ಮಹಾರಾಷ್ಟ್ರದಲ್ಲಿ ಚಿನ್ನದಂತಾಗಿದೆ ಪೆಟ್ರೋಲ್​; 91ರೂ.ಗಳನ್ನೂ ಮೀರಿದೆ ತೈಲ ಬೆಲೆ

ಮುಂಬೈ: ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಪೆಟ್ರೋಲ್​ ದರ 91 ರೂಪಾಯಿಗಳಿಗೆ ತಲುಪಿದೆ. ಮುಂಬೈ ಮಹಾನಗರದಲ್ಲೇ ಲೀಟರ್ ಪೆಟ್ರೋಲ್​​ ಬೆಲೆ 90ರ ಗಟಿ ದಾಟಿದ್ದು, ಇಡೀ ದೇಶದಲ್ಲೇ ಮಹಾರಾಷ್ಟ್ರದಲ್ಲಿ ತೈಲ ಅತ್ಯಂತ ದುಬಾರಿ ಎನಿಸಿಕೊಂಡಿದೆ.

ಮುಂಬೈ ನಗರದಲ್ಲಿ ಪೆಟ್ರೋಲ್​ ಬೆಲೆ ಲೀಟರ್​ಗೆ 90.08 ರೂ.ಗಳಿದ್ದರೆ, ಗ್ರಾಮಾಂತರ ಭಾಗದ ಕೆಲವು ಜಿಲ್ಲೆಗಳಲ್ಲಿ 90.91ರೂ.ಗಳಿವೆ. ಇದು ಮುಂದುವರಿದು 92 ರೂ.ಗಳಿಗೆ ತಲುಪುವ ಸಾಧ್ಯತೆಗಳೂ ನಿಚ್ಚಳವಾಗಿದೆ.

ಮಹಾರಾಷ್ಟ್ರದ ನಗರಗಳಾದ ನಂದೇಡ್​ನಲ್ಲಿ 91.61 ರೂ., ಅಮರಾವತಿಯಲ್ಲಿ 91.31 ರೂ., ರತ್ನಗಿರಿಯಲ್ಲಿ 91.14 ರೂ, ಜಲಗೋನ್​ನಲ್ಲಿ 91.01ರೂ.ಗಳಿಗೆ ಲೀಟರ್​ ಪೆಟ್ರೋಲ್​ ಮಾರಾಟವಾಗುತ್ತಿದೆ ಎಂದು ಮಹಾರಾಷ್ಟ್ರ ಪೆಟ್ರೋಲ್​ ಡೀಲರ್ಸ್​​ ಅಸೋಸಿಯೇಷನ್​ನ ಅಧ್ಯಕ್ಷ ಉದಯ್​ ಲೋದ್​ ತಿಳಿಸಿದ್ದಾರೆ.

ಸೋಮವಾರ ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ 5 ರಿಂದ 12 ಪೈಸೆಯಷ್ಟು ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್​ ಬೆಲೆ 82.72 ರೂಗಳಿದ್ದರೆ, ಕೋಲ್ಕತಾದಲ್ಲಿ 84.54 ರೂ.ಗಳಿವೆ. ಚೆನ್ನೈನಲ್ಲಿ 85.99 ರೂಗಳಾಗಿದೆ.

ಬೆಂಗಳೂರಿನಲ್ಲಿ ಇಂದು ಲೀಟರ್​ ಪೆಟ್ರೋಲ್​ ಬೆಲೆ 83.37 ರೂಪಾಯಿಗಳಾಗಿದ್ದು, 11 ಪೈಸೆ ಏರಿಕೆಯಾಗಿದೆ.