಟಕಗಳ ಲಾಭ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ಮತ್ತು ಸುಂಕಗಳು ಸಹ ತೈಲದ ಬೆಲೆಗೆ ಸೇರುತ್ತವೆ. ಆನಂತರ, ಈ ಶುದ್ಧೀಕರಿಸಿದ ತೈಲಗಳನ್ನು ಮಾರಾಟ ಮಾಡುವ ಕಂಪನಿಗಳು ತಮ್ಮ ಲಾಭ, ವ್ಯಾಪಾರಿಗಳ ಕಮಿಷನ್ ಮತ್ತು ಇತರೆ ವೆಚ್ಚಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿರ್ಧರಿಸುತ್ತವೆ.

ನಮ್ಮ ದೇಶದ ಪ್ರತಿದಿನದ ಡೀಸೆಲ್ ಬೇಡಿಕೆ ಸುಮಾರು 14 ಲಕ್ಷ ಬ್ಯಾರಲ್. ಪೆಟ್ರೋಲ್ ಬೇಡಿಕೆ 12 ಲಕ್ಷ ಬ್ಯಾರೆಲ್. ಹಾಗಾಗಿ, ತೈಲ ಆಮದು ಮಾಡಿಕೊಳ್ಳುವ ಒಟ್ಟು ಬೇಡಿಕೆಯ ಪ್ರಮಾಣವನ್ನು ಕಡಿಮೆ ಮಾಡಲು ಅಸಾಧ್ಯ.

ಜನ ಸಾಮಾನ್ಯರು ಈ ಬೆಲೆ ಏರಿಕೆಯ ಬಗ್ಗೆ ಎಷ್ಟೇ ಪ್ರತಿಭಟಿಸಿದರೂ, ತೈಲ ಬೇಡಿಕೆ ಪ್ರತಿದಿನ ಹೆಚ್ಚಾಗುತ್ತಿದೆ. ಇದರಿಂದ ಸರ್ಕಾರದ ಆದಾಯವೂ ಹೆಚ್ಚಾಗುತ್ತಿದೆ. ಡೀಸೆಲ್ ಬೆಲೆ ಏರಿಕೆ ಸಾಗಾಣಿಕೆ ವಾಹನಗಳ ವೆಚ್ಚವನ್ನು ಹೆಚ್ಚು ಮಾಡುತ್ತದೆ, ಇದರಿಂದ ಎಲ್ಲ ಪದಾರ್ಥಗಳ ಬೆಲೆ ಸಹ ಏರಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ಡೀಸೆಲ್ ಬೆಲೆಯನ್ನಾದರೂ ಕಡಿಮೆ ಮಾಡುವ ಅವಶ್ಯಕತೆ ಇದ್ದೇ ಇದೆ.

ಕೊರತೆ ಬಜೆಟ್ ಸಹ ಕಾರಣ: ಬೆಲೆ ಏರಿಕೆಗೆ ಪರೋಕ್ಷವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೊರತೆ ಬಜೆಟ್ (ಡೆಫಿಸಿಟ್ ಬಜೆಟ್) ಸಹ ಆಗಿರುತ್ತದೆ. ಎಲ್ಲ ಸರ್ಕಾರಗಳು ತಮ್ಮ ಅವಶ್ಯಕತೆಗೆ ತಕ್ಕಂತೆ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುತ್ತವೆ. ಇದನ್ನೇ ನಾವು ಕೊರತೆ ಬಜೆಟ್ ಎಂದು ಕರೆಯುತ್ತೇವೆ.

ಈ ರೀತಿಯ ವೆಚ್ಚಗಳಲ್ಲಿ ಅನುತ್ಪಾದಕ ವೆಚ್ಚಗಳು ಹೆಚ್ಚಾಗಿರುತ್ತವೆ (ವೆಲ್​ಫೇರ್ ಸ್ಕೀಮ್್ಸ). ದೇಶದ ಅಭಿವೃದ್ಧಿಗೆ ಬೇಕಾಗುವ ಎಲ್ಲ ಹಣಕಾಸಿನ ವ್ಯವಸ್ಥೆ ಸಹ ಇದೇ ಬಜೆಟ್​ನಲ್ಲಿ ಲೆಕ್ಕ ಹಾಕಲ್ಪಟ್ಟಿರುತ್ತದೆ. ಸರ್ಕಾರ ಯಾವುದಾದರೂ ಹೊಸ ತೆರಿಗೆ, ವರ್ಲ್ಡ್ ಬ್ಯಾಂಕ್, ರಿಸರ್ವ್ ಬ್ಯಾಂಕ್ ಇಂಡಿಯಾ ಅವರಿಂದ ಸಾಲ ಪಡೆದು ಈ ಕೊರತೆಯನ್ನು ನೀಗಿಸಿಕೊಳ್ಳುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಆದಾಯದ ಶೇ.30ರಿಂದ ಶೇ.40 ಮೊತ್ತವನ್ನು ತೈಲಗಳ ಮೇಲಿನ ತೆರಿಗೆಯಿಂದಲೇ ಪಡೆಯುತ್ತವೆ. ಹಾಗಾಗಿ, ಈಗಾಗಲೇ ಕೊರತೆ ಬಜೆಟ್ ಇರುವ ಕಾರಣ, ಈ ತೈಲದ ಮೂಲಕ ಬರುವ ಆದಾಯವನ್ನು ಕಡಿಮೆ ಮಾಡುವುದು ಬಹಳ ಕಠಿಣ.

ಸರ್ಕಾರದ ಕ್ರಮ: ತೈಲ ಬೆಲೆಗಳ ಹೆಚ್ಚಳ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ತೀವ್ರ ಪರಿಣಾಮ ಬೀರುವುದು ಖಂಡಿತ. ಭಾರತ ಸರ್ಕಾರ ತೈಲ ಉತ್ಪಾದನೆ ರಾಷ್ಟ್ರಗಳೊಂದಿಗೆ ದೀರ್ಘಕಾಲದ ಒಪ್ಪಂದ ಮಾಡಿಕೊಂಡು, ತೈಲ ಬೆಲೆಗಳ ಏರಿಕೆಯನ್ನು ನಿಯಂತ್ರಿಸುತ್ತಿದೆ. ಇದರಿಂದ ಹಲವು ವರ್ಷ ಕಚ್ಚಾ ತೈಲಗಳ ಬೆಲೆ ಏರಿಕೆ ಇಲ್ಲದಿರುವುದರಿಂದ ಚಿಲ್ಲರೆ ಬೆಲೆಯನ್ನು ನಿಯಂತ್ರಿಸಬಹುದು. ಈ ರೀತಿ ಉಳಿತಾಯದ ಹಣವನ್ನು ಸರ್ಕಾರಗಳು, ರಾಜ್ಯ ಮತ್ತು ರಾಷ್ಟ್ರದ ದೀರ್ಘಕಾಲದ ಯೋಜನೆಗಳಿಗೆ ಉಪಯೋಗಿಸಬಹುದು. ಯಾವುದೇ ರೀತಿಯ ತೆರಿಗೆ ಇಳಿಕೆ ಬಜೆಟ್ ಕೊರತೆ ಹೆಚ್ಚಾಗಲು ಕಾರಣವಾಗುತ್ತದೆ. ಆರ್​ಬಿಐ ಮೂಲಕ ಸಾಲ ಪಡೆದಾಗ, ರಿಸರ್ವ್ ಬ್ಯಾಂಕ್ ಹೆಚ್ಚು ನೋಟುಗಳನ್ನು ಮುದ್ರಿಸಬೇಕಾಗುತ್ತದೆ. ಇದರಿಂದ ಹಣದ ಉಬ್ಬರ ಉಂಟಾಗುತ್ತದೆ. ಇದನ್ನು ನಿಯಂತ್ರಣ ಮಾಡಲು ಸಾಲದ ಮೇಲಿನ ಬಡ್ಡಿ ಜಾಸ್ತಿ ಮಾಡಬೇಕಾಗುತ್ತದೆ. ಆಗ ದೇಶದ ಪ್ರಗತಿ ಮತ್ತು ಜಿಡಿಪಿ ಮೇಲೆ ನೇರ ಪರಿಣಾಮ ಉಂಟಾಗುತ್ತದೆ. ಬಜೆಟ್ ಕೊರತೆಗಳನ್ನು ಯಾವುದೇ ರೀತಿಯಲ್ಲಿ (ತೆರಿಗೆಗಳ ಹೊರತು) ನೀಗಿಸಿಕೊಳ್ಳುವ ಪ್ರಯತ್ನ ಋಣಾತ್ಮಕ ಪರಿಣಾಮ ಉಂಟು ಮಾಡುತ್ತವೆ.

