ತೈಲ ಬೆಲೆ ಇಳಿಸುವವರ್ಯಾರು?

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಪಕ್ಷಗಳು, ವಿವಿಧ ಸಂಘಟನೆಗಳು ಸೋಮವಾರವಷ್ಟೇ ಬಂದ್ ನಡೆಸಿದವು. ತೈಲ ಬೆಲೆ ಏರಿಕೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದರು. ಆದರೆ ಏರುತ್ತಿರುವ ಬೆಲೆಯನ್ನು ಯಾರು, ಹೇಗೆ ಇಳಿಸಬೇಕು ಎಂಬುದು ಈಗಿನ ಪ್ರಶ್ನೆಯಾಗಿದೆ. ತೈಲದ ಮೇಲಿನ ತೆರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಆದಾಯದ ದೊಡ್ಡ ಮೂಲವಾಗಿದೆ. ತೆರಿಗೆ ಇಳಿಕೆ ಮಾಡಿದರೆ ಬೊಕ್ಕಸಕ್ಕೆ ಭಾರಿ ಪೆಟ್ಟು ಬೀಳುತ್ತದೆ. ಹೀಗಾಗಿ ಸರ್ಕಾರಗಳು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿವೆ. ತೈಲ ದರ ಏಕೆ ಏರುತ್ತಿದೆ? ಕೇಂದ್ರ ಹಾಗೂ ರಾಜ್ಯಗಳ ತೆರಿಗೆ ಎಷ್ಟು? ಮತ್ತಿತರ ವಿವರಗಳ ಸಮಗ್ರ ಮಾಹಿತಿ ಇಲ್ಲಿದೆ.

ಕೇಂದ್ರದ ಸುಂಕ ಕಡಿತ ಅನುಮಾನ

ಏರುತ್ತಿರುವ ಇಂಧನ ಬೆಲೆಗೆ ತುಸು ಕಡಿವಾಣ ಹಾಕಲು ರಾಜಸ್ಥಾನ, ಆಂಧ್ರಪ್ರದೇಶ ಸರ್ಕಾರ ಈಗಾಗಲೇ ಶೇಕಡ 2 ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಇಳಿಕೆ ಮಾಡಿವೆ. ಕೇಂದ್ರ ಸರ್ಕಾರವೂ ತೈಲದ ಮೇಲಿನ ಸುಂಕ ಇಳಿಕೆ ಮಾಡಬೇಕು ಎಂದು ಸಾಕಷ್ಟು ಒತ್ತಡ ಕೇಳಿಬರುತ್ತಿದೆ. ಆದರೆ, ವ್ಯಾಟ್ ಇಳಿಕೆ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ತೆರಿಗೆ ಇಳಿಕೆ ಮಾಡಿದರೆ ಕೇಂದ್ರ ಸರ್ಕಾರಕ್ಕೆ ಅಪಾರ ಪ್ರಮಾಣದ ಆದಾಯ ಕೊರತೆ ಉಂಟಾಗುತ್ತದೆ. ಇದರಿಂದ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಭಾರಿ ಹಿನ್ನಡೆ ಉಂಟಾಗುತ್ತದೆ. ಇದರಿಂದ ಕೋಟ್ಯಂತರ ಜನರಿಗೆ ತೊಂದರೆ ಎದುರಾಗುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿ ತೆರಿಗೆ ಇಳಿಕೆ ಮಾಡದಿರಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

2 ರೂ. ಇಳಿಸಿದ್ರೆ 30,000 ಕೋಟಿ ನಷ್ಟ

ಕೇಂದ್ರ ಸರ್ಕಾರ ಪೆಟ್ರೋಲ್ ಪ್ರತಿ ಲೀಟರ್​ಗೆ -ಠಿ; 2 ತೆರಿಗೆ ಇಳಿಕೆ ಮಾಡಿದರೆ ಒಟ್ಟಾರೆ ಸುಮಾರು -ಠಿ; 30,000 ಕೋಟಿ ಆದಾಯ ಕೊರತೆ ಉಂಟಾಗಲಿದೆ. ರಾಜ್ಯಗಳು ಸ್ವಯಂ ಪ್ರೇರಿತವಾಗಿ ತೆರಿಗೆ ಇಳಿಕೆ ಮಾಡಿದರೆ, ಕೇಂದ್ರದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಕೇಂದ್ರ ಸರ್ಕಾರ ಇಂಧನದ ಮೇಲೆ ಸಂಗ್ರಹಿಸಿದ ತೆರಿಗೆಯ ಶೇ. 40ಕ್ಕಿಂತ ಹೆಚ್ಚಿನ ಪ್ರಮಾಣವನ್ನು ಅನುದಾನದ ರೂಪದಲ್ಲಿ ರಾಜ್ಯ ಸರ್ಕಾರಗಳಿಗೆ ನೀಡುತ್ತದೆ. ಒಂದು ವೇಳೆ ಕೇಂದ್ರದ ಆದಾಯವೇ ಇಳಿಕೆಯಾದರೆ, ರಾಜ್ಯಗಳಿಗೆ ಅನುದಾನ ಹಂಚಿಕೆ ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಷಾ, ಪ್ರಧಾನ್ ಮಾತುಕತೆ

ತೈಲ ಬೆಲೆ ಏರಿಕೆ ನಿಯಂತ್ರಣ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್ ಮಹತ್ವದ ಮಾತುಕತೆ ನಡೆಸಿದ್ದಾರೆ. ರೂಪಾಯಿ ಕುಸಿತ ಹಾಗೂ ಕಚ್ಚಾತೈಲ ಬೆಲೆ ಏರಿಕೆಯಿಂದಾಗಿ ದೇಶದ ವಿತ್ತೀಯ ಕೊರತೆ ಹಾಗೂ ಚಾಲ್ತಿ ಖಾತೆಯ ಕೊರತೆಯೂ ಹೆಚ್ಚಾಗಲಿದೆ. ತೆರಿಗೆ ಇಳಿಕೆ ಮಾತ್ರ ಇದಕ್ಕೆ ಪರಿಹಾರ ಅಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಜಿಎಸ್​ಟಿಗೆ ಬಂದರೂ ಅಸಾಧ್ಯ?

ತೈಲ ಬೆಲೆಯನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವ್ಯಾಪ್ತಿಗೆ ತಂದರೆ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂದು ಹಲವರು ವಾದಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್​ನ್ನು ಜಿಎಸ್​ಟಿ ವ್ಯಾಪ್ತಿಗೆ ತರಲು ಸರ್ಕಾರದ ಮೇಲೆ ಸಾಕಷ್ಟು ಒತ್ತಡವೂ ಬರುತ್ತಿದೆ. ಒಂದು ವೇಳೆ ತೈಲ ಬೆಲೆ ಜಿಎಸ್​ಟಿ ವ್ಯಾಪ್ತಿಗೆ ಬಂದರೂ, ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬರುವುದಿಲ್ಲ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ತೈಲ ದರ ಜಿಎಸ್​ಟಿ ವ್ಯಾಪ್ತಿಗೆ ಬಂದರೆ ಗರಿಷ್ಠ ತೆರಿಗೆ ಶೇ. 28ರ ವರೆಗೆ ವಿಧಿಸಬಹುದು. ಇದರ ಹೊರತಾಗಿ ಇತರ ಮೇಲ್ತೆರಿಗೆ, ಸುಂಕಗಳನ್ನು ವಿಧಿಸಲು ಜಿಎಸ್​ಟಿ ಮಂಡಳಿ ಹಾಗೂ ರಾಜ್ಯ ಸರ್ಕಾರಗಳಿಗೆ ಅವಕಾಶವಿದೆ. ಹೀಗಾಗಿ ತೈಲ ದರ ಮೇಲಿನ ಸುಂಕದಲ್ಲಿ ಹೆಚ್ಚಿನ ಬದಲಾವಣೆ ಆಗುವುದು ಅನುಮಾನ. ಕೆಲ ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಕೂಡ ಈ ವಿಚಾರವನ್ನು ಸ್ಪಷ್ಟಪಡಿಸಿದ್ದರು.

ಪೆಟ್ರೋಲ್, ಡೀಸೆಲನ್ನು ಜಿಎಸ್​ಟಿ ವ್ಯಾಪ್ತಿಗೆ ತರಲು ಎಲ್ಲ ರಾಜ್ಯಗಳ ವಿರೋಧ ಇದೆ. ಜಿಎಸ್​ಟಿಗೆ ತಂದರೆ ಶೇಕಡ 28 ತೆರಿಗೆ ಹಾಕಬಹುದು, ಅದರ ಜತೆಗೆ ರಾಜ್ಯಗಳು ಶೇ.15 ಸೆಸ್ ಹಾಕಲು ಅವಕಾಶ ಇದೆ. ಆಗ ಬೆಲೆ ಸಾಕಷ್ಟು ಕಡಿಮೆಯಾಗುತ್ತದೆ. ಕೇಂದ್ರದ ಅಬಕಾರಿ ಸುಂಕ, ರಾಜ್ಯಗಳ ಮಾರಾಟ ತೆರಿಗೆ ಸೇರಿಸಿದರೆ ಮೂಲ ಬೆಲೆಯ ಶೇ. 90 ತೆರಿಗೆ ಆಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಾಕಷ್ಟು ಆದಾಯ ಬರುತ್ತಿದೆ. ಕೇಂದ್ರ ಸರ್ಕಾರ ಐದು ವರ್ಷಗಳಿಗೆ ಜಿಎಸ್​ಟಿ ನಷ್ಟದ ಪರಿಹಾರ ಬೇರೆ ಎಲ್ಲ ರಾಜ್ಯಗಳಿಗೂ ತುಂಬಿ ಕೊಡಬೇಕಾಗಿದೆ. ಆದ್ದರಿಂದ ಜಿಎಸ್​ಟಿ ವ್ಯಾಪ್ತಿಗೆ ತಂದು ಆದಾಯ ಕಡಿಮೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಸಹ ಸಿದ್ಧವಿಲ್ಲ. ಇಂತಹ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯಗಳು ತೆರಿಗೆ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವುದು ಮಾತ್ರ ಪರಿಹಾರವಾಗಿದೆ.

| ಬಿ.ಟಿ. ಮನೋಹರ್ ತೆರಿಗೆ ಸಲಹೆಗಾರರು

ತೈಲ ತೆರಿಗೆ ವಿವರ

ಪೆಟ್ರೋಲ್ ಹಾಗೂ ಡೀಸೆಲ್​ಗೆ ಕೇಂದ್ರ ಸರ್ಕಾರ ವಿಧಿಸುವ ವ್ಯಾಟ್, ಸುಂಕ ದೇಶಾದ್ಯಂತ ಒಂದೇ ಆಗಿದ್ದರೂ, ರಾಜ್ಯಗಳು ವಿಭಿನ್ನ ಪ್ರಮಾಣದಲ್ಲಿ ತೆರಿಗೆ ವಿಧಿಸುತ್ತಿವೆ. ಪ್ರಸ್ತುತ ಪೆಟ್ರೋಲ್​ಗೆ ವಾಸ್ತವ ವೆಚ್ಚದ ಮೇಲೆ ಶೇ. 50 ತೆರಿಗೆ ವಿಧಿಸಲಾಗುತ್ತಿದ್ದರೆ, ಡೀಸೆಲ್​ಗೆ ಶೇ. 40 ತೆರಿಗೆ ವಿಧಿಸಲಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತೈಲ ಬೆಲೆಯ ತೆರಿಗೆ ವಿವರ ಇಲ್ಲಿದೆ.

 

 

 

 

 

 

 

ಪ.ಬಂಗಾಳದಲ್ಲಿ 1 ರೂ. ಇಳಿಕೆ

ಆಂಧ್ರಪ್ರದೇಶ ಹಾಗೂ ರಾಜಸ್ಥಾನ ಸರ್ಕಾರ ತೈಲ ಮೇಲಿನ ತೆರಿಗೆಯನ್ನು ಶೇ. 2 ಕಡಿಮೆ ಮಾಡಿರುವ ಬೆನ್ನಲ್ಲೇ, ಪಶ್ಚಿಮ ಬಂಗಾಳ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು -ಠಿ;1 ಕಡಿತ ಮಾಡಿದೆ. ತಾತ್ಕಾಲಿಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಕೂಡ ತೆರಿಗೆ ಇಳಿಸಲಿ ಎಂದು ಸಿಎಂ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಲೀಟರ್​ಗೆ 90 ರೂ.!

ಮಹಾರಾಷ್ಟ್ರದ ಪರಭಣಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ 90.11 ರೂ. ತಲುಪಿ ದಾಖಲೆ ನಿರ್ವಿುಸಿದೆ. ದೇಶದಲ್ಲೇ ಇದು ಅತಿ ಗರಿಷ್ಠ ಬೆಲೆಯಾಗಿದೆ. ಮುಂಬೈನಿಂದ ಸುಮಾರು 500 ಕಿ.ಮೀ ದೂರದಲ್ಲಿರುವ ಮರಾಠವಾಡಾದ ಪ್ರದೇಶ ಇದಾಗಿದೆ. ಕಳೆದ 15 ದಿನಗಳಿಂದ ಸತತ ಏರಿಕೆ ಕಂಡ ತೈಲ ದರ ಈಗ ದಾಖಲೆ ಹಂತ ತಲುಪಿದೆ ಎಂದು ಅಲ್ಲಿನ ಡೀಲರ್​ಗಳು ಮಾಹಿತಿ ನೀಡಿದ್ದಾರೆ.