ಮೊದಲ ಟೆಸ್ಟ್​ ಸೋಲಿನ ಮುಖಭಂಗಕ್ಕೆ 2ನೇ ಟೆಸ್ಟ್​ನಲ್ಲಿ​ ಉತ್ತರ: ಆಸಿಸ್ ದಾಳಿಗೆ ಭಾರತ ತತ್ತರ

ಪರ್ತ್: ಪ್ರವಾಸಿ ಭಾರತ ವಿರುದ್ಧ ಮೊದಲ ಟೆಸ್ಟ್​ ಪಂದ್ಯ ಸೋತು ಭಾರಿ ಮುಖಭಂಗ ಅನುಭವಿಸಿದ್ದ ಆಸ್ಟ್ರೇಲಿಯಾ ತಂಡ ಎರಡನೇ ಟೆಸ್ಟ್​ ಪಂದ್ಯದಲ್ಲಿ 146 ರನ್​ಗಳಿಂದ ಜಯಭೇರಿ ಬಾರಿಸುವ ಮೂಲಕ ತಕ್ಕ ಉತ್ತರ ನೀಡಿದ್ದು, 1-1 ಅಂತರದಲ್ಲಿ ಟೆಸ್ಟ್​ ಟೂರ್ನಿಯಲ್ಲಿ ಸಮಬಲ ಸಾಧಿಸಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಆಸಿಸ್​ ಪಡೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 326 ರನ್​ ಕಲೆ ಹಾಕಿತ್ತು. ಇದನ್ನು ಬೆನ್ನತ್ತಿದ್ದ ಟೀಂ ಇಂಡಿಯಾ 283 ರನ್​ಗೆ ಸರ್ವಪತನ ಕಂಡಿತ್ತು. 43 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಆಸಿಸ್​ ಪಡೆ ನಾಲ್ಕನೇ ದಿನದ ಭೋಜನ ವಿರಾಮ ನಂತರ ತನ್ನೆಲ್ಲ ವಿಕೆಟ್​ ಕಳೆದುಕೊಂಡು 243 ರನ್​ ಕಲೆಹಾಕಿತು. ಈ ಮೂಲಕ ಟೀಂ ಇಂಡಿಯಾ ಗೆಲುವಿಗೆ 287 ರನ್​ ಗುರಿ ನೀಡಿತ್ತು.

ಗುರಿ ಬೆನ್ನತ್ತಿದ್ದ ಭಾರತ ಕೇವಲ 140 ರನ್​ಗೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಐದನೇ ದಿನದ ಆರಂಭದಲ್ಲೇ ಆಸಿಸ್​ ಪಡೆಗೆ ಶರಣಾಯಿತು. ಈ ಮೂಲಕ ಆಸಿಸ್​ ಪಡೆ 146 ರನ್​ಗಳ ಭಾರಿ ಅಂತರದಿಂದ ಗೆಲುವು ದಾಖಲಿಸಿತು. ಟೀಂ ಇಂಡಿಯಾ ಪರ ರಾಹುಲ್​(0), ಮುರಳಿ ವಿಜಯ್​(20), ಚೇತೇಶ್ವರ ಪೂಜಾರ(4), ನಾಯಕ ವಿರಾಟ್​ ಕೊಹ್ಲಿ (17), ಅಂಜಿಕ್ಯಾ ರಹಾನೆ(30), ಹನುಮ ವಿಹಾರಿ(28), ರಿಷಭ್​ ಪಂತ್​(30), ಉಮೇಶ್​ ಯಾದವ್​(2), ಇಶಾಂತ್​ ಶರ್ಮಾ(0), ಜಸ್ಪ್ರಿತ್​ ಬೂಮ್ರಾ(0) ಹಾಗೂ ಮಹಮ್ಮದ್​ ಶಮಿ ಯಾವುದೇ ರನ್​ ಗಳಿಸದೇ ಅಜೇಯರಾಗಿ ಉಳಿದರು.

ಬ್ಲೂ ಬಾಯ್ಸ್​ ಆಸಿಸ್​ ಪಡೆಯ ಸಮರ್ಥ ಬೌಲಿಂಗ್​ ದಾಳಿಯನ್ನು ಎದುರಿಸಲು ವಿಫಲರಾದರು. ಆಸಿಸ್​ ಪರ ಮಿಚೆಲ್​ ಸ್ಟಾರ್ಕ್​ ಹಾಗೂ ನ್ಯಾಥನ್​ ಲ್ಯಾನ್​ ತಲಾ ಮೂರು ವಿಕೆಟ್​ ಕಬಳಿಸಿದರೆ, ಜೋಶ್​ ಹಜಾಲ್​ವುಡ್​ ಹಾಗೂ ಪ್ಯಾಟ್​ ಕ್ಯುಮ್ಮಿನ್ಸ್​ ತಲಾ ಎರಡು ವಿಕೆಟ್​​ ಪಡೆದುಕೊಂಡರು. (ಏಜೆನ್ಸೀಸ್​)

ಎರಡನೇ ಟೆಸ್ಟ್​ ಪಂದ್ಯ ಸೋತರೆ ನಾಯಕ ಕೊಹ್ಲಿ ಮಾಡಿದ ಈ ಎಡವಟ್ಟೆ ಕಾರಣ ಎನ್ನಬಹುದಂತೆ!

ಬೈದಾಟದ ನಡುವೆ ಮರೆತರು ಹೋರಾಟ!