ನಿಲ್ಲೆಂದರೂ ನಿಲ್ಲುತ್ತಿಲ್ಲ ಪೆಟ್ರೋಲ್​ ಬೆಲೆ; ಬೆಂಗಳೂರಿನಲ್ಲಿ ಇಂದು ತೈಲ ದರ ಏರಿದ್ದೆಷ್ಟು ಗೊತ್ತೆ?

ನವದೆಹಲಿ: ತೈಲ ದರದಲ್ಲಿ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ನಾಗರಿಕರಲ್ಲಿ ಮನೆ ಮಾಡಿದ್ದ ಅಸಹನೆಗೆ ಮಣಿದು ಕೇಂದ್ರ ಸರ್ಕಾರ ಸೆಸ್​ ಇಳಿಸಿತಾದರೂ, ದರ ಇಳಿಸಿಲು ಸುಧಾರಣಾ ಕ್ರಮಗಳನ್ನೂ ಕೈಗೊಳ್ಳುವಲ್ಲಿ ವಿಫಲವಾಗಿದೆ. ಹೀಗಾಗಿ ನಿತ್ಯದ ಅಗತ್ಯವೇ ಎಂಬಂತಾಗಿರುವ ಪೆಟ್ರೋಲ್​, ಡೀಸೆಲ್​ ಬೆಲೆ ನಿಲ್ಲೆಂದರೂ ನಿಲ್ಲದೇ ಏರುತ್ತಲೇ ಇದೆ. ಇಂದೂ ಕೂಡ ಹಲವು ಮೆಟ್ರೋಪಾಲಿಟನ್​ ನಗರಗಳಲ್ಲಿ ತೈಲ ದರ ಏರಿಕೆ ಕಂಡಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಲೀಟರ್​ ಪೆಟ್ರೋಲ್​ ದರ 82.72 ರೂ. ಗಳಾಗಿದ್ದು, 6 ಪೈಸೆ ಏರಿಕೆಯಾಗಿದೆ. ಲೀಟರ್​ ಡೀಸೆಲ್​ ಬೆಲೆ 75.38 ರೂ.ಗಳಾಗಿದ್ದು, 19 ಪೈಸೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್​ 88.18 ರೂ.ಗಳಾಗಿದ್ದು, 6 ಪೈಸೆ ಏರಿಕೆಯಾಗಿದೆ. ಇನ್ನು ಡೀಸೆಲ್​ ಬೆಲೆ 79.02 ರೂ.ಗಳಾಗಿದ್ದು, 20ಪೈಸೆ ಏರಿಕೆಯಾಗಿದೆ.

ಬೆಂಗಳೂರಿನಲ್ಲೂ ತೈಲ ಬೆಲೆ ಏರದೇ ಉಳಿದಿಲ್ಲ. ಇಂದು ಕೂಡ ರಾಜ್ಯ ರಾಜಧಾನಿಯಲ್ಲಿ ಲೀಟರ್​ ಪೆಟ್ರೋಲ್​ ಬೆಲೆ 83.31 ರೂ.ಗಳಾಗಿದ್ದು, 18 ಪೈಸೆ ಏರಿಕೆಯಾಗಿದೆ. ಡೀಸೆಲ್​ ಬೆಲೆ 75.58 ರೂ.ಗಳಾಗಿದ್ದು, 29 ಪೈಸೆ ಏರಿದೆ.

ಪೆಟ್ರೋಲ್​ -ಡೀಸೆಲ್​ನಲ್ಲಿ ಬೆಲೆಯಲ್ಲಿ ಆಗುತ್ತಿರುವ ನಿರಂತರ ಏರಿಕೆ ಹಿನ್ನೆಲೆಯಲ್ಲಿ ದೇಶಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ನಡುವೆ ಹಲವು ರಾಜ್ಯಗಳು ಪೆಟ್ರೋಲ್​, ಡಿಸೇಲ್​ ಮೇಲಿನ ತೆರಿಗೆ ಇಳಿಸಿದ್ದವು. ರಾಜ್ಯಸರ್ಕಾರಗಳೇ ತೆರಿಗೆ ಇಳಿಸುತ್ತಿದ್ದರೂ, ಕೇಂದ್ರ ಸರ್ಕಾರ ಯಾವ ಕ್ರಮಗಳನ್ನೂ ಕೈಗೊಳ್ಳದೇ ಇದ್ದ ಹಿನ್ನೆಲೆಯಲ್ಲಿ ಎನ್​ಡಿಎ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಅನಿವಾರ್ಯವಾಗಿ ಕೇಂದ್ರ ಸರ್ಕಾರ ತೈಲದ ಮೇಲಿನ ಸೆಸ್​ ಇಳಿಸಿತ್ತು. ಆದರೆ, ಸೆಸ್​ ಇಳಿಸಿದಾಗಿನಿಂದಲೂ ತೈಲ ಬೆಲೆ ಏರಿಕೆಯಾಗುತ್ತಲೇ ಇದೆ.

ರೂಪಾಯಿ ಅಪಮೌಲ್ಯ ಮತ್ತು ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆಯಿಂದಾಗಿ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಏರಿಕೆಯುಂಟಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಳ್ಳುತ್ತಲೇ ಇದೆ.