ಭಾರತ್​ ಬಂದ್​ ಬಿಸಿ ಪೆಟ್ರೋಲ್​-ಡೀಸೆಲ್​ ತೆರಿಗೆಯನ್ನು ಕಡಿತಗೊಳಿಸಿದ ರಾಜಸ್ಥಾನ

ಜೈಪುರ: ಇಂಧನ ದರ ಏರಿಕೆ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಭಾರತ್​ ಬಂದ್​ ಆಚರಿಸುತ್ತಿವೆ. ಆದರೆ, ರಾಜಸ್ಥಾನದ ಮುಖ್ಯಮಂತ್ರಿ ವಸುಂಧರ ರಾಜೆ ಅವರು ಭಾನುವಾರ ಪೆಟ್ರೋಲ್​ ಹಾಗೂ ಡೀಸೆಲ್​ ಮೇಲಿನ ಮೌಲ್ಯವರ್ಧಿತ ತೆರಿಗೆ(VAT)ಯನ್ನು ಕಡಿಮೆ ಮಾಡಿ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ಪೆಟ್ರೋಲ್​ ಹಾಗೂ ಡೀಸೆಲ್​ ಮೇಲಿನ ಶೇ. 4ರಷ್ಟು ತೆರಿಗೆಯನ್ನು ಕಡಿಮೆ ಮಾಡಿದ್ದು, ಇದರಿಂದ ಸರಾಸರಿ 2.50 ರೂ. ಅಷ್ಟು ದರ ಕಡಿಮೆ ಆಗಲಿದೆ ಎಂದು ವಸುಂಧರಾ ಅವರು ತಿಳಿಸಿದ್ದಾರೆ.

ತೆರಿಗೆ ಕಡಿತದಿಂದ ಹೆಚ್ಚುವರಿಯಾಗಿ 2,000 ಕೋಟಿ ರೂ. ಆರ್ಥಿಕ ಹೊರೆ ಸರ್ಕಾರದ ಮೇಲೆ ಬೀಳಲಿದೆ. ಆದರೂ, ನಾವು ತೆರಿಗೆ ಕಡಿತಗೊಳಿಸುವುದರ ಬಗ್ಗೆ ನಿರ್ಧಾರ ಮಾಡಿದ್ದೇವೆ. ಇದರಿಂದ ರಾಜ್ಯದ ಜನರಿಗೆ ಸ್ವಲವಾದರೂ ಸಹಕಾರಿಯಾಗಲಿದೆ ಎಂದು ಹೇಳಿದರು.

ಇದನ್ನು ಖಂಡಿಸಿರುವ ಕಾಂಗ್ರೆಸ್​ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಪ್ರತಿಭಟನೆಗೆ ಅಪಾರ ಬೆಂಬಲ ವ್ಯಕ್ತವಾಗಿರುವುದರಿಂದ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಏನಾದರೂ ಮಾಡಬೇಕೆಂಬ ಒತ್ತಡದಿಂದ ಹಾಗೂ ಹತಾಶೆಯಿಂದ ವಸುಂಧರಾ ಅವರು ತೆರಿಗೆಯನ್ನು ಕಡಿಮೆ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ರಾಜ್ಯ ಸರ್ಕಾರ ಪೆಟ್ರೋಲ್​ ಮತ್ತು ಡೀಸೆಲ್​ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದರೆ ಸಾಲದು ಎಲ್​ಪಿಜಿ ಸಿಲಿಂಡರ್​ ದರವನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *