ನಾಮಪತ್ರ ಸಲ್ಲಿಕೆ ಮೆರವಣಿಗೆಗೆ ಪೂರ್ವಾನುಮತಿ

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಮಾ.26 ಕೊನೇ ದಿನವಾಗಿದ್ದು, ಮಧ್ಯಾಹ್ನ 3 ಗಂಟೆಯೊಳಗೆ ಸಲ್ಲಿಸಬೇಕು. ನಾಮಪತ್ರ ಸಲ್ಲಿಸುವಾಗ ಕಚೇರಿಯೊಳಗೆ ಅಭ್ಯರ್ಥಿಯೊಂದಿಗೆ 4 ಜನಕ್ಕೆ ಮಾತ್ರ ಅವಕಾಶವಿರುತ್ತದೆ. ಮೆರವಣಿಗೆ ಇದ್ದಲ್ಲಿ ಪೂರ್ವಾನುಮತಿ ಪಡೆದುಕೊಳ್ಳಬೇಕು. ಕಚೇರಿಯಿಂದ 100 ಮೀಟರ್ ವ್ಯಾಪ್ತಿ ಅಂತರಕ್ಕೆ ಅಭ್ಯರ್ಥಿಗಳ ಮೆರವಣಿಗೆ ಇರಬೇಕು ಎಂದು ಕ್ಷೇತ್ರದ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಾ.23 ನಾಲ್ಕನೇ ಶನಿವಾರ, 24 ಭಾನುವಾರ ಸಾರ್ವಜನಿಕ ರಜಾ ದಿನವಾದರೂ, ಜಿಲ್ಲಾಧಿಕಾರಿ ಕೊಠಡಿಯಲ್ಲಿ ನಾಮಪತ್ರ ಸ್ವೀಕರಿಸಲಾಗುವುದು. 27ರಂದು ಬೆಳಗ್ಗೆ 11ರಿಂದ ನಾಮಪತ್ರ ಪರಿಶೀಲನೆ ನಡೆಯಲಿದೆ. 29ರ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಹಿಂಪಡೆದುಕೊಳ್ಳಲು ಕೊನೆಯ ದಿನಾಂಕವಾಗಿದೆ. ನಾಮಪತ್ರದೊಂದಿಗೆ 25 ಸಾವಿರ ರೂ.ಠೇವಣಿ ಪಾವತಿಸಬೇಕು. ಪ.ಜಾ/ಪ.ಪಂ ವರ್ಗ ಜಾತಿ ದೃಢಪತ್ರ ನೀಡಿ 12,500 ರೂ. ಪಾವತಿಸಬೇಕು. ಏ.18ರಂದು ಗುರುವಾರ ಬೆಳಗ್ಗೆ 7ರಿಂದ ಸಾಯಂಕಾಲ 6 ಗಂಟೆಯವರೆಗೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ 48 ಗಂಟೆಯೊಳಗೆ ಸೈನ್ಯದಲ್ಲಿ ಸೇವೆ ಸಲ್ಲಿಸುವ ಸೇವಾ ಮತದಾರರಿಗೆ ಇಟಿಬಿಎಸ್ ತಂತ್ರಾಂಶದ ಮೂಲಕ ಮತಪತ್ರ ರಚಿಸಿ ಆನ್‌ಲೈನ್ ಮೂಲಕ ಸಂಬಂಧಪಟ್ಟ ಸೈನ್ಯ ಘಟಕದ ಮುಖ್ಯಸ್ಥರಿಗೆ ರವಾನಿಸಲು ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರದಲ್ಲಿ 14,94,444 ಮತದಾರರಿದ್ದಾರೆ. ಎಲ್ಲ ಮತಗಟ್ಟೆಗಳಲ್ಲಿ ಮೂಲಸೌಕರ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಂಟ್ರೋಲ್‌ರೂಂ 24 ಗಂಟೆ ಕಾರ್ಯನಿರ್ವಹಿಸುತ್ತಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಕಂಡುಬಂದಲ್ಲಿ ಸಾರ್ವಜನಿಕರು 1950ಗೆ ಕರೆ ಮಾಡಿ ಮಾಹಿತಿ ನೀಡಲು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸುದ್ದಿಗೋಷ್ಠಿಯಲ್ಲಿದ್ದರು.

ಮತದಾನ ಬಹಿಷ್ಕಾರ ಸಲ್ಲ: ಎಲ್ಲರೂ ಮತದಾನದಲ್ಲಿ ಭಾಗವಹಿಸಬೇಕೆಂಬುದು ಜಿಲ್ಲೆಯ ಜನತೆಗೆ ನನ್ನ ಮನವಿ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹೇಳಿದ್ದಾರೆ.
ಮರಳು, ನೀರಿನ ಸಮಸ್ಯೆ ವಿಚಾರದಲ್ಲಿ ಮತದಾನ ಬಹಿಷ್ಕಾರದ ಕೂಗು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿದೆ. ಮರಳಿನ ವಿಚಾರದಲ್ಲಿ ಕಾನೂನಿನ ಪ್ರಕಾರ ನಡೆದುಕೊಳ್ಳಲಾಗುತ್ತಿದೆ. ಏನೇನು ಪ್ರಕ್ರಿಯೆಗಳು ನಡೆಯಬೇಕೋ ಅದು ಆಡಳಿತಾತ್ಮಕ, ಕಾನೂನು ವ್ಯಾಪ್ತಿಯೊಳಗೆ ನಡೆಯಲಿದೆ. ಜನರು ಈ ವಿಚಾರವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ನೀರಿನ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಸ್ವೀಪ್ ಸಮಿತಿ ಮೂಲಕ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಲಾಗುತ್ತಿದೆ. ಸಾರ್ವಜನಿಕರು ಮತದಾನ ಬಹಿಷ್ಕಾರದ ಯೋಚನೆ ಮಾಡಬಾರದು, ಇದು ಪ್ರಜಾಪ್ರಭುತ್ವದ ಹಬ್ಬ. ಎಂದು ಜಿಲ್ಲಾಧಿಕಾರಿ ಜನತೆಯಲ್ಲಿ ವಿನಂತಿಸಿದ್ದಾರೆ.

ಸರ್ವಜನೋತ್ಸವಕ್ಕೆ ನೀತಿ ಸಂಹಿತೆ ಬಿಸಿ: ಕಲ್ಸಂಕ ರಾಯಲ್ ಗಾರ್ಡನ್‌ನಲ್ಲಿ ಮಾ.17ರಂದು ನಡೆದ ಸರ್ವಜನೋತ್ಸವ ಸಮಾವೇಶದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದರೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಸರ್ವಜನೋತ್ಸವ ಕಾರ್ಯಕ್ರಮ ಆಯೋಜಕರು ರಾಜಕೀಯೇತರ ಸಮಾವೇಶ ನಡೆಸಲು ಪರವಾನಗಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಪಕ್ಷವೊಂದರ ಹೆಸರಿದ್ದ ಕಾರಣ, ಪರವಾನಗಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಲಾಗಿತ್ತು. ಸಂಘಟಕರು ಪಕ್ಷದ ಹೆಸರನ್ನು ತೆಗೆದ ಮೇಲೆ ಪರವಾನಗಿ ನೀಡಲಾಗಿತ್ತು. ರಾಜಕಾರಣಿಗಳು ಭಾಗವಹಿಸಿದ್ದರೆ ಸಮಾವೇಶದ ಖರ್ಚುವೆಚ್ಚಗಳನ್ನು ಅವರ ಪಕ್ಷಗಳ ಖರ್ಚಿನ ಲೆಕ್ಕಕ್ಕೆ ಹಾಕುವುದಾಗಿ ಅವರಿಗೆ ತಿಳಿಸಲಾಗಿತ್ತು. ಆಯೋಗದ ವೀಕ್ಷಕರು ಸಂಪೂರ್ಣ ಕಾರ್ಯಕ್ರಮವನ್ನು ಚಿತ್ರೀಕರಿಸಿದ್ದು, ವಿಡಿಯೋವನ್ನು ಪರಿಶೀಲಿಸಲಾಗುತ್ತದೆ. ಸಮಾವೇಶದಲ್ಲಿ ರಾಜಕಾರಣಿಗಳು ಭಾಗ ವಹಿಸಿ, ರಾಜಕೀಯ ಭಾಷಣ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದರೆ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಬಿಜೆಪಿಯೇತರ ಸರ್ವಜನೋತ್ಸವ: ಬಿಜೆಪಿಯೇತರ ರಾಜಕಾರಣಿಗಳು, ಪ್ರಗತಿಪರರು, ಚಿಂತಕರು ಭಾಗವಹಿಸಿದ್ದ ಸರ್ವಜನೋತ್ಸವ ಸಮಾವೇಶದಲ್ಲಿ ರಾಜಕೀಯ ಭಾಷಣ ವಿವಾದಕ್ಕೆ ಕಾರಣವಾಗಿದೆ. ಭಾಷಣದಲ್ಲಿ ರಾಜಕಾರಣಿಗಳು ಎಚ್ಚರ ವಹಿಸಿದ್ದರು. ಚಿಂತಕರು ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡರನ್ನು ಟೀಕಿಸಿ ಮಾತನಾಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ವಿಧಾನ ಪರಿಷತ್ತಿನ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಜೆಡಿಎಸ್ ನಾಯಕ ವೈ.ಎಸ್.ವಿ. ದತ್ತಾ, ಸಿಪಿಐಎಂ ನಾಯಕ ಬಾಲಕೃಷ್ಣ ಶೆಟ್ಟಿ ಸಮಾವೇಶದ ವೇದಿಕೆಯಲ್ಲಿದ್ದರು.

ಪ್ರತಿಯೊಬ್ಬ ಅಭ್ಯರ್ಥಿ 70 ಲಕ್ಷ ರೂ.ವರೆಗೆ ಮಾತ್ರ ಚುನಾವಣಾ ವೆಚ್ಚ ಮಾಡಲು ಅವಕಾಶ. ರಾಜಕೀಯ ಪಕ್ಷಗಳು ಮಾಡುವ ಖರ್ಚಿನ ಮೇಲೆ ನಿಗಾ ಇಡಲು ಎಕ್ಸ್‌ಪೆಂಡಿಚರ್ ಮಾನಿಟರ್ ಸೆಲ್, ಅಸಿಸ್ಟೆಂಟ್ ಎಕ್ಸ್‌ಪೆಂಡಿಚರ್ ವೀಕ್ಷಕರನ್ನು ನೇಮಿಸಲಾಗಿದೆ.
| ಹೆಪ್ಸಿಬಾ ರಾಣಿ ಕೊರ್ಲಪಾಟಿ, ಚುನಾವಣಾಧಿಕಾರಿ