ಜಿಡಿಪಿ ಪ್ರಗತಿ: ತೆರಿಗೆ ಕಡಿತ ಮತ್ತು ಬಜೆಟ್ ಕೊರತೆ ಎರಡು ಅಲಗಿನ ಕತ್ತಿಯ ಮೇಲೆ ಸವಾರಿ ಮಾಡಿದಂತೆ. ಈಗ ಕೇಂದ್ರ ಸರ್ಕಾರವು ಪೆಟ್ರೋಲ್/ಡೀಸೆಲ್ ಬೆಲೆ ಏರಿಕೆಯಿಂದ ಬರುತ್ತಿರುವ ಆದಾಯವನ್ನು ಇರಾನ್ ದೇಶದ ಸಾಲದ ಬಾಕಿ 67 ಮಿಲಿಯನ್ ಡಾಲರ್ ತೀರಿಸಲು ಉಪಯೋಗವಾಗುತ್ತಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ. ಬಜೆಟ್ ಕೊರತೆಯ ಪ್ರಮಾಣ ಕಡಿಮೆ ಆಗಿರುವುದು, ದೇಶದ ಆರ್ಥಿಕ ಪ್ರಗತಿ ಜಿಡಿಪಿ ಶೇ.7.5 ದಾಟುತ್ತಿರುವುದು ಸಂತೋಷದ ಸಂಗತಿ.

ಅನ್ಯಮಾರ್ಗವಿಲ್ಲ: ಆಮದು ಮಾಡಿಕೊಳ್ಳುವ ತೈಲದ ವೆಚ್ಚ ಕಡಿಮೆ ಆದಂತೆ ಇವುಗಳ ಮೇಲೆ ತೆರಿಗೆ ಕಡಿಮೆ ಮಾಡಿ, ತೈಲ ಉತ್ಪನ್ನಗಳ ಬೆಲೆ ಕಡಿಮೆ ಮಾಡುವ ಪ್ರಯತ್ನವನ್ನು ಸರ್ಕಾರಗಳು ಮಾಡಬಹುದು. ಸಾರ್ವಜನಿಕರಿಗೆ ಈ ಎಲ್ಲ ವಿಷಯಗಳನ್ನು ಮನದಟ್ಟು ಮಾಡಿಸುವ ಹೊಣೆ ಸಹ ಸರ್ಕಾರದ್ದಾಗಿದೆ. ಈ ನಿಟ್ಟಿನಲ್ಲಿ ತೈಲ ಉತ್ಪನ್ನಗಳ ಜಿಎಸ್​ಟಿ ವ್ಯಾಪ್ತಿಗೆ ತರುವ ಯೋಜನೆ ಸಹ ಒಳ್ಳೆಯ ಫಲ ನೀಡುವ ಪ್ರಯತ್ನವೇ.

ಬಜೆಟ್ ಕೊರತೆ ಕಡಿಮೆ ಮಾಡುವುದು, ತೆರಿಗೆ ರಹಿತ ಆದಾಯಗಳ ಹೆಚ್ಚಳ, ಕೊರತೆ ನೀಗಿಸಲು ಸಾಲ ನಿಯಂತ್ರಣ, ಅನುತ್ಪಾದಕ ಮತ್ತು ಜನಪ್ರಿಯ ಕಾರ್ಯಕ್ರಮಗಳ ನಿಯಂತ್ರಣ, ಅನವಶ್ಯಕ ಸರ್ಕಾರಿ ವೆಚ್ಚ ಕಡಿತಗೊಳಿಸುವುದು ಮುಂತಾದವುಗಳಿಂದ ಬೆಲೆ ನಿಯಂತ್ರಣ ಹೆಚ್ಚು, ತೆರಿಗೆ ವಿಧಿಸಲು ಸಾಧ್ಯ ಎಂಬುದು ಪರಿಣಿತರ ಅಭಿಪ್ರಾಯ.

ಕೆಲವು ಕ್ರಮಗಳಿಂದ ತೈಲ ಉತ್ಪನ್ನಗಳ ಬೆಲೆಗಳ ನಿಯಂತ್ರಣ ಮತ್ತು ಕಡಿಮೆ ಮಾಡುವ ಪ್ರಯತ್ನ ಸಾಧ್ಯವಾಗಬಹುದು. ಅಲ್ಲಿಯವರೆಗೆ ನಮಗೆ ಈ ತೈಲಗಳ ಬೆಲೆ ಏರಿಳಿತವನ್ನು ಸಹಿಸದೆ ಅನ್ಯ ಮಾರ್ಗವಿಲ್ಲ.

ಸಮಸ್ಯೆ ಹೇಗೆ ಎದುರಿಸಬಹುದು?

# ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಮಿತಗೊಳಿಸಿ, ಈ ಮೂಲಕ ಆಮದು ವೆಚ್ಚ ಕಡಿಮೆ ಮಾಡಿ ದೇಶದ ಆರ್ಥಿಕ ವ್ಯವಸ್ಥೆ (ಕೊರತೆ ಬಜೆಟ್) ಉತ್ತಮಗೊಳ್ಳಲು ಅನುಕೂಲ ಮಾಡಿಕೊಡುವುದು.

# ಪರ್ಯಾಯ ಇಂಧನ ಶಕ್ತಿಗಳಾದ ಸೂರ್ಯಶಕ್ತಿ, ವಿದ್ಯುತ್ ಮುಂತಾದವುಗಳನ್ನು ಎಲ್ಲ ರಂಗಗಳಲ್ಲೂ ಹೆಚ್ಚು ಬಳಸಿ ತೈಲ ಬೇಡಿಕೆ ಕಡಿಮೆ ಮಾಡುವ ಪ್ರಯತ್ನವನ್ನು ಸರ್ಕಾರಗಳೂ ಮತ್ತು ಜನಸಾಮಾನ್ಯರೂ ಮಾಡುವುದು. ಇದರಿಂದ ತೈಲದ ಆಮದು ವೆಚ್ಚ ಕಡಿಮೆ ಮಾಡಬಹುದು.

# ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉತ್ತಮಪಡಿಸಿ, ಸಾಮಾನ್ಯ ಜನರು ತಮ್ಮ ವಾಹನಗಳನ್ನು ಕಡಿಮೆ ಉಪಯೋಗಿಸಲು ಸಹಾಯ ಮಾಡುವುದು. ಇದರಿಂದಲೂ ಸಹ ತೈಲ ಉತ್ಪನ್ನಗಳ ಬೇಡಿಕೆ ಕಡಿಮೆ ಮಾಡಬಹುದು.

(ನಿವೃತ್ತ ಹಿರಿಯ ಪ್ರಬಂಧಕರು, ಕೆನರಾ ಬ್ಯಾಂಕ್)

Leave a Reply

Your email address will not be published. Required fields are marked *

Back To Top