ಮದುವೆ ಸಮಾರಂಭದ ಹೋಟೆಲ್ ಮೇಲೆ ಬಂಡೆ ಕುಸಿದು 15 ಮಂದಿ ಸಾವು ​

ಪೆರು: ಮದುವೆ ಸಮಾರಂಭ ನಡೆಯುತ್ತಿದ್ದ ಹೋಟೆಲ್​ ಮೇಲೆ ಹಠಾತ್ತನೆ​ ಬಂಡೆ ಮತ್ತು ಮಣ್ಣಿನ ರಾಶಿ ಕುಸಿದು ಸುಮಾರು 15 ಮಂದಿ ಸಾವಿಗೀಡಾಗಿರುವ ಘಟನೆ ದಕ್ಷಿಣ ಅಮೆರಿಕದ ಪೆರು ರಾಷ್ಟ್ರದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಪೆರು ರಾಷ್ಟ್ರದ ಅಬಾನ್​ಕೇ ನಗರದ ಆಂಡಿಯನ್​ ಪ್ರದೇಶದಲ್ಲಿರುವ ಅಲ್ಹಂಬ್ರಾ ಹೋಟೆಲ್​ನಲ್ಲಿ ಭಾನುವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಮದುವೆ ಸಮಾರಂಭದ ಕಾರ್ಯಕ್ರಮದಲ್ಲಿ ಡಾನ್ಸ್​ ಮಾಡುತ್ತಿದ್ದ ಸುಮಾರು 12 ಮಂದಿ ಕುಸಿದ ಗೋಡೆ ಹಾಗೂ ಛಾವಣಿಯ ಅಡಿಯಲ್ಲಿ ಸಿಲುಕ್ಕಿದ್ದರು. ಅಲ್ಲದೆ, ಅವಶೇಷಗಳ ಅಡಿಯಲ್ಲಿ ಸಿಲುಕಿ ಗಾಯಗೊಂಡಿದ್ದ 30 ಮಂದಿಯನ್ನು ಹೊರಗೆಳೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಲ್ಲಿನ ನಾಗರಿಕ ರಕ್ಷಣಾ ಇಲಾಖೆಯ ಮುಖ್ಯಸ್ಥ ಜಾರ್ಜ್ ಚಾವೆಜ್ ತಿಳಿಸಿದ್ದಾರೆ.

ಶನಿವಾರ ನಡೆದ ವಿವಾಹ ಸಮಾರಂಭಕ್ಕೆ ಸುಮಾರು 100 ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಭಾನುವಾರ ಬೆಳಗ್ಗೆ ನಡೆದ ಅವಘಡದಿಂದಾಗಿ 15 ಮಂದಿ ಸಾವಿಗೀಡಾಗಿ 34 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಬಾನ್​ಕೇ ನಗರದ ಮೇಯರ್ ಎವಾರಿಸ್ಟೊ ರಾಮೋಸ್​ ತಿಳಿಸಿದ್ದಾರೆ.

ಗೋಡೆ ಕುಸಿದ ಕ್ಷಣಾರ್ಧದಲ್ಲೆ 13 ಮಂದಿ ಸ್ಥಳದಲ್ಲೇ ಹಸುನೀಗಿದ್ದಾರೆ. ಭಾರಿ ಮಳೆಯಿಂದಾಗಿ ಹೋಟೆಲ್​ ಮೇಲೆ ಬಂಡೆ ಹಾಗೂ ಮಣ್ಣಿನ ರಾಶಿ ಕುಸಿದಿದ್ದು, ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ರಾತ್ರಿಯೆಲ್ಲಾ ರಕ್ಷಣಾ ಕಾರ್ಯಚರಣೆ ನಡೆಸಿ ಅವಶೇಷಗಳ ಅಡಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ.​ ಅಲ್ಹಂಬ್ರಾ ಹೋಟೆಲ್​ ಅನ್ನು ಬೆಟ್ಟದ ತಪ್ಪಲಿನಲ್ಲಿ ನಿರ್ಮಿಸಿರುವುದರಿಂದ ಈ ಅವಘಡ ಸಂಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)