More

  ಪಾಕ್​ನಲ್ಲಿ ಭಗತ್​ಸಿಂಗ್ ಪುಣ್ಯತಿಥಿಗೆ ಭದ್ರತೆ ಕೋರಿ ಅರ್ಜಿ

  ಲಾಹೋರ್ ಕೋರ್ಟ್​ನಲ್ಲಿ 18ರಂದು ವಿಚಾರಣೆ ಶಾದ್ಮನ್​ಚೌಕ್​ನಲ್ಲಿ 23ಕ್ಕೆ ಕಾರ್ಯಕ್ರಮ

  ಲಾಹೋರ್: ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜ್​ಗುರು ಮತ್ತು ಸುಖ್​ದೇವ್ ಅವರ 93ನೇ ಪುಣ್ಯ ತಿಥಿ ಆಚರಣೆಗೆ ಸೂಕ್ತ ಬಿಗಿಭದ್ರತೆ ಒದಗಿಸಬೇಕು ಎಂದು ಪಾಕಿಸ್ತಾನದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

  ಶಾದ್ಮನ್​ಚೌಕ್​ನಲ್ಲಿ ಮಾ.23ರಂದು ಆಯೋಜಿಸ ಲಾಗಿರುವ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಭದ್ರತೆ ಒದಗಿಸಲು ಮತ್ತು ವಾಕ್- ಥ್ರೂ ಗೇಟ್​ಗಳನ್ನು ಅಳವಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಭಗತ್ ಸಿಂಗ್ ಮೆಮೋರಿಯಲ್ ಫೌಂಡೇಷನ್ ಪಾಕಿಸ್ತಾನದಿಂದ ಲಾಹೋರ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದ್ದು, ಸೋಮವಾರ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಬ್ರಿಟಿಷರು 1931ರಲ್ಲಿ ಭಗತ್ ಸಿಂಗ್ ಮತ್ತು ಇಬ್ಬರು ಸಹಚರರನ್ನು ಗಲ್ಲಿಗೇರಿಸಿದ ಶಾದ್ಮನ್​ಚೌಕ್​ನಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಉಗ್ರಗಾಮಿಗಳಿಂದ ಬೆದರಿಕೆಗಳು ಬರುತ್ತಿದ್ದು, ಭದ್ರತೆ ಒದಗಿಸುವಂತೆ ಸಲ್ಲಿಸಲಾದ ಮನವಿಯನ್ನು ಪಂಜಾಬ್ ಸರ್ಕಾರ ಪರಿಗಣಿಸಿಲ್ಲ ಎಂದು ಫೌಂಡೇಷನ್ ವಕೀಲ ಇಮ್ತಿಯಾಜ್ ರಶೀದ್ ಖುರೇಷಿ ಅರ್ಜಿಯಲ್ಲಿ ತಿಳಿಸಿದ್ದಾರೆ.

  ಶಾದ್ಮನ್ ಚೌಕ್​ಗೆ ಭಗತ್ ಹೆಸರು

  ಶಾದ್ಮನ್ ಚೌಕ್​ಗೆ ಭಗತ್ ಸಿಂಗ್ ಹೆಸರು ನಾಮಕರಣ ಮಾಡುವಂತೆ 2018ರಲ್ಲಿ ಎಲ್​ಎಚ್​ಸಿ ಸರ್ಕಾರಕ್ಕೆ ಸೂಚಿಸಿದ್ದ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಪಂಜಾಬ್ ಪ್ರಾಂತೀಯ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಲಾಹೋರ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿ, ಭಗತ್ ಹೆಸರು ಇಡುವಂತೆ ನಿರ್ದೇಶನ ನೀಡಿತ್ತು.

  ಎಕ್ಸ್ ಮರುಸ್ಥಾಪನೆಗೆ ಒತ್ತಾಯ

  ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ನಂತರ ಫೆ.17ರಂದು ನಿರ್ಬಂಧಿಸಲಾದ ಎಕ್ಸ್ ಸಾಮಾಜಿಕ ಮಾಧ್ಯಮ ವನ್ನು ಮರುಸ್ಥಾಪಿಸಬೇಕು ಎಂದು ಅಮ್ನೆಸ್ಟಿ ಇಂಟರ್​ನ್ಯಾಷನಲ್ (ಎಐ) ಪಾಕ್ ಸರ್ಕಾರಕ್ಕೆ ಒತ್ತಾಯಿಸಿದೆ. ಎಐ ಅಮೆರಿಕ ಮೂಲದ ಎನ್​ಜಿಒ ಆಗಿದ್ದು, ಇಂಟರ್ನೆಟ್ ಸೇವೆ ಸ್ಥಗಿತವು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಂತಿಯುತ ಸಭೆಯ ಹಕ್ಕುಗಳ ಮೇಲಿನ ದಾಳಿಯಾಗಿದ್ದು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ನಾಗರಿಕ ಸಮಾಜದ ಸಂಸ್ಥೆಗಳ ಸಮೂಹವು ಕಳವಳ ವ್ಯಕ್ತಪಡಿಸಿವೆ.

  ಏಳು ಪಾಕ್ ಸೈನಿಕರ ಸಾವು

  ಪೇಶಾವರ: ಅಫ್ಘಾನಿಸ್ತಾನ ಗಡಿಯಲ್ಲಿರುವ ಉತ್ತರ ವಜೀರಿಸ್ತಾನದ ಪ್ರಕ್ಷುಬ್ಧ ಬುಡಕಟ್ಟು ಜಿಲ್ಲೆಯ ಭದ್ರತಾ ಚೆಕ್​ಪೋಸ್ಟ್ ಮೇಲೆ ಶನಿವಾರ ನಡೆದ ಭಯೋತ್ಪಾದಕರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಇಬ್ಬರು ಪಾಕ್ ಸೇನಾ ಅಧಿಕಾರಿಗಳು, 5 ಸಿಬ್ಬಂದಿ ಸೇರಿ ಏಳು ಸೈನಿಕರು ಮೃತರಾಗಿದ್ದಾರೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ. ಮೀರ್ ಅಲಿ ಪ್ರದೇಶದಲ್ಲಿ ದಾಳಿ ಮಾಡಿದ ಎಲ್ಲ ಆರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಐಎಸ್​ಪಿಆರ್ ಮಾಹಿತಿ ನೀಡಿದೆ.

  ತರಾಟೆಗೆ ತೆಗೆದುಕೊಂಡ ಭಾರತ

  ವಿಶ್ವಸಂಸ್ಥೆ: ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ (ಯುಎನ್​ಜಿಎ) ಅಯೋಧ್ಯೆಯ ರಾಮಮಂದಿರ ಮತ್ತು ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ಬಗ್ಗೆ ಆಕ್ಷೇಪಾರ್ಹ ಟಿಪ್ಪಣಿ ಮಾಡಿದ ಪಾಕಿಸ್ತಾನವನ್ನು ಭಾರತ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಕೆಟ್ಟ ದಾಖಲೆ ಹೊಂದಿರುವ ಪಾಕ್, ಇಡೀ ಜಗತ್ತು ಪ್ರಗತಿ ಹೊಂದುತ್ತಿರುವಾಗ ಸ್ಥಗಿತಗೊಂಡಿದೆ ಎಂದು ವಿಶ್ವಸಂಸ್ಥೆಯ ಭಾರತದ ಕಾಯಂ ರಾಯಭಾರಿ ರುಚಿರಾ ಕಾಂಬೋಜ್ ವರ್ಣಿಸಿದ್ದಾರೆ. ಶುಕ್ರವಾರ ಯುಎನ್​ಜಿಎ ಪ್ಲೀನರಿ ಸಭೆಯಲ್ಲಿ ಪಾಕ್ ಮಂಡಿಸಿದ್ದ ‘ಇಸ್ಲಾಮೋಫೋಬಿಯಾ ವಿರುದ್ಧ ಹೋರಾಟದ ಕ್ರಮಗಳು’ ಗೊತ್ತುವಳಿ ಚರ್ಚೆ ವೇಳೆ ಪಾಕ್ ರಾಯಭಾರಿ ಮುನೀರ್ ಅಕ್ರಂ, ಮಂದಿರ ಮತ್ತು ಸಿಎಎ ಬಗ್ಗೆ ಪ್ರಸ್ತಾಪಿಸಿದ್ದರು. ಇದಕ್ಕೆ ಭಾರತ ಖಾರವಾಗಿ ಪ್ರತಿಕ್ರಿಯಿಸಿದೆ. ಭಾರತಕ್ಕೆ ಸಂಬಂಧಿತ ವಿಚಾರಗಳಲ್ಲಿ ಪಾಕ್ ನಿಯೋಗ ಸೀಮಿತ ಹಾಗೂ ದಾರಿ ತಪ್ಪಿದ ಧೋರಣೆ ಹೊಂದಿರುವುದು ದುರದೃಷ್ಟಕರ ಎಂದು ರುಚಿರಾ ಹೇಳಿದ್ದಾರೆ.

  ಟಿಕೆಟ್ ಕೈತಪ್ಪಿದೆ, ಇವನ ಬಳಿ ಹೇಗೆ ಕೆಲಸಕ್ಕಾಗಿ…. ಕಾರ್ಯಕರ್ತರಲ್ಲಿ ಪ್ರತಾಪ್ ಸಿಂಹ ಮನವಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts