More

    ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಪೆಟ್ ಸಿಟಿ ಸ್ಕ್ಯಾನ್​ಗೂ ಬರ

    ಬೆಂಗಳೂರು:  ವಿವಿಧ ಬಗೆಯ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಕಾಯಿಲೆಯ ನಿಖರಹಂತ ಅರಿತು ಚಿಕಿತ್ಸೆ ನೀಡಲು ರಾಜ್ಯದ ಯಾವ ಸರ್ಕಾರಿ ಆಸ್ಪತ್ರೆಗಳಲ್ಲೂ ಅತ್ಯಗತ್ಯವಾದ ‘ಪೆಟ್ ಸಿಟಿ ಸ್ಕ್ಯಾನ್’ ಯಂತ್ರದ ಸೌಲಭ್ಯವೇ ಇಲ್ಲ. ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ 25 ಸಾವಿರ ರೂ. ಶುಲ್ಕ ಪಾವತಿಸಿ ಪರೀಕ್ಷೆ ಮಾಡಿಸಿಕೊಳ್ಳಬೇಕಾದ ಸ್ಥಿತಿ ಇದೆ.

    ರಕ್ತ (ಲಿಂಫೋಮಾ) ಕ್ಯಾನ್ಸರ್, ಲುಕೇಮಿಯಾ, ಟಿ.ಬಿ, ಪಾರ್ಕೆಡೋಸಿಸ್​ನಂತಹ ಹೈಪರ್ ಆಕ್ಟೀವ್ ಸೋಂಕು ದೇಹದಲ್ಲಿ ಹರಡಿರುವುದನ್ನು ಸೂಕ್ಷ್ಮವಾಗಿ ಪತ್ತೆ ಹಚ್ಚಲು ಹಾಗೂ ಕ್ಯಾನ್ಸರ್​ನ ಹಂತಗಳನ್ನು ನಿಖರವಾಗಿ ತಿಳಿಯಲು ಪೆಟ್ ಸಿಟಿ ಸ್ಕ್ಯಾನ್ ಸಹಕಾರಿ. ಆದರೆ, ರಾಜ್ಯದ ಯಾವ ಸರ್ಕಾರಿ ಆಸ್ಪತ್ರೆಗಳಲ್ಲೂ ಈ ಸೇವೆ ಲಭ್ಯವಿಲ್ಲದ ಕಾರಣ ಬಡ ರೋಗಿಗಳಿಗೆ ಭಾರಿ ಹೊರೆಯಾಗಿ ಪರಿಣಮಿಸಿದೆ.

    ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಪ್ರತಿನಿತ್ಯ ಬರುವ ರೋಗಿಗಳ ಪೈಕಿ 80-100 ರೋಗಿಗಳಿಗೆ ‘ಪೆಟ್ ಸಿಟಿ ಸ್ಕ್ಯಾನ್’ ಪರೀಕ್ಷೆಯ ತುರ್ತು ಅಗತ್ಯವಿದೆ. ಆದರೆ, ಈ ಸೌಲಭ್ಯ ಸಿಗುತ್ತಿಲ್ಲ. ಪ್ರಸ್ತುತ ಆಸ್ಪತ್ರೆಯಲ್ಲಿ ಲ್ಯಾಬ್, ಸಿಟಿ ಸ್ಕ್ಯಾನ್  ಸೇರಿ ರೋಗ ಪರೀಕ್ಷೆಗೆ ಅಗತ್ಯ ಸೌಲಭ್ಯ ಇವೆ ಯಾದರೂ, ಕ್ಯಾನ್ಸರ್ ರೋಗದ ಹಂತ ಅರಿತು ನಿಖರ ಚಿಕಿತ್ಸೆ ನೀಡಲು ನೆರವಾಗುವ ‘ಪೆಟ್ ಸಿಟಿ ಸ್ಕ್ಯಾನ್’  ಇಲ್ಲ.

    1 ಯಂತ್ರದ ಬೆಲೆ 8 ಕೋಟಿ !: ‘ಪೆಟ್ ಸಿಟಿ ಸ್ಕ್ಯಾನ್ ’ಯಂತ್ರಕ್ಕೆ 7-8 ಕೋಟಿ ರೂ. ಅಗಲಿದೆ. ಇದೀಗ ಕಿದ್ವಾಯಿಯಲ್ಲಿ ಈ ಯಂತ್ರ ಅಳವಡಿಕೆಗೆ ಕಟ್ಟಡ ಸೇರಿ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಬಜೆಟ್​ನಲ್ಲಿ 15 ಕೋಟಿ ರೂ. ಮೀಸಲಿಟ್ಟಿದ್ದು, ಈಗಾಗಲೇ 10 ಕೋಟಿ ರೂ. ಬಿಡುಗಡೆ ಮಾಡಿದೆ. ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಮೇ-ಜೂನ್ ವೇಳೆಗೆ ಯಂತ್ರ ಅಳವಡಿಸಲಾಗುವುದು. ಅಲ್ಲಿಯವರೆಗೂ ರೋಗಿಗಳ ಅಗತ್ಯತೆಗೆ ಅನುಗುಣವಾಗಿ ಖಾಸಗಿ ಲ್ಯಾಬ್​ನಲ್ಲಿ ಒಡಂಬಡಿಕೆ ಮಾಡಿಕೊಂಡು ಅರ್ಧ ದರದಲ್ಲಿ (13 ಸಾವಿರ) ಸೌಲಭ್ಯ ಒದಗಿಸಲಾಗುತ್ತಿದೆ.

    ನಾಲ್ಕೈದು ತಿಂಗಳಲ್ಲಿ ಸೇವೆ ಲಭ್ಯ

    ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ವಿಸ್ತರಣೆಗೆ ಪೂರಕವಾಗಿ ಕಟ್ಟಡ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಏಪ್ರಿಲ್ ವೇಳೆಗೆ ‘ಬೋನ್ ಮ್ಯಾರೋ ಟ್ರಾನ್ಸ್​ಪ್ಲಾಂಟ್’ ಘಟಕ ಹಾಗೂ ಮೇ-ಜೂನ್ ವೇಳೆಗೆ ‘ಪೆಟ್ ಸಿಟಿ ಸ್ಕ್ಯಾನ್’   ವಿಭಾಗ ಕಾರ್ಯಾರಂಭವಾಗಲಿದೆ. ಈ ಎರಡೂ ಸೇವೆಗಳನ್ನು ಹೊಂದಿದ ದೇಶದ ಏಕೈಕ ಸರ್ಕಾರಿ ಅಸ್ಪತ್ರೆ ಎಂಬ ಹೆಗ್ಗಳಿಕೆಗೆ ಕಿದ್ವಾಯಿ ಪಾತ್ರವಾಗಲಿದೆ.

    ಪೆಟ್ ಸಿಟಿ ಸ್ಕ್ಯಾನ್  ಪರೀಕ್ಷೆಗೆ ಖಾಸಗಿಯಲ್ಲಿ 25 ಸಾವಿರ ರೂ. ಆಗಲಿದೆ. ಕಿದ್ವಾಯಿಯಲ್ಲಿ ಸೇವೆ ಶುರುವಾದರೆ ಬಡವರಿಗೆ ಉಚಿತವಾಗಿ ಸೇವೆ ಒದಗಿಸಲು ಈ ಪರೀಕ್ಷೆಗಳನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಸೇರಿಸುವಂತೆ ಯೋಜನೆಯ ನಿರ್ವಹಣೆ ಮಾಡುತ್ತಿರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್​ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

    | ಡಾ. ಸಿ.ರಾಮಚಂದ್ರ, ನಿರ್ದೇಶಕ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ 

    ಪಂಕಜ ಕೆ.ಎಂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts