ದೇಶಾದ್ಯಂತ ಇಳಿದ ಪೆಟ್ರೋಲ್​, ಡೀಸೆಲ್​ ಬೆಲೆ: ರಾಜ್ಯದಲ್ಲಿ ಮಾತ್ರ ಏರಿಕೆ

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ದರ ಸತತ ಎರಡನೇ ದಿನ ಶನಿವಾರವು ಕಡಿತಗೊಂಡಿದ್ದು, ದರ ಪರಿಷ್ಕರಣೆ ನಂತರ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ 15-16 ಪೈಸೆ ಕಡಿಮೆಯಾಗಿದ್ದರೆ, ಡೀಸೆಲ್‌ 18-20 ಪೈಸೆ ಅಗ್ಗವಾಗಿದೆ.

ಬೆಂಗಳೂರಿನಲ್ಲಿ ಇಂಧನ ಬೆಲೆ ಇಳಿಕೆಗೆ ಸಾಕ್ಷಿಯಾಗಿದ್ದರೂ ಕೂಡ ರಾಜ್ಯ ಸರ್ಕಾರವು ತೆರಿಗೆ ಏರಿಸಿರುವುದರ ಪರಿಣಾಮವಾಗಿ ಲೀಟರ್‌ ಪೆಟ್ರೋಲ್‌ಗೆ 1.52 ರೂ. ಏರಿಕೆಯಾಗಿ 70.53 ರೂ.ಗಳಷ್ಟಿದೆ. ಇನ್ನು ಡೀಸೆಲ್‌ ಬೆಲೆಯಲ್ಲೂ 1.50 ರೂ. ಏರಿಕೆಯಾಗಿ 64.30 ರೂ.ಗೆ ಮಾರಾಟವಾಗುತ್ತಿದೆ.

ನವದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ಗೆ 15 ಪೈಸೆ ಕಡಿಮೆಯಾಗುವ ಮೂಲಕ 68.29 ರೂ.ಗಳಷ್ಟಿದ್ದರೆ, ಡೀಸೆಲ್‌ 18 ಪೈಸೆ ಇಳಿಕೆಯಾಗಿ 62.86 ರೂ.ಗಳಿಗೆ ಮಾರಾಟವಾಗುತ್ತಿದೆ. ಕಳೆದ ಒಂದು ವರ್ಷದಲ್ಲಿಯೇ ಅತಿ ಕಡಿಮೆ ಬೆಲೆಗೆ ಪೆಟ್ರೋಲ್‌ ತಲುಪಿದ್ದು, ಡೀಸೆಲ್‌ ಕೂಡ ಒಂಬತ್ತು ತಿಂಗಳಲ್ಲಿ ಕಡಿಮೆ ಬೆಲೆಗೆ ಇಳಿಕೆಯಾಗಿದೆ.

ಮುಂಬೈನಲ್ಲಿ ಲೀ. ಪೆಟ್ರೋಲ್‌ 73.95 ರೂ.ಗೆ ಮಾರಾಟವಾಗುತ್ತಿದ್ದು, 15 ಪೈಸೆ ಕಡಿಮೆಯಾಗಿದೆ. ಇನ್ನು ಡೀಸೆಲ್‌ ಲೀ.ಗೆ 20 ಪೈಸೆ ಕಡಿಮೆಯಾಗಿ 65.14 ರೂ.ಗಳಷ್ಟಿದೆ.

ಚೆನ್ನೈನಲ್ಲಿ ಪೆಟ್ರೋಲ್‌ ಲೀ.ಗೆ 16 ಪೈಸೆ ಕಡಿಮೆಯಾಗಿ 70.85. ರೂ.ಗಳಿದ್ದರೆ, ಲೀಟರ್‌ ಡೀಸೆಲ್‌ 65.72 ರೂ.ಗಳಿಗೆ ಮಾರಾಟವಾಗುವ ಮೂಲಕ 19 ಪೈಸೆ ಇಳಿಕೆಯಾಗಿದೆ. ಅದೇ ರೀತಿ ಕೋಲ್ಕತಾದಲ್ಲಿಯೂ 15 ಪೈಸೆ ಕಡಿಮೆಯಾಗಿ 70.43 ರೂ.ಗೆ ಪೆಟ್ರೋಲ್‌ ಮಾರಾಟವಾಗುತ್ತಿದ್ದು, ಡೀಸೆಲ್‌ ಪ್ರತಿ ಲೀಟರ್‌ಗೆ 18 ಪೈಸೆ ಕಡಿಮೆಯಾಗಿ 64.03 ರೂ.ಗಳಷ್ಟಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಕಳೆದ ಅಕ್ಟೋಬರ್‌ಗೆ ಹೋಲಿಸಿದರೆ ಶೇ. 40ರಷ್ಟು ಇಳಿಕೆಯಾಗುತ್ತಿರುವ ಬೆನ್ನಲ್ಲೇ ಇಂಧನ ಬೆಲೆಯಲ್ಲೂ ಕೂಡ ಶೇ. 20ರಷ್ಟು ಇಳಿಕೆ ಕಾಣುತ್ತಿದೆ. (ಏಜೆನ್ಸೀಸ್)

One Reply to “ದೇಶಾದ್ಯಂತ ಇಳಿದ ಪೆಟ್ರೋಲ್​, ಡೀಸೆಲ್​ ಬೆಲೆ: ರಾಜ್ಯದಲ್ಲಿ ಮಾತ್ರ ಏರಿಕೆ”

  1. ರೈತರ ಉದ್ಧಾರಕ್ಕೆ ಇಂತಹ ದ್ವಂದ್ವೋದ್ದೇಶಗಳಿಂದಲೇ ತಾನೆ ಸರ್ಕಾರಕ್ಕೆ ಅನುಕೂಲ. ಒಬ್ಬರ ಹೊಟ್ಟೆಯ ಮೇಲೆ ಹೊಡೆದು ಇನ್ನೊಬ್ಬರ ಹೊಟ್ಟೆಯನ್ನು ತುಂಬಿಸುವ ವಿವಿದೋದ್ಧೇಶಗಳಿಂದ ಕೂಡಿದ ಯೋಜನೆಗಳೇ ಜಾಸ್ತಿ.

Comments are closed.