ಪೆಟ್ರೋಲ್, ಡೀಸೆಲ್ ಏರಿಕೆ ಪರ್ವ

ನವದೆಹಲಿ: ತೈಲ ದರ ಸತತ ನಾಲ್ಕನೇ ದಿನವೂ ಏರಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್​ಗೆ 48ರಿಂದ 60 ಪೈಸೆ ಹಾಗೂ ಡೀಸೆಲ್ ದರ 60ರಿಂದ 75 ಪೈಸೆ ಹೆಚ್ಚಳವಾಗಿದೆ. ಇದರಿಂದ ಕಳೆದ ನಾಲ್ಕು ದಿನಗಳಲ್ಲಿ ಸರಾಸರಿ ಪೆಟ್ರೋಲ್ ದರ ಪ್ರತಿ ಲೀಟರ್​ಗೆ 1.37 ರೂ. ಮತ್ತು ಡೀಸೆಲ್ ಬೆಲೆ  1.63 ರೂ. ಅಧಿಕವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್​ಗೆ 51.59 ಮುಟ್ಟಿರುವ ಕಾರಣ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬೆಲೆ ಏರಿಕೆ ಮಾಡಿವೆ.

ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್​ಗೆ 49, ಮುಂಬೈ ಮತ್ತು ಚೆನ್ನೈಗಳಲ್ಲಿ 48, ಕೋಲ್ಕತದಲ್ಲಿ 53 ಪೈಸೆ ಹೆಚ್ಚಳವಾಗಿದೆ. ಡೀಸೆಲ್ ದರ ಕೂಡ ಈ ಮಹಾನಗರಗಳಲ್ಲಿ ಕ್ರಮವಾಗಿ 59, 62, 59 ಮತ್ತು 64 ಪೈಸೆ ಏರಿಕೆಯಾಗಿದೆ.

ಗುರುವಾರ ಪೆಟ್ರೋಲ್ ದರ 38 ಮತ್ತು ಡೀಸೆಲ್ 29 ಪೈಸೆ ಏರಿಕೆಯಾಗಿತ್ತು. ಶುಕ್ರವಾರ ಪೆಟ್ರೋಲ್ 19 ಹಾಗೂ ಡೀಸೆಲ್ 28 ಪೈಸೆ, ಶನಿವಾರ ಪೆಟ್ರೋಲ್ 20 ಮತ್ತು ಡೀಸೆಲ್ 31 ಪೈಸೆ ಹೆಚ್ಚಳವಾಗಿತ್ತು. ಕಳೆದ ಅಕ್ಟೋಬರ್​ನಲ್ಲಿ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರಲ್​ಗೆ 86 ಡಾಲರ್ ಗಡಿ ದಾಟಿದ್ದರಿಂದ ಭಾರತದಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ತಲುಪಿ ಬಳಿಕ ಸತತ ಇಳಿಕೆ ಕಂಡಿತ್ತು